ಗಂಡ ಹೆಂಡತಿ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಕ್ರೌರ್ಯವಲ್ಲ: ಮಧ್ಯಪ್ರದೇಶ ಹೈಕೋರ್ಟ್

ಮದುವೆಯಾದ ಐದು ತಿಂಗಳಲ್ಲೇ ಪತಿ ಪತ್ನಿಯನ್ನು ತೊರೆದಿದ್ದು ಆಕೆಯನ್ನು ಮರಳಿ ಕರೆತರುವ ಯಾವುದೇ ಯತ್ನವನ್ನು ಆತ ಮಾಡಿರಲಿಲ್ಲ. ಆದರೆ ಪತ್ನಿ ಸಹಬಾಳ್ವೆಗೆ ಸಿದ್ಧ ಇದ್ದಾರೆ ಎಂದು ಹೈಕೋರ್ಟ್ ಹೇಳಿದೆ.
Marriage
Marriage

ಗಂಡ ಹೆಂಡತಿ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಕ್ರೌರ್ಯವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್‌ ತಿಳಿಸಿದ್ದು ಮಹಿಳೆಗೆ ವಿಚ್ಛೇದನ ನೀಡುವ ಆದೇಶವೊಂದನ್ನು ಇತ್ತೀಚೆಗೆ ರದ್ದುಗೊಳಿಸಿದೆ. [ಸರಿತಾ ಶರ್ಮಾ ಮತ್ತು ಗೌರವ್ ಶರ್ಮಾ ನಡುವಣ ಪ್ರಕರಣ].

ಸಂಗಾತಿಯ ವರ್ತನೆಯಲ್ಲಿ ರಾತ್ರೋರಾತ್ರಿ ಬದಲಾವಣೆ ನಿರೀಕ್ಷಿಸಲಾಗದ ಹಿನ್ನೆಲೆಯಲ್ಲಿ ಪತಿ ಪತ್ನಿಗೆ ಮತ್ತೊಂದು ಅವಕಾಶ ನೀಡಬಹುದಿತ್ತು ಎಂದು ನ್ಯಾಯಮೂರ್ತಿಗಳಾದ ವಿವೇಕ್ ರುಶಿಯಾ ಮತ್ತು ಅಮರ್ ನಾಥ್ (ಕೇಶರವಾಣಿ) ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಕುಟುಂಬ ಸದಸ್ಯರು, ಸಮುದಾಯ ಮತ್ತು ಸಂಬಂಧಿಕರ ನಡುವಿನ ಹಲವು ಸಭೆಗಳ ನಂತರ ದಂಪತಿಗಳ ನಡುವೆ ಮದುವೆ ಏರ್ಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.

"ಪತಿ ಮದುವೆಗೆ ಒಪ್ಪಿಗೆ ನೀಡಿದ್ದಾನೆ, ಆದ್ದರಿಂದ ವಿನಾ ಕಾರಣ, ಪತಿಯ ತಪ್ಪಿಗೆ ಹೆಂಡತಿಯ ಜೀವನ ಹಾಳುಮಾಡಲು ಅವಕಾಶ ನೀಡಲಾಗದು. ಸಣ್ಣ ಭಿನ್ನಾಭಿಪ್ರಾಯಗಳನ್ನು ಪತಿ ಮತ್ತು ಹೆಂಡತಿಯ ನಡುವಿನ ಕ್ರೌರ್ಯ ಎನ್ನಲು ಸಾಧ್ಯವಿಲ್ಲ. ಪತಿ- ಪತ್ನಿಯ ನಡುವೆ ರಾತ್ರೋರಾತ್ರಿ ಬದಲಾವಣೆ ಉಂಟಾಗಬೇಕೆಂದು ಯಾವುದೇ ನಿರೀಕ್ಷೆ ಇರಿಸಿಕೊಳ್ಳಬಾರದು. ವೈವಾಹಿಕ ಜೀವನದಲ್ಲಿ ಪತ್ನಿಯಾಗಿ ಮತ್ತು ಪತಿಯಾಗಿ ಬದಲಾಗಲು ಇಬ್ಬರೂ ಪರಸ್ಪರ ಸಮಯ ನೀಡಬೇಕು’’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪತಿಯನ್ನು ಕ್ರೂರವಾಗಿ ನಡೆಸಿಕೊಳ್ಳಲಾಗಿದೆ ಎಂದು ತನ್ನ ವಿರುದ್ಧದ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Also Read
ಪತ್ನಿ ಜೊತೆ ಒಪ್ಪಂದ ಮಾಡಿಕೊಂಡು ಜೀವನಾಂಶ ಪಾವತಿಸುವ ಹೊಣೆಯಿಂದ ಪತಿ ನುಣುಚಿಕೊಳ್ಳಲಾಗದು: ಗುವಾಹಟಿ ಹೈಕೋರ್ಟ್

ಮ್ಯಾಟ್ರಿಮೋನಿಯಲ್ ಜಾಲತಾಣದಲ್ಲಿ ಪತ್ನಿ ತನ್ನ ಜನ್ಮ ದಿನ ಮತ್ತು ಶೈಕ್ಷಣಿಕ ಅರ್ಹತೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು. ಹೆಂಡತಿ ಅಹಂಕಾರಿ, ಆಕೆಯ ಬೆವರು ನಾರುವಂತಿದ್ದು ಇದು ಗಂಭೀರ ಕಾಯಿಲೆಯಾದರೂ ಚಿಕಿತ್ಸೆಗೆ ಸಿದ್ಧಳಿರಲಿಲ್ಲ ಎಂಬುದು ಪತಿಯ ದೂರಾಗಿತ್ತು. ಮತ್ತೊದೆಡೆ ಪತ್ನಿ ತನ್ನ ಪತಿಯೊಂದಿಗೆ ಬಾಳುವ ಆಸೆ ವ್ಯಕ್ತಪಡಿಸಿದ್ದರು.

ಆದರೆ ಪತ್ನಿ ತನ್ನ ವಿರುದ್ಧ ಕ್ರೌರ್ಯ ಎಸಗಿದ್ದಾಳೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದ ಪೀಠ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಕೌಟುಂಬಿಕ ನ್ಯಾಯಾಯ ನೀಡಿದ್ದ ವಿಚ್ಛೇದನ ಆದೇಶವನ್ನು ರದ್ದುಗೊಳಿಸಿತು. ಅಲ್ಲದೆ ವೈವಾಹಿಕ ಹಕ್ಕನ್ನು ಮರುಸ್ಥಾಪಿಸುವ ಕುರಿತಂತೆ ನೀಡಲಾದ ತೀರ್ಪು ಪಾಲಿಸುವವರೆಗೆ ಮಧ್ಯಂತರ ಜೀವನಾಂಶಕ್ಕಾಗಿ ಹೆಂಡತಿಗೆ ತಿಂಗಳಿಗೆ ₹ 8,000 ಪಾವತಿಸುವಂತೆ ಪತಿಗೆ ನಿರ್ದೇಶನ ನೀಡಿತು.

Related Stories

No stories found.
Kannada Bar & Bench
kannada.barandbench.com