ಜೈಲಿನಲ್ಲಿ ದರ್ಶನ್‌ಗಿಲ್ಲ ಕನಿಷ್ಠ ಸೌಲಭ್ಯ: ವಿವರಣೆ ನೀಡುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಲಯದ ನಿರ್ದೇಶನ

ದರ್ಶನ್‌ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ 17 ಅಥವಾ ಅದಕ್ಕಿಂತ ಮುಂಚಿತವಾಗಿ ಜೈಲಿನ ಸಂಬಂಧಪಟ್ಟ ಅಧಿಕಾರಿ ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ ನ್ಯಾಯಾಲಯ.
Darshan, Actor
Darshan, Actor
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಜೈಲು ಸೇರಿರುವ ನಟ ದರ್ಶನ್‌ಗೆ ಕಾರಾಗೃಹಗಳ ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯ ಕಲ್ಪಿಸುತ್ತಿಲ್ಲ ಎಂಬ ವಿಚಾರ ಕುರಿತು ವಿವರಣೆ ನೀಡುವಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗೆ ಬೆಂಗಳೂರಿನ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ನಿರ್ದೇಶಿಸಿದೆ.

ನ್ಯಾಯಾಲಯದ ಆದೇಶದ ಹೊರತಾಗಿಯೂ ತಮಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಜೈಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ದರ್ಶನ್‌ ಮೆಮೊ ಸಲ್ಲಿಸಿದ್ಧಾರೆ. ಈ ಮೆಮೊವನ್ನು ವಿಚಾರಣೆ ನಡೆಸಿದ ನಗರದ 64ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಐ ಪಿ ನಾಯ್ಕ್‌ ಅವರು, ಅರ್ಜಿದಾರರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ 17 ಅಥವಾ ಅದಕ್ಕಿಂತ ಮುಂಚಿತವಾಗಿ ಜೈಲಿನ ಸಂಬಂಧಪಟ್ಟ ಅಧಿಕಾರಿ ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು.

ತಮಗೆ ಹಾಸಿಗೆ, ಹೊದಿಕೆ ಮತ್ತು ತಲೆದಿಂಬು ಒದಗಿಸುವಂತೆ ಕೋರಿ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ದರ್ಶನ್‌ ಮನವಿ ಸಲ್ಲಿಸಿದ್ದರು. ಈ ಮನವಿ ಪರಿಗಣಿಸದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ, ಕರ್ನಾಟಕ ಕಾರಾಗೃಹಗಳ ಕೈಪಿಡಿಯ ಅನುಸಾರ ದರ್ಶನ್‌ ಗೆ ಕನಿಷ್ಠ ಸೌಲಭ್ಯ ಕಲ್ಪಿಸುವಂತೆ ಪರಪ್ಪನ ಅಗ್ರಹಾರ ಜೈಲಧಿಕಾರಿಗಳಿಗೆ ಸೆಪ್ಟೆಂಬರ್‌ 9ರಂದು ಸೂಚನೆ ನೀಡಿತ್ತು.

Also Read
ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ ಅಗತ್ಯವಿಲ್ಲವೆಂದ ನ್ಯಾಯಾಲಯ; ಕಾರಾಗೃಹ ಕೈಪಿಡಿ ಅನ್ವಯ ಸೌಲಭ್ಯ ನೀಡಲು ಸೂಚನೆ

ಇದೀಗ ಮೆಮೊ ಸಲ್ಲಿಸಿರುವ ದರ್ಶನ್‌, ನ್ಯಾಯಾಲಯದ ಆದೇಶವನ್ನು ಜೈಲು ಅಧಿಕಾರಿಗಳು ಪಾಲಿಸುತ್ತಿಲ್ಲ. ಇದರಿಂದ ನ್ಯಾಯಾಲಯದ ಆದೇಶದ ಪೂರ್ವ ಮತ್ತು ನಂತರ ಪರಿಸ್ಥಿತಿ ಏನೂ ಬದಲಾಗಿಲ್ಲ. ತಮ್ಮ ವಕೀಲರು ಜೈಲು ಅಧಿಕಾರಿಗಳನ್ನು ಭೇಟಿ ಮಾಡಿ ನ್ಯಾಯಾಲಯದ ಆದೇಶದ ಪ್ರತಿ ಸಲ್ಲಿಸಿದರು. ತೀರ್ಪಿನ ಅಂಶಗಳನ್ನು ಅರ್ಥಮಾಡಿಸಲು ಯತ್ನಿಸಿದರು. ಆದರೆ, ಜೈಲು ಅಧಿಕಾರಿಗಳು ಮಾತ್ರ, ತಮಗೆ ನ್ಯಾಯಾಲಯ ಆದೇಶ ತಲುಪಿದೆ. ಆದೇಶದ ಅನುಸಾರ ಏನು ಮಾಡಬೇಕೋ; ಅದನ್ನು ಮಾಡುತ್ತೇವೆ. ಅದನ್ನು ನೀವು ಹೇಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ನ್ಯಾಯಾಲಯದ ಆದೇಶ ಪಾಲಿಸದ ಪರಪ್ಪನ ಅಗ್ರಹಾರ ಜೈಲಿನ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಬೇಕು. ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಸಲು ಶಿಫಾರಸ್ಸು ಮಾಡಬೇಕು ಎಂದು ದರ್ಶನ್‌ ಮೆಮೊನಲ್ಲಿ ಕೋರಿದ್ದಾರೆ.

Kannada Bar & Bench
kannada.barandbench.com