ಮೈಕ್ರೊ ಫೈನಾನ್ಸ್‌ ಸುಗ್ರೀವಾಜ್ಞೆ ಸಿಂಧುತ್ವ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಸಾಲದಾತರು ಎಂಬ ಪದವು ಹಲವು ವಿಚಾರಗಳಿಗೆ ಸಂಬಂಧಿಸಿದೆಯಾದರೂ ಅದು ಮೈಕ್ರೊ ಫೈನಾನ್ಸ್‌ಗೆ ಸಂಬಂಧಿಸಿದ್ದು ಎಂಬುದನ್ನು ಸ್ಪಷ್ಟಪಡಿಸಲಾಗುವುದು ಎಂದ ನ್ಯಾಯಾಲಯ.
Currency
Currency
Published on

ಕೃಷಿಕರು, ಸ್ವಸಹಾಯ ಸಂಘಗಳ ಸದಸ್ಯರನ್ನು ರಕ್ಷಿಸಲು ಹಾಗೂ ಬಡವರಿಗೆ ಕಿರುಕುಳ ನೀಡುವುದನ್ನು ತಪ್ಪಿಸಲು ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿರುವ ಹೈಕೋರ್ಟ್‌ ಮಂಗಳವಾರ ಆದೇಶ ಕಾಯ್ದಿರಿಸಿದೆ.

ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಸುಗ್ರೀವಾಜ್ಞೆ ಸಾಂವಿಧಾನಿಕ ಸಿಂಧುತ್ವ ಹಾಗೂ ಮೋಟಾರು ವಾಹನ/ಆಸ್ತಿ ಹಣಕಾಸು ಉದ್ಯಮವು ಸುಗ್ರೀವಾಜ್ಞೆಯಿಂದ ಹೊರಗಿವೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲು ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಕರ್ನಾಟಕ ಹೈರ್‌ ಪರ್ಚೇಸ್‌ ಅಸೋಶಿಯೇಶನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಸಂಕಷ್ಟದಲ್ಲಿರುವ ಕುಟುಂಬಗಳನ್ನು ರಕ್ಷಿಸುವ ಉದ್ದೇಶ ಸರ್ಕಾರದ್ದಾಗಿದ್ದರೆ ಸಾಲ ನೀಡುವವರು, ಸಂಸ್ಥೆಗಳು ಮತ್ತು ಸಂಘಗಳನ್ನು ಏಕೆ ಸೇರಿಸಲಾಗಿದೆ. ಸುಗ್ರೀವಾಜ್ಞೆಯಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ವಿವೇಚನಾರಹಿತವಾಗಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಆರ್‌ಬಿಐ ನಿರ್ದೇಶನ ಪಾಲಿಸಲಾಗಿದೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಆರ್‌ಬಿಐ ನಿರ್ದೇಶನವು ನಿಯಮ ಅಥವಾ ಶಾಸನವಲ್ಲ. ನಾವು ಖರೀದಿ ಉದ್ಯಮದಲ್ಲಿದ್ದು, ವಾಹನಗಳನ್ನೇ ಭದ್ರತೆಯನ್ನಾಗಿ ಇಟ್ಟುಕೊಳ್ಳುತ್ತೇವೆ. ಸುಗ್ರೀವಾಜ್ಞೆಯ ಸೆಕ್ಷನ್‌ 6 ಬಾದಕವಾಗಿದೆ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಮೂರು ಲಕ್ಷ ವಾರ್ಷಿಕ ಆದಾಯ ಇರುವ ಕುಟುಂಬಗಳಿಗೆ ಯಾವುದೇ ಭದ್ರತೆ ಇಲ್ಲದ ಸಾಲ ನೀಡುವವರಿಗೆ ಸುಗ್ರೀವಾಜ್ಞೆ ಅನ್ವಯಿಸುತ್ತದೆ. ಹಾಲಿ ಪ್ರಕರಣದಲ್ಲಿ ಬಾದಿತರಾರೂ ನ್ಯಾಯಾಲಯದ ಮುಂದೆ ಬಂದಿಲ್ಲ. ಅರ್ಜಿದಾರರು ಕಾಯಿದೆ ತಮಗೆ ಅನ್ವಯಿಸುತ್ತದೆಯೇ ಇಲ್ಲವೇ ಎಂಬುದರ ಸ್ಪಷ್ಟನೆ ಕೋರಲು ನ್ಯಾಯಾಲಯ ಮುಂದೆ ಬಂದಿದ್ದಾರೆ. ಆರ್‌ಬಿಐ ಸುತ್ತೋಲೆ ಏನು ಹೇಳುತ್ತದೆ ಅದನ್ನು ಮಾಡಲಾಗಿದೆ. ಅರ್ಜಿದಾರರಿಗೂ ಸುಗ್ರೀವಾಜ್ಞೆಗೂ ಯಾವುದೇ ಸಂಬಂಧವಿಲ್ಲ. 17 ಮಂದಿ ಸಾವನ್ನಪ್ಪಿದ್ದಾರೆ. ಆ ಸಂಬಂಧ ಎಫ್‌ಐಆರ್‌ ದಾಖಲಾಗಿವೆಯಷ್ಟೆ. ಬೇರೆ ಯಾವುದೇ ತೆರನಾದ ಎಫ್‌ಐಆರ್‌ ದಾಖಲಿಸಲಾಗಿಲ್ಲ. ಎನ್‌ಬಿಎಫ್‌ಸಿ ಮತ್ತು ಆರ್‌ಬಿಐ ಕಾಯಿದೆ ವ್ಯಾಪ್ತಿಯಿಂದ ಹೊರಗಿರುವವರಿಗೆ ಸುಗ್ರೀವಾಜ್ಞೆ ಅನ್ವಯಿಸುತ್ತದೆ” ಎಂದರು.

Also Read
ಮೈಕ್ರೋಫೈನಾನ್ಸ್‌: ಸುಗ್ರೀವಾಜ್ಞೆಗೆ ಸಹಿ ಹಾಕದಿರಲು ರಾಜ್ಯಪಾಲರು ನೀಡಿದ ಕಾರಣಗಳೇನು?

ಈ ಮಧ್ಯೆ, ಪೀಠವು “ಸಾಲದಾತರರು ಎಂಬ ಪದವು ಹಲವು ವಿಚಾರಗಳಿಗೆ ಸಂಬಂಧಿಸಿದೆಯಾದರೂ ಅದು ಮೈಕ್ರೊ ಫೈನಾನ್ಸ್‌ಗೆ ಸಂಬಂಧಿಸಿದ್ದು ಎಂಬುದನ್ನು ಸ್ಪಷ್ಟಪಡಿಸಲಾಗುವುದು. ಸಾಲ ಪಡೆದ ಬಡವರಿಗೆ ವಿಪರೀತ ಕಿರುಕುಳ ನೀಡಲಾಗಿದೆ. ಬಡವರಿಗೆ ಕಿರುಕುಳ ನೀಡಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ವ್ಯಾಖ್ಯಾನದಲ್ಲಿನ ಅಸ್ಪಷ್ಟತೆಯಿಂದಾಗಿ ನ್ಯಾಯಾಲಯದ ಮುಂದೆ ಬಂದಿದ್ದಾರೆ. ಬಡವರಿಗೆ ಕಿರುಕುಳ ನೀಡಿರುವುದನ್ನು ನಾವು ನೋಡಿದ್ದೇವೆ. ಕೃಷಿಕರು, ಸ್ವಸಹಾಯ ಸಂಘಗಳ ಸದಸ್ಯರನ್ನು ರಕ್ಷಿಸಲು ಹಾಗೂ ಬಡವರಿಗೆ ಕಿರುಕುಳ ನೀಡುವುದನ್ನು ತಪ್ಪಿಸಲು ಸುಗ್ರೀವಾಜ್ಞೆ ತರಲಾಗಿದೆ. ಇದಕ್ಕೆ ಗರಿಷ್ಠ 3 ಲಕ್ಷ ಆದಾಯ ಮಿತಿಯನ್ನು ಸರ್ಕಾರ ನಿಗದಿಪಡಿಸಿದೆ” ಎಂದ ಪೀಠವು ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಲಾಗುವುದು ಆದೇಶ ಕಾಯ್ದಿರಿಸಿತು.

Kannada Bar & Bench
kannada.barandbench.com