ವಾಕ್‌ ಸ್ವಾತಂತ್ರ್ಯದ ದುರ್ಬಳಕೆ; ಬೇಜವಾಬ್ದಾರಿಯುತ ವ್ಯಕ್ತಿಗಳಿಂದ ಪರಿಶೀಲಿಸದೇ ಪ್ರತಿಕ್ರಿಯೆ: ಬೆಂಗಳೂರು ನ್ಯಾಯಾಲಯ

ದೀಪಾಲಿ ಸಿಕಂದ್‌ರ ಮೈಂಡ್‌ಎಸ್ಕೇಪ್‌ ಕ್ಲಬ್‌ನಲ್ಲಿ ಕ್ಲಿಕ್ಕಿಸಿದ ಅತಿಥಿಗಳೊಂದಿಗಿನ ಚಿತ್ರವನ್ನು ಬಳಸಿ ಫೇಸ್‌ಬುಕ್‌, ಲಿಂಕ್ಡ್‌ಇನ್, ಟ್ವಿಟರ್‌ ‍‍& ವಾಟ್ಸಾಪ್‌ಗಳಲ್ಲಿ ಪಸರಿಸಿರುವ ಮಾನಹಾನಿಕರ ವಿಚಾರಗಳ ತೆಗೆದುಹಾಕಲು ನ್ಯಾಯಾಲಯದ ನಿರ್ದೇಶನ.
ವಾಕ್‌ ಸ್ವಾತಂತ್ರ್ಯದ ದುರ್ಬಳಕೆ; ಬೇಜವಾಬ್ದಾರಿಯುತ ವ್ಯಕ್ತಿಗಳಿಂದ ಪರಿಶೀಲಿಸದೇ ಪ್ರತಿಕ್ರಿಯೆ: ಬೆಂಗಳೂರು ನ್ಯಾಯಾಲಯ
Published on

ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ಇತರರೊಂದಿಗೆ ಭೋಜನ ಕೂಟದಲ್ಲಿ ಭಾಗವಹಿಸಿದ್ದರು ಎಂದು ಹೇಳಲಾದ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಚಿತ್ರದ ಕುರಿತ ಘಟನೆಯ ಕುರಿತು ತಿಳಿವಳಿಕೆಯಿಲ್ಲದ ವ್ಯಕ್ತಿಗಳಿಂದ ವಾಕ್‌ ಸ್ವಾತಂತ್ರ್ಯದ ದುರ್ಬಳಕೆಯಾಗಿದೆ ಎಂದು ಬೆಂಗಳೂರು ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಹೇಳಿದೆ.

ಮೈಂಡ್‌ ಎಸ್ಕೇಪ್ಸ್‌ ಕ್ಲಬ್‌ ಮಾಲೀಕರಾದ ದೀಪಾಲಿ ಸಿಕಂದ್‌ ಅವರು ಸಲ್ಲಿಸಿದ್ದ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ 12ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಕೆ ಎನ್‌ ಗಂಗಾಧರ್‌ ಅವರು ಆದೇಶದಲ್ಲಿ ಮೇಲಿನಂತೆ ಹೇಳಿದ್ದಾರೆ.

ಆಕ್ಷೇಪಾರ್ಹ ಚಿತ್ರದಲ್ಲಿರುವ ಇಬ್ಬರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜೆ ಬಿ ಪರ್ದಿವಾಲಾ ಎಂದು ಉಲ್ಲೇಖಿಸಿ ವ್ಯಾಪಕವಾಗಿ ಹಂಚಿಕೊಂಡ ಚಿತ್ರವನ್ನು ತೆಗೆದುಹಾಕುವಂತೆ ಸಾಮಾಜಿಕ ಜಾಲತಾಣಗಳನ್ನು ಕುರಿತು ಜಾನ್‌ ಡೊ ಅಥವಾ ಅಶೋಕ್‌ ಕುಮಾರ್‌ (ಗುರುತಿಸಲಾಗದ ವ್ಯಕ್ತಿ ಅಥವಾ ಸಮೂಹಗಳನ್ನು ಉದ್ದೇಶಿಸಿ ಮಾಡಲಾಗುವ) ಆದೇಶದಲ್ಲಿ ಪೀಠವು ನಿರ್ದೇಶಿಸಿದೆ.

“ಚಿತ್ರವನ್ನು ಹಂಚಿಕೊಂಡಿರುವ ಅಥವಾ ಅದಕ್ಕೆ ವ್ಯಕ್ತವಾಗಿರುವ ಪ್ರತಿಕ್ರಿಯೆಗಳು ತೀವ್ರ ಮಾನಹಾನಿಕಾರಕ. ಇದು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆಯಲ್ಲದೆ ಮತ್ತೇನು ಅಲ್ಲ. ತಿಳಿವಳಿಕೆಯಿಲ್ಲದ ಜನರು ಆಧಾರರಹಿತ ಪ್ರತಿಕ್ರಿಯಿಂದ ಎದುರಾಗಬಹುದಾದ ಪರಿಣಾಮದ ಬಗ್ಗೆ ಯೋಚಿಸದೇ ದುರದೃಷ್ಟಕರ ಕಳಂಕ ಹಚ್ಚುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈಚೆಗೆ ಇಂತಹ ಸಂದೇಶಗಳು ಜನಮಾನಸಕ್ಕೆ ಕಾಳ್ಗಿಚ್ಚಿನಂತೆ ತಲುಪುತ್ತಿದ್ದು, ಅದರ ನೈಜತೆಯನ್ನು ಪರಿಶೀಲಿಸದೇ ಜನರು ನಂಬುತ್ತಾರೆ. ಇಂಥ ಅಭಿಪ್ರಾಯ ವ್ಯಕ್ತಪಡಿಸುವವರು ಬೇಜವಾಬ್ದಾರಿಯುತ ಮತ್ತು ಲಂಗುಲಗಾಮು ಇಲ್ಲದ ಮನಸ್ಥಿತಿಯವರಾಗಿದ್ದು, ಇಂಥ ಚಟುವಟಿಕೆಯನ್ನು ನಿರ್ಬಂಧಿಸಬೇಕಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.

“ವಾಸ್ತವಿಕ ವಿಚಾರಗಳನ್ನು ಜನರಿಗೆ ತಿಳಿಸುವುದು ತಪ್ಪಲ್ಲ. ತಮಗೆ ಅರಿವಿಲ್ಲದಂತೆ ಏನೆಲ್ಲಾ ಆಗುತ್ತಿದೆ ಎಂದು ತಿಳಿದುಕೊಳ್ಳುವ ಎಲ್ಲಾ ಹಕ್ಕು ಜನರಿಗೆ ಇದೆ. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿದ್ದು, ಸಂವಹನದ ನೆಪದಲ್ಲಿ ಅವಾಸ್ತವಿಕ ವಿಚಾರಗಳನ್ನು ಹಂಚಿಕೆ ಮಾಡುವುದು ಖಂಡನೀಯ. ಇದು ಗೌರವಾನ್ವಿತ ನ್ಯಾಯಮೂರ್ತಿಗಳು ಮತ್ತು ಕ್ಲಬ್‌ನಲ್ಲಿ ಭೋಜನ ಕೂಟದಲ್ಲಿ ಭಾಗವಹಿಸಿದ್ದ ಫಿರ್ಯಾದುದಾರರ ಅತಿಥಿಗಳ ಘನತೆಗೆ ಚ್ಯುತಿ ಉಂಟು ಮಾಡುವುದಲ್ಲದೇ ಬೇರೇನೂ ಅಲ್ಲ. ಇಂಥ ಚಟುವಟಿಕೆಗಳನ್ನು ತಕ್ಷಣ ಹತ್ತಿಕ್ಕಬೇಕಿದೆ” ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

ದೀಪಾಲಿ ಸಿಕಂದ್‌ ಅವರು ಮೈಂಡ್‌ ಎಸ್ಕೇಪ್ಸ್‌ ಕ್ಲಬ್‌ನಲ್ಲಿ ಕೆಲವು ಅತಿಥಿಗಳ ಜೊತೆ ಕ್ಲಿಕ್ಕಿಸಲಾದ ಚಿತ್ರವನ್ನು ಬಳಸಿ ಹಾಕಿರುವ ಮಾನಹಾನಿಕರ ವಿಚಾರಗಳನ್ನು ತೆಗೆದು ಹಾಕುವಂತೆ ಫೇಸ್‌ಬುಕ್‌, ಲಿಂಕ್ಡ್‌ಇನ್‌, ಟ್ವಿಟರ್‌ ಮತ್ತು ವಾಟ್ಸಾಪ್‌ ಸಂಸ್ಥೆಗಳಿಗೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೇ, ಫಿರ್ಯಾದುದಾರರ ವಿರುದ್ಧ ಮಾನಹಾನಿಕಾರಕ ಸಂಗತಿಗಳನ್ನು ಪ್ರಕಟಿಸದಂತೆ ಪ್ರತಿವಾದಿಗಳಿಗೆ ನ್ಯಾಯಾಲಯವು ನಿರ್ಬಂಧ ವಿಧಿಸಿದೆ.

ಜುಲೈ 1ರಂದು ಹಿರಿಯ ಪತ್ರಕರ್ತ ಹಾಗೂ ಹಿಂದೂ ಸಮೂಹ ಸಂಸ್ಥೆಯ ಎನ್‌ ರಾಮ್‌ ಮತ್ತು ಅವರ ಪತ್ನಿ ಮರಿಯಮ್‌ ಅವರು ತಮಿಳುನಾಡಿನಲ್ಲಿರುವ ಸಿಕಂದ್‌ ಒಡೆತನದ ಮೈಂಡ್‌ ಎಸ್ಕೇಪ್ಸ್‌ ಕ್ಲಬ್‌ನಲ್ಲಿ ಭೋಜನ ಕೂಟ ಆಯೋಜಿಸಿದ್ದರು. ಇದರಲ್ಲಿ ತಮಿಳುನಾಡಿನ ಹಣಕಾಸು ಸಚಿವ ಡಾ. ಪಳನಿವೇಲ್‌ ತಿಯಾಗರಾಜನ್‌, ಸಿಪಿಐ (ಎಂ) ನಾಯಕರಾದ ಪ್ರಕಾಶ್‌ ಮತ್ತು ಬೃಂದಾ ಕಾರಟ್‌, ಎನ್‌ಡಿಟಿವಿ ಸಂಸ್ಥಾಪಕರಾದ ರಾಧಿಕಾ ಮತ್ತು ಪ್ರಣಯ್‌ ರಾಯ್‌ ಭಾಗವಹಿಸಿದ್ದರು. ಈ ವೇಳೆ ಕ್ಲಿಕ್ಕಿಸಿದ್ದ ಚಿತ್ರವನ್ನು ಸಿಕಂದ್‌ ಅವರು ತಮ್ಮ ಫೇಸ್‌ಬುಕ್‌ ಮತ್ತು ಲಿಂಕ್ಡ್‌ಇನ್ ಖಾತೆಯಲ್ಲಿ ಹಂಚಿಕೊಂಡಿದ್ದರು.

Also Read
ಸುಪ್ರೀಂ ನ್ಯಾಯಮೂರ್ತಿಗಳ ತಿರುಚಲಾದ ಚಿತ್ರ: ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಲು ಬೆಂಗಳೂರು ನ್ಯಾಯಾಲಯದ ನಿರ್ದೇಶನ

ಪ್ರವಾದಿ ಮೊಹಮ್ಮದ್‌ ಬಗ್ಗೆ ಆಕ್ಷೇಪಾರ್ಹವಾದ ಹೇಳಿಕೆ ನೀಡುವ ಮೂಲಕ ವಿವಾದದ ಕೇಂದ್ರಬಿಂದುವಾಗಿರುವ ಬಿಜೆಪಿ ಅಮಾನತುಗೊಂಡಿರುವ ವಕ್ತಾರೆ ನೂಪುರ್‌ ಶರ್ಮಾ ಅವರು ತಮ್ಮ ವಿರುದ್ಧದ ಎಲ್ಲಾ ಎಫ್‌ಐಆರ್‌ಗಳನ್ನು ಒಂದೇ ಕಡೆ ವಿಚಾರಣೆ ನಡೆಸಲು ಆದೇಶಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾಗ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಪರ್ದಿವಾಲಾ ಅವರ ನೇತೃತ್ವದ ವಿಭಾಗೀಯ ಪೀಠವು ಶರ್ಮಾರ ಬಿಡುಬೀಸು ವರ್ತನೆಯ ಬಗ್ಗೆ ಮೌಖಿಕವಾಗಿ ಕಟು ಟೀಕೆ ಮಾಡಿತ್ತು. ಇದರ ಬೆನ್ನಿಗೇ, ಕೆಲವರು ಸಿಕಂದ್‌ ಕ್ಲಿಕ್ಕಿಸಿದ ಚಿತ್ರವನ್ನು ತಿರುಚಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಪರ್ದಿವಾಲಾ ಅವರು ನಕ್ಸಲ್‌ ಗುಂಪು ಮತ್ತು ಕಮ್ಯುನಿಸ್ಟರ ಜೊತೆ ಭೋಜನ ಮಾಡಿದ್ದಾರೆ ಎಂದು ಆರೋಪಿಸಿದ್ದರು.

Kannada Bar & Bench
kannada.barandbench.com