ತಂದೆಗೆ ಯಕೃತ್ ದಾನ ಮಾಡಲು ಅನುಮತಿ ಕೋರಿದ ಅಪ್ರಾಪ್ತ ವಯಸ್ಕ: ಉತ್ತರ ಪ್ರದೇಶ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ವಯಸ್ಕರು ಮತ್ತು ಮರಣವನ್ನಪ್ಪಿದ ಅಪ್ರಾಪ್ತ ವಯಸ್ಕರು ಮಾತ್ರ ತಮ್ಮ ಅಂಗಗಳನ್ನು ದಾನ ಮಾಡಲು ಮಾನವ ಅಂಗಾಂಗಗಳ ಕಸಿ ಕಾಯಿದೆ ಅವಕಾಶ ನೀಡುತ್ತದೆ.
Supreme Court
Supreme Court

ತಂದೆಯ ಜೀವ ಉಳಿಸಲೆಂದು ತನ್ನ ಯಕೃತ್‌ ದಾನಕ್ಕೆ ಅನುಮತಿ ಕೋರಿ ಅಪ್ರಾಪ್ತ ಬಾಲಕನೊಬ್ಬ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಉತ್ತರ ಪ್ರದೇಶ ಆರೋಗ್ಯ ಕಾರ್ಯದರ್ಶಿಯ ಪ್ರತಿಕ್ರಿಯೆ ಕೇಳಿದೆ.

ವಯಸ್ಕರು ಮತ್ತು ಮರಣವನ್ನಪ್ಪಿದ ಅಪ್ರಾಪ್ತ ವಯಸ್ಕರು ಮಾತ್ರ ತಮ್ಮ ಅಂಗಗಳನ್ನು ದಾನ ಮಾಡಲು ಮಾನವ ಅಂಗಾಂಗಗಳ ಕಸಿ ಕಾಯಿದೆ ಅವಕಾಶ ನೀಡುತ್ತದೆ. ಆದರೂ ಅಸಾಧಾರಣ ಸಂದರ್ಭಗಳಲ್ಲಿ ನ್ಯಾಯಾಲಯಗಳು ಅಪ್ರಾಪ್ತರಿಗೂ ಅಂಗಾಂಗ ದಾನಕ್ಕೆ ಅವಕಾಶ ಕಲ್ಪಿಸಿವೆ.

ಪ್ರಕರಣವನ್ನು ತುರ್ತಾಗಿ ಆಲಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಪಿ ಎಸ್ ನರಸಿಂಹ ಅವರನ್ನು ಕೋರಲಾಯಿತು. ಕೂಡಲೇ ಇದಕ್ಕೆ ಸ್ಪಂದಿಸಿದ ನ್ಯಾಯಾಲಯ ಪ್ರತಿಕ್ರಿಯೆ ಕೇಳಿ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತು.

ಬಾಲಕನ ತಂದೆ ಗಂಭೀರ ಸ್ಥಿತಿಯಲ್ಲಿದ್ದು ಅವರ ಜೀವ ಉಳಿಸುವ ಏಕೈಕ ಮಾರ್ಗ ಯಕೃತ್‌ ದಾನ. ಮಗ ಅದಕ್ಕೆ ಸಿದ್ಧನಿದ್ದಾನೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ಆದರೆ ಇದಕ್ಕೆ ಸಂಬಂಧಿಸಿದ ಕಾನೂನು ಹೇಳುವ ಪ್ರಕಾರ ದಾನಿ ವಯಸ್ಕನಾಗಿರಬೇಕು ಎಂದು ನ್ಯಾಯಾಲಯ ಹೇಳಿತು.

ಈ ಸಂಬಂಧ ಉತ್ತರ ಪ್ರದೇಶ ಸರ್ಕಾರದ ಆರೋಗ್ಯ ಕಾರ್ಯದರ್ಶಿಗೆ ಕುಟುಂಬ ಮಂಗಳವಾರ ಪತ್ರ ಬರೆದಿದ್ದು ಗುರುವಾರ ವಕೀಲ ಶೇಷಾತಲ್ಪ ಸಾಯಿ ಬಂಡಾರು ಅವರ ಮೂಲಕ ತ್ವರಿತ ವಿಚಾರಣೆ ಕೋರಿ ಅರ್ಜಿ ಸಲ್ಲಿಸಿತ್ತು.

Also Read
ಹಲ್ಲೆ, ಜೀವ ಬೆದರಿಕೆ; ದೂರು ಸಲ್ಲಿಸಲು ಒಂದೂವರೆ ತಿಂಗಳು ವಿಳಂಬ: ಎಫ್‌ಐಆರ್‌ ರದ್ದುಪಡಿಸಿದ ಹೈಕೋರ್ಟ್‌

ಪ್ರಕರಣದ ಅಂತಿಮ ತೀರ್ಪಿಗಾಗಿ ಸೆಪ್ಟೆಂಬರ್ 12ರಂದು ಸೋಮವಾರ (ನಾಳೆ) ಅರ್ಜಿಯನ್ನು ಪರಿಗಣಿಸಲಾಗುವುದು ಎಂದ ನ್ಯಾಯಾಲಯ ಅಂದು ಉತ್ತರ ಪ್ರದೇಶ ಆರೋಗ್ಯ ಇಲಾಖೆಯ ಜವಾಬ್ದಾರಿಯುತ ಅಧಿಕಾರಿಯೊಬ್ಬರು ಹಾಜರಿರಬೇಕೆಂದು ತಿಳಿಸಿದೆ.

ಈ ನಡುವೆ ಅಂಗಾಂಗ ದಾನ ಕಾರ್ಯಸಾಧುವೇ ಎಂಬುದನ್ನು ಅರಿಯಲು ಅರ್ಜಿದಾರರು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬಹುದು ಎಂದು ಪೀಠ ಹೇಳಿದೆ. ಅರ್ಜಿದಾರರ ಪರ ವಕೀಲರಾದ ಭೂಷಣ್ ಎಂ ಓಜಾ, ಅಭಿಮನ್ಯು ಕುಮಾರ್ ಮತ್ತು ಸುಶಾಂತ್ ಡೋಗ್ರಾ ವಾದ ಮಂಡಿಸಿದ್ದರು.

Related Stories

No stories found.
Kannada Bar & Bench
kannada.barandbench.com