ಸಚಿವ ಸೋಮಣ್ಣ ಅವರಿಂದ ಶೇ. 204ರಷ್ಟು ಅಕ್ರಮ ಆಸ್ತಿ ಸಂಪಾದನೆ; ಕ್ರಿಮಿನಲ್‌ ಪ್ರಕರಣ ದಾಖಲಿಸಲು ನ್ಯಾಯಾಲಯದ ಆದೇಶ

ಜನತಾ ಬಜಾರ್‌ನಲ್ಲಿ ಕೆಲಸ ಮಾಡುತ್ತಿದ್ದ 10 ವರ್ಷಗಳ ಅವಧಿಯಲ್ಲಿ ಸೋಮಣ್ಣ ಅವರ ಒಟ್ಟು ಆದಾಯವು ರೂ. 15,330 ಆಗಿತ್ತು. ನಗರಸಭೆ ಸದಸ್ಯರಾಗಿದ್ದ 10 ವರ್ಷಗಳ ಅವಧಿಯಲ್ಲಿ ಅವರ ಒಟ್ಟು ಆದಾಯವು ಭತ್ಯೆ ಸಹಿತ ರೂ. 71,437 ಆಗಿತ್ತು ಎಂದು ಮಾಹಿತಿ.
Cabinet minister V Somanna and Bengaluru city ciivil court 

Cabinet minister V Somanna and Bengaluru city ciivil court 

ವಸತಿ ಸಚಿವ ವಿ ಸೋಮಣ್ಣ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ (ಎಸಿಬಿ) ಸಲ್ಲಿಸಿರುವ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದ್ದು, ಅವರ ವಿರುದ್ಧ ವಿಶೇಷ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಮಹತ್ವದ ಆದೇಶ ಮಾಡಿದೆ. ಅಲ್ಲದೇ, ಏಪ್ರಿಲ್‌ 16ರಂದು ಖುದ್ದು ಹಾಜರಾಗುವಂತೆ ಸಚಿವ ಸೋಮಣ್ಣ ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

ಬೆಂಗಳೂರಿನ ಮೂಡಲಪಾಳ್ಯದ ರಾಮಕೃಷ್ಣ ಅವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ 110ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹಾಗೂ ಹಾಲಿ ಮತ್ತು ಮಾಜಿ ಶಾಸಕ ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವುದಕ್ಕಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾ. ಬಿ ಜಯಂತ್‌ ಕುಮಾರ್‌ ಅವರು ಸೋಮಣ್ಣ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಸೆಕ್ಷನ್‌ 13(1)(ಬಿ) (ಡಿ) ಮತ್ತು (ಇ) ಜೊತೆಗೆ ಸೆಕ್ಷನ್‌ 13(2)ರ ಅಡಿ ಪ್ರಕರಣ ದಾಖಲಿಸಲು ಆದೇಶ ಮಾಡಿದ್ದಾರೆ.

ಎಸಿಬಿಯ ತನಿಖಾಧಿಕಾರಿಯು ಕಾನೂನಿನ ಪ್ರಕಾರ ತನಿಖೆ ನಡೆಸಿಲ್ಲ ಎಂಬುದು ವರದಿಯಿಂದ ತಿಳಿದುಬಂದಿದೆ. ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಸಿಆರ್‌ಪಿಸಿ ಸೆಕ್ಷನ್‌ 173ರ ಪ್ರಕಾರ ತನಿಖಾಧಿಕಾರಿಯು ಅಂತಿಮ ವರದಿ ಸಲ್ಲಿಸಬೇಕು. ಸಿಆರ್‌ಪಿಸಿ ಸೆಕ್ಷನ್‌ 202(1)ರ ಅಡಿ ವರದಿ ಒಪ್ಪಲು ಸೂಕ್ತ ಆಧಾರಗಳನ್ನು ನೀಡುವಲ್ಲಿ ತನಿಖಾಧಿಕಾರಿ ವಿಫಲರಾಗಿದ್ದಾರೆ. ಹೀಗಾಗಿ, ತನಿಖಾಧಿಕಾರಿ ಸಲ್ಲಿಸಿರುವ ವರದಿಯನ್ನು ಒಪ್ಪಲಾಗದು. ಆದ್ದರಿಂದ ಅದನ್ನು ವಜಾ ಮಾಡಲಾಗಿದೆ ಎಂದು ಪೀಠವು ಹೇಳಿದೆ.

ಅಕ್ರಮ ಆಸ್ತಿ ಗಳಿಕೆ ಲೆಕ್ಕಹಾಕುವ ವಿಚಾರದಲ್ಲಿ ತನಿಖಾಧಿಕಾರಿ ವಿಫಲವಾಗಿದ್ದು, ಸೂಕ್ತ ರೀತಿಯಲ್ಲಿ ತನಿಖೆ ನಡೆಸದೇ ಕಾನೂನಿಗೆ ವಿರುದ್ಧವಾಗಿ ತನಿಖಾಧಿಕಾರಿ ವರದಿ ಸಲ್ಲಿಸಿದ್ದಾರೆ ಎಂಬ ದೂರುದಾರರ ವಾದದಲ್ಲಿ ತಿರುಳಿದೆ. ಹೀಗಾಗಿ, ಸೋಮಣ್ಣ ಅವರ ವಿರುದ್ಧ ದೂರು ದಾಖಲಿಸಬೇಕಿದೆ. ಬೆಂಗಳೂರಿನ ಹೊಸಹಳ್ಳಿ ನಗರಸಭೆ ಸದಸ್ಯ, ಶಾಸಕ, ಸಚಿವರಾದ ಬಳಿಕ ಆರೋಪಿ ಸೋಮಣ್ಣ ಅವರು ಹೇಗೆ ಆಸ್ತಿ ಸಂಪಾದಿಸಿದ್ದಾರೆ ಎಂಬುದನ್ನು ವಿವರಿಸಬೇಕಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಶೇ. 204ರಷ್ಟು ಆಸ್ತಿ ಗಳಿಕೆ ಆರೋಪ

ಬೆಂಗಳೂರಿನ ಜನತಾ ಬಜಾರ್‌ನಲ್ಲಿ 1974ರಿಂದ 1983ರ ವರೆಗೆ ಸೋಮಣ್ಣ ಅವರು ಕೆಲಸ ಮಾಡುತ್ತಿದ್ದರು.1983-1993ರ ವರೆಗೆ ಬೆಂಗಳೂರಿನ ಹೊಸಹಳ್ಳಿ ನಗರಸಭೆ ಸದಸ್ಯರಾಗಿದ್ದರು. 1989ರಲ್ಲಿ ಬಿನ್ನಿಪೇಟೆಯಿಂದ ವಿಧಾನಸಭಾಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. 1994ರಲ್ಲಿ ಬಿನ್ನಿಪೇಟೆ ಶಾಸಕರಾಗಿ ಆಯ್ಕೆಯಾದ ಸೋಮಣ್ಣ ಅವರು 1999ರ ವರೆಗೆ ಬಂಧೀಖಾನೆ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು. 1999ರಲ್ಲಿ ಪಕ್ಷೇತರರಾಗಿ ಶಾಸಕರಾಗಿ ಆಯ್ಕೆಯಾಗಿದ್ದ ಸೋಮಣ್ಣ ಅವರು ಬಳಿಕ ಎರಡು ಬಾರಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. 2009ರಲ್ಲಿ ಬಿಜೆಪಿ ಸೇರಿ ಮುಜರಾಯಿ ಸಚಿವರಾಗಿದ್ದ ಆರೋಪಿಯು ಉಪಚುನಾವಣೆಯಲ್ಲಿ ಸೋತಿದ್ದರು. ಬಳಿಕ, ವಿಧಾನ ಪರಿಷತ್‌ ಸದಸ್ಯರಾಗಿ ನೇಮಕವಾಗಿದ್ದ ಸೋಮಣ್ಣ ಅವರು ಈ ಸಂದರ್ಭದಲ್ಲಿ ಅಕ್ರಮವಾಗಿ ತಮ್ಮ ಮತ್ತು ಕುಟುಂಬ ಸದಸ್ಯರ ಹೆಸರಲ್ಲಿ ಆಸ್ತಿ ಮಾಡಿದ್ದಾರೆ. ಸೋಮಣ್ಣ ತಮಗೆ ಗೊತ್ತಿರುವ ಆದಾಯದ ಮೂಲಗಳಿಂದ ಶೇ. 204ಕ್ಕೂ ಹೆಚ್ಚು ಪಟ್ಟು ಆಸ್ತಿ ಸಂಪಾದಿಸಿದ್ದಾರೆ ಎಂದು ದೂರುದಾರರು ಹೇಳಿಕೆ ನೀಡಿದ್ದಾರೆ.

ಜನತಾ ಬಜಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು ಹತ್ತು ವರ್ಷದ ಅವಧಿಯಲ್ಲಿ ಸೋಮಣ್ಣ ಅವರ ಆದಾಯವು 15,330 ರೂಪಾಯಿ ಆಗಿತ್ತು. ನಗರಸಭೆ ಸದಸ್ಯರಾಗಿದ್ದ ಹತ್ತು ವರ್ಷಗಳ ಅವಧಿಯಲ್ಲಿ ಅವರ ಒಟ್ಟು ಆದಾಯವು ಭತ್ಯೆ ಸಹಿತ 71,437 ರೂಪಾಯಿ ಆಗಿತ್ತು. ಕರ್ನಾಟಕ ಲೋಕಾಯುಕ್ತ ಕಾಯಿದೆ ಅಡಿ ಅವರು ಸ್ವಯಂ ಘೋಷಣೆ ಮಾಡಿಕೊಂಡಿರುವಂತೆ 1993-94 ರಿಂದ 2009-10ರ ಅವಧಿಯಲ್ಲಿ ಅವರ ಆಸ್ತಿಯು ರೂ. 18,49,89,441/- ರೂ. ಅಗಿದೆ. ಸುಮಾರು ರೂ. 12.42 ಕೋಟಿ ಅಕ್ರಮ ಆಸ್ತಿ ಕಂಡುಬಂದಿದೆ. ಈ ಅಕ್ರಮ ಆಸ್ತಿಯ ಪ್ರಮಾಣ ಶೇ. 204 ಆಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ.

ಸೋಮಣ್ಣ ಅವರು ದೊಡ್ಡಬಳ್ಳಾಪುರ, ರಾಮನಗರ, ತಾವರೆಕೆರೆ, ಚನ್ನಪಟ್ಟಣದ ಚೋಳಮಾರನಹಳ್ಳಿಯಲ್ಲಿ ಆಸ್ತಿ ಹೊಂದಿದ್ದಾರೆ. ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೂಡಲಪಾಳ್ಯ ಗ್ರಾಮದಲ್ಲಿ ಸೋಮಣ್ಣ ಗಣಿ ಚಟುವಟಿಕೆ ನಡೆಸುತ್ತಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಖಾಲಿ ನಿವೇಶನ ಖರೀದಿಸಿ, ಜ್ಞಾನಮಿತ್ರ ಶೈಕ್ಷಣಿಕ ಟ್ರಸ್ಟ್‌ ಅಡಿ ವಿ ಎಸ್‌ ಎಸ್‌ ಶಾಲೆ ನಡೆಸುತ್ತಿದ್ದಾರೆ. ಪುತ್ರ ಬಿ ಎಸ್‌ ಅರುಣ್‌ ಅವರ ಹೆಸರಿನಲ್ಲಿ ಚನ್ನಪಟ್ಟಣದ ಚೋಳಮಾರನಹಳ್ಳಿ, ದೊಡ್ಡಬಳ್ಳಾಪುರದ ಹೊಸನಾಗೇನಹಳ್ಳಿಯಲ್ಲಿ ಆಸ್ತಿ ಖರೀದಿಸಿದ್ದು, ಬೆಂಗಳೂರಿನ ಬನಶಂಕರಿಯಲ್ಲಿ ಟ್ರಸ್ಟ್‌ ನಡೆಸುತ್ತಿದ್ದಾರೆ. ಬೆಂಗಳೂರಿನ ಡಾಲರ್ಸ್‌ ಕಾಲೊನಿ, ಜಯನಗರ, ವಿಜಯನಗರ ಮತ್ತು ನಾಗದೇವನಹಳ್ಳಿಯಲ್ಲಿ ಮನೆ ಹೊಂದಿದ್ದು, ಯಶವಂತಪುರದಲ್ಲಿ ಅಪಾರ್ಟ್‌ಮೆಂಟ್‌ ಹೊಂದಿದ್ದಾರೆ. ಕ್ಲಾಸಿಕ್‌ ಬಿಲ್ಡರ್ಸ್‌ ಮತ್ತು ತ್ರಿಶೂಲ್‌ ಬಿಲ್ಡರ್ಸ್‌ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎಂದು ದೂರುದಾರರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಸೋಮಣ್ಣ ಅವರು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ 38 ದಾಖಲೆಗಳನ್ನು ದೂರುದಾರರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

Attachment
PDF
RamaKrishna Versus V Somanna.pdf
Preview
Kannada Bar & Bench
kannada.barandbench.com