ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ತೋಟಗಾರಿಕೆ ಮತ್ತು ಯೋಜನಾ ಸಚಿವ ವಿ ಮುನಿರತ್ನ ಅವರು ರೂ. 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿರುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಸೇರಿದಂತೆ 19 ಮಂದಿಯ ಪರವಾಗಿ ಆಕ್ಷೇಪಣೆ ಸಲ್ಲಿಸಲು ಬೆಂಗಳೂರಿನ ಸತ್ರ ನ್ಯಾಯಾಲಯವು ಶನಿವಾರ ಅನುಮತಿಸಿದೆ.
ಸಚಿವ ಮುನಿರತ್ನ ಅವರು ಸಲ್ಲಿಸಿರುವ ಮೂಲ ದಾವೆಯ ವಿಚಾರಣೆಯನ್ನು 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎನ್ ಕೃಷ್ಣಯ್ಯ ಅವರು ನಡೆಸಿದರು.
ಕೆಂಪಣ್ಣ ಸೇರಿದಂತೆ 19 ಮಂದಿಯ ಪರವಾಗಿ ಹಾಜರಾಗಿದ್ದ ಡಿಎಸ್‌ಜೆ ಅಸೋಸಿಯೇಟ್ಸ್‌ನ ವಕೀಲರು ಆಕ್ಷೇಪಣೆ ಮತ್ತು ಲಿಖಿತ ಹೇಳಿಕೆ ದಾಖಲಿಸಲು ಸಲ್ಲಿಸಲು ಕಾಲಾವಕಾಶ ಕೋರಿದರು.
ಕಮಿಷನ್ ಅಥವಾ ಪರ್ಸೆಂಟೇಜ್‌ಗೆ ಸಂಬಂಧಿಸಿದಂತೆ ಫಿರ್ಯಾದಿಯಾಗಿರುವ ಸಚಿವ ಮುನಿರತ್ನ ಅವರ ವಿರುದ್ಧ ಯಾವುದೇ ತೆರನಾದ ಸುಳ್ಳು ಹೇಳಿಕೆ, ಆರೋಪ ಅಥವಾ ಆಪಾದನೆಯನ್ನು ಪ್ರತಿವಾದಿಗಳಾದ ಡಿ ಕೆಂಪಣ್ಣ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ, ಉಪಾಧ್ಯಕ್ಷರಾದ ವಿ ಕೃಷ್ಣ ರೆಡ್ಡಿ, ಎಂ ಎಸ್ ಸಂಕ ಗೌಡಶನಿ, ಕೆ ಎಸ್ ಶಾಂತೇಗೌಡ, ಕೆ ರಾಧಾಕೃಷ್ಣ ನಾಯಕ್, ಆರ್ ಮಂಜುನಾಥ್, ಆರ್ ಅಂಬಿಕಾಪತಿ, ಬಿ ಸಿ ದಿನೇಶ್, ಸಿ ಡಿ ಕೃಷ್ಣ, ಕಾರ್ಯದರ್ಶಿ ಜಿ ಎಂ ರವೀಂದ್ರ, ಖಜಾಂಚಿ ಎಚ್ ಎಸ್ ನಟರಾಜ್, ಜಂಟಿ ಕಾರ್ಯದರ್ಶಿಗಳಾದ ಎಂ ರಮೇಶ್, ಎನ್ ಮಂಜುನಾಥ್, ಸಂಘಟನಾ ಕಾರ್ಯದರ್ಶಿಗಳಾದ ಜಗನ್ನಾಥ್ ಬಿ. ಶೆಗಜಿ, ಸುರೇಶ್ ಎಸ್ ಭೋಮ ರೆಡ್ಡಿ, ಕೆ ಎ ರವಿಚಂಗಪ್ಪ, ಬಿ ಎಸ್ ಗುರುಸಿದ್ದಪ್ಪ, ಕರ್ಲೆ ಇಂದ್ರೇಶ್ ಅವರು ಪ್ರಕಟ, ಪ್ರಸಾರ ಮಾಡದಂತೆ ಹೊರಡಿಸಲಾಗಿರುವ ತಾತ್ಕಾಲಿಕ ಪ್ರತಿಬಂಧಕಾದೇಶ ಮುಂದುವರಿಯಲಿದೆ ಎಂದು ಪೀಠವು ಹೇಳಿದ್ದು, ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿತು.