ಮೆಟ್ರೊ ಪಿಲ್ಲರ್‌ ಕುಸಿತ ಪ್ರಕರಣ: ₹10 ಕೋಟಿ ಪರಿಹಾರಕ್ಕೆ ಮನವಿ; ಸರ್ಕಾರ, ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್‌ ನೋಟಿಸ್‌

ಪತ್ನಿ ಜೀವಂತವಾಗಿದ್ದರೆ 60 ವರ್ಷಕ್ಕೆ ನಿವೃತ್ತಿ ಪಡೆಯುವ ವೇಳೆಗೆ ಪ್ರತಿ ವರ್ಷವೂ ಶೇ.20ರಷ್ಟು ವೇತನ ಹೆಚ್ಚಳದೊಂದಿಗೆ ಒಟ್ಟು ₹4,99,20,000 ಸಂಪಾದಿಸುತ್ತಿದ್ದರು. ಹೀಗಾಗಿ, ₹20 ಲಕ್ಷ ಪರಿಹಾರ ಸೂಕ್ತವಲ್ಲ ಎಂದಿರುವ ಅರ್ಜಿದಾರರು.
Metro Pillar and Karnataka HC
Metro Pillar and Karnataka HC

ಬೆಂಗಳೂರಿನ ನಾಗವಾರದ ಬಳಿ ಮೆಟ್ರೊ ಪಿಲ್ಲರ್‌ ನಿರ್ಮಾಣಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಕುಸಿದು ತೇಜಸ್ವಿನಿ ಮತ್ತು ಅವರ ಪುತ್ರ ವಿಹಾನ್ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ₹10 ಕೋಟಿ ರೂಪಾಯಿ ಪರಿಹಾರ ಪಾವತಿಸಲು ಆದೇಶಿಸುವಂತೆ ಕೋರಿ ಮೃತ ಮಹಿಳೆಯ ಪತಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್‌ಸಿಎಲ್) ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.

ಮೃತ ಮಹಿಳೆಯ ಪತಿ ಲೋಹಿತ್ ಕುಮಾರ್ ವಿ ಸುಲಾಖೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರ ಪರ ವಕೀಲ ಎಂ ಎಫ್ ಹುಸೇನ್ ಅವರ ವಾದ ಆಲಿಸಿದ ಪೀಠವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಜಿಲ್ಲಾಧಿಕಾರಿ ಹಾಗೂ ಮೆಟ್ರೊ ಕಾಮಗಾರಿ ಗುತ್ತಿಗೆದಾರ ಕಂಪೆನಿ ನಾಗಾರ್ಜುನ ಕನ್‌ಸ್ಟ್ರಕ್ಷನ್ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಅರ್ಜಿಯಲ್ಲಿನ ಎಂಟು ಮಂದಿ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಎರಡು ವಾರ ಮುಂದೂಡಿತು.

ಲೋಹಿತ್ ಕುಮಾರ್ ಮತ್ತು ತೇಜಸ್ವಿನಿ ಅವರು 2017ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಅವಳಿ ಮಕ್ಕಳಿದ್ದು, ದಾವಣೆಗೆರೆ ಮೂಲದ ದಂಪತಿ ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದರು. 2023ರ ಜನವರಿ 10ರಂದು ಬೆಳಗ್ಗೆ 10 ಗಂಟೆಗೆ ಹೊರಮಾವುನಲ್ಲಿರುವ ತಮ್ಮ ಮನೆಯಿಂದ ಕಚೇರಿಗೆ ಪತ್ನಿ ಮತ್ತು ಮಕ್ಕಳೊಂದಿಗೆ ಅರ್ಜಿದಾರ ಲೋಹಿತ್ ಕುಮಾರ್ ದ್ವಿಚಕ್ರ ವಾಹನದಲ್ಲಿ ತೆರೆಳುತ್ತಿದ್ದರು. ನಾಗವಾರದ ಎಚ್‌ಬಿಆರ್ ಬಡಾವಣೆಯ ವರ್ತುಲ ರಸ್ತೆಯ ಆಕ್ಸಿಸ್‌ ಬ್ಯಾಂಕ್ ಮುಂದೆ ಪ್ರಯಾಣಿಸುತ್ತಿದ್ದಾಗ ಮೆಟ್ರೊ ಪಿಲ್ಲರ್‌ ನಿರ್ಮಾಣಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಅರ್ಜಿದಾರರ ದ್ವಿಚಕ್ರ ವಾಹನದ ಮೇಲೆ ಬಿದ್ದಿತ್ತು.

ಘಟನೆಯಲ್ಲಿ ದ್ವಿಚಕ್ರ ವಾಹನ ಹಿಂಬದಿ ಸವಾರರಾಗಿದ್ದ ಪತ್ನಿ ತೇಜಸ್ವಿನಿ ಮತ್ತು ಪುತ್ರ ವಿಹಾನ್‌ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಮತ್ತೊಂದೆಡೆ ಅರ್ಜಿದಾರರು ಮತ್ತು ಪುತ್ರಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ನಡೆದ ನಂತರ 2023ರ ಜನವರಿ 24ರಂದು ಬಿಎಂಆರ್‌ಸಿಎಲ್ ಕಾರ್ಯಚರಣೆ ವಿಭಾಗದ ಎಂಜಿನಿಯರ್ ಅರ್ಜಿದಾರರಿಗೆ ಪತ್ರವನ್ನು ನೀಡಿ, ಪತ್ನಿ ಮತ್ತು ಪುತ್ರ ಸಾವಿಗೆ ನಷ್ಟ ಪರಿಹಾರವಾಗಿ ₹20 ಲಕ್ಷ ನೀಡುವುದಾಗಿ ಹೇಳಿದ್ದರು. ಆದರೆ, ಪತ್ನಿ ತೇಜಸ್ವಿನಿ ಅವರು ಕೊಡಿಯಾ ನೆಟ್‌ವರ್ಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಉದ್ಯೋಗ ಮಾಡುತ್ತಿದ್ದರು. ಮಾಸಿಕ ₹75,748 ವೇತನ ಹಾಗೂ ವಾರ್ಷಿಕ ₹9,08,976 ಆದಾಯ ಗಳಿಸುತ್ತಿದ್ದರು. ಪತ್ನಿಗೆ ಕೇವಲ 28 ವರ್ಷವಾಗಿದ್ದು, ಆಕೆ ಜೀವಂತವಾಗಿದ್ದರೆ 60 ವರ್ಷಕ್ಕೆ ನಿವೃತ್ತಿ ಪಡೆಯುವ ವೇಳೆಗೆ ಪ್ರತಿ ವರ್ಷವೂ ಶೇ.20ರಷ್ಟು ವೇತನ ಹೆಚ್ಚಳದೊಂದಿಗೆ ಒಟ್ಟು ₹4,99,20,000 ಸಂಪಾದಿಸುತ್ತಿದ್ದರು. ಇನ್ನೂ ಮೃತ ಪುತ್ರನಿಗೆ ಕೇವಲ 2 ವರ್ಷ 6 ತಿಂಗಳಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Also Read
ಮೆಟ್ರೊ ಪಿಲ್ಲರ್‌ ಕುಸಿದು ತಾಯಿ-ಮಗು ಸಾವು: ಆಕ್ಷೇಪಣೆ ಸಲ್ಲಿಸಲು ಬಿಎಂಆರ್‌ಸಿಎಲ್‌ಗೆ ಎರಡು ವಾರ ನೀಡಿದ ಹೈಕೋರ್ಟ್‌

ಅಲ್ಲದೆ, ಬಿಎಂಆರ್‌ಸಿಎಲ್ ನೀಡಿರುವ ಪರಿಹಾರ ಮೊತ್ತ ಸೂಕ್ತವಾಗಿಲ್ಲ. ಕೇವಲ ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಉರುಳಿ, ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಮೆಟ್ರೊ ನಿಗಮ ನೀಡಿರುವ ಪರಿಹಾರವನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ₹10 ಕೋಟಿ ಪರಿಹಾರ ನೀಡಬೇಕು. ಮೆಟ್ರೊ ಕಾಮಗಾರಿ ನಡೆಯುವ ಸ್ಥಳದಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲು ಬಿಎಂಆರ್‌ಸಿಎಲ್‌ಗೆ ನಿರ್ದೇಶನ ನೀಡಬೇಕು ಎಂದು ಲೋಹಿತ್ ಕುಮಾರ್ ನ್ಯಾಯಾಲಯವನ್ನು ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com