
ಸ್ಮಾರ್ಟ್ ಮೀಟರ್ ಖರೀದಿ ಮತ್ತು ಅಳವಡಿಕೆಯ ಟೆಂಡರ್ ಅಕ್ರಮದ ಆರೋಪ ಸಂಬಂಧ ಬಿಜೆಪಿ ನಾಯಕರ ದೂರಿನಲ್ಲಿ ಪ್ರಕ್ರಿಯೆ ಲೋಪ ಮಾತ್ರವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಮೌಖಿಕವಾಗಿ ಹೇಳಿತು.
ಖಾಸಗಿ ದೂರು ದಾಖಲಿಸಲು ಕಚೇರಿಗೆ ನಿರ್ದೇಶಿಸಿರುವುದು ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ರದ್ದತಿ ಕೋರಿ ಇಂಧನ ಸಚಿವ ಕೆ ಜೆ ಜಾರ್ಜ್ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರ ವಾದವನ್ನು ಆಲಿಸಿದ ವೇಳೆ ಪೀಠವು “ಹೆಚ್ಚೆಂದರೆ ಇಡೀ ಪ್ರಕ್ರಿಯೆಯನ್ನು ಹೊಸದಾಗಿ ನಡೆಸುವಂತೆ ನೀವು ಕೋರಬಹುದಷ್ಟೆ. ಇದನ್ನು ಬಿಟ್ಟು ಬೇರೆ ಏನನ್ನು ನೀವು ಕೇಳಲಾಗುತ್ತದೆ? ಇಲ್ಲಿ ಪ್ರಕ್ರಿಯೆಯಲ್ಲಿ ಲೋಪ ಮಾತ್ರ ಆಗಿದೆ. ಆದರೆ, ನೀವು ಇಡೀ ಪ್ರಕ್ರಿಯೆಯನ್ನು ಬದಿಗೆ ಸರಿಸುವಂತೆ ಕೋರಿದ್ದೀರಿ” ಎಂದಿತು.
ಇದಕ್ಕೂ ಮುನ್ನ, ನಾಗೇಶ್ ಅವರು “ದೂರನ್ನು ಲೋಕಾಯುಕ್ತ ತನಿಖೆಗೆ ಆದೇಶಿಸುವಂತೆ ಬಿಎನ್‌ಎಸ್‌ಎಸ್ ಸೆಕ್ಷನ್ 175 (4) ಅಡಿ ಅಧಿಕಾರ ಚಲಾಯಿಸಲು (ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಸಂಬಂಧಿಸಿದಂತೆ ದೂರು ಬಂದಾಗ ತನಿಖೆಗೆ ಆದೇಶಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಿಗೆ ಇರುವ ಅಧಿಕಾರ) ದೂರುದಾರರು ನ್ಯಾಯಾಲಯಕ್ಕೆ ಕೋರಿದ್ದಾರೆ. ಸಂಜ್ಞೇ ಪರಿಗಣಿಸುವಂತೆ ದೂರುದಾರರು ಕೋರಿಲ್ಲ. ಬಿಎನ್‌ಎಸ್‌ಎಸ್ ಸೆಕ್ಷನ್ 218 ಮತ್ತು ಭ್ರಷ್ಟಾಚಾರ ಪ್ರತಿಬಂಧ ಕಾಯಿದೆ ಸೆಕ್ಷನ್ 17ಎ ಅಡಿ ಸಾರ್ವಜನಿಕ ಸೇವಕರಿಗೆ ರಕ್ಷಣೆ ನೀಡಲಾಗಿದೆ” ಎಂದರು.
“ಸಾರ್ವಜನಿಕ ಸೇವಕರಾದ ಜಾರ್ಜ್ ಅವರು ನಡೆಸಿರುವ ಅಕ್ರಮ ಆರೋಪದ ಬಗ್ಗೆ ದೂರುದಾರರಿಗೆ ಆಕ್ಷೇಪಗಳಿದ್ದರೆ ಸಕ್ಷಮ ಪ್ರಾಧಿಕಾರದಿಂದ ನ್ಯಾಯಾಲಯವು ವರದಿ ತರಿಸಿಕೊಳ್ಳಬೇಕು. ದೂರುದಾರರಿಗೆ ಜಾರ್ಜ್ ಅವರ ಸಕ್ಷಮ ಪ್ರಾಧಿಕಾರ ಯಾರೆಂದೂ ಗೊತ್ತಿದೆ. ರಾಜ್ಯಪಾಲರಿಗೆ ಮನವಿ ನೀಡಿರುವುದನ್ನೂ ಆಕ್ಷೇಪಣೆಯಲ್ಲಿ ಅವರು ವಿವರಿಸಿದ್ದಾರೆ. ಸಚಿವರಾಗಿ ಜಾರ್ಜ್ ನಿರ್ಧಾರ ಕೈಗೊಂಡಿದ್ದರೆ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 17ಎ ಅನ್ವಯಿಸುತ್ತದೆ. ಆದರೆ, ಜಾರ್ಜ್ ವಿಚಾರಣೆಗೆ ರಾಜ್ಯಪಾಲರಿಂದ ಪೂರ್ವಾನುಮತಿ ಪಡೆಯಬೇಕು” ಎಂದರು.
ಇನ್ನೊಬ್ಬ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಅವರು “ಅರ್ಜಿದಾರರ ವಿರುದ್ದ ಆರೋಪಿಸಿರುವ ಅಂಶಗಳಿಗೂ ಅನ್ವಯ ಕೋರಿರುವ ಸೆಕ್ಷನ್‌ಗಳನ್ನು ಹೊಂದಿಕೆಯಾಗುವುದಿಲ್ಲ. ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ” ಎಂದರು. ವಾದ-ಪ್ರತಿವಾದ ಆಲಿಸಿದ ಪೀಠವು ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿತು.