ಪ್ರಚೋದನಕಾರಿ ಭಾಷಣಗಳ ಮೂಲಕ ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿರುವ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ಹಾಗೂ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಅವರಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಶುಕ್ರವಾರ ಕಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ತೀರ್ಥಂಕರ್ ಘೋಷ್ ನೇತೃತ್ವದ ಪೀಠವು ವಿಚಾರಣೆಯನ್ನು ಜೂನ್ 18ಕ್ಕೆ ನಿಗದಿಗೊಳಿಸಿದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ವಿಥುನ್ ಚಕ್ರವರ್ತಿಗೆ ಕಾಲಾವಕಾಶ ಕಲ್ಪಿಸುವಂತೆ ತನಿಖಾಧಿಕಾರಿಗೆ ಪೀಠ ಆದೇಶಿಸಿದೆ.
“ಚಕ್ರವರ್ತಿ ಅವರ ಇಮೇಲ್ ಮಾಹಿತಿಯನ್ನು ಅರ್ಜಿದಾರರು ಅಥವಾ ಅವರನ್ನು ಪ್ರತಿನಿಧಿಸುತ್ತಿರುವ ಅಡ್ವೊಕೇಟ್ ಆನ್ ರೆಕಾರ್ಡ್ ಸರ್ಕಾರದ ಜೊತೆ ಹಂಚಿಕೊಳ್ಳಬೇಕು. ಇದರಿಂದ ತನಿಖಾಧಿಕಾರಿ ಪ್ರಶ್ನೆಗಳನ್ನು ಕೇಳಲು ಅನುಕೂಲವಾಗುತ್ತದೆ. ಅಲ್ಲದೇ, ಅರ್ಜಿದಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಸಮಯ ಹೊಂದಿಸಿಕೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.
ಬಿಜೆಪಿ ಸೇರಿದ ಬಳಿಕ ಚಕ್ರವರ್ತಿ ಅವರು ಮಾರ್ಚ್ 7ರಂದು ಸಮಾವೇಶವೊಂದರಲ್ಲಿ ಭಾಗವಹಿಸಿ ತಮ್ಮ ಚುನಾವಣಾ ಭಾಷಣವೊಂದಲ್ಲಿ “ನಾನು ನಿಮಗೆ ಇಲ್ಲಿ ಹೊಡೆದರೆ, ನೀವು ಸ್ಮಶಾನಕ್ಕೆ ಹೋಗಿಬೀಳುತ್ತೀರಿ” ಮತ್ತು “ನಾಗರ ಹಾವಿನ ಒಂದು ಕಡಿತದಿಂದ ನೀವು ಗೋಡೆಯ ಮೇಲಿನ ಫೋಟೊ ಆಗಲಿದ್ದೀರಿ” ಎಂದು ಬೆಂಗಾಳಿ ಸಿನಿಮಾದ ಎರಡು ಜನಪ್ರಿಯ ಸಂಭಾಷಣೆಗಳನ್ನು ಹೇಳಿದ್ದರು.
ಈ ಎರಡೂ ಹೇಳಿಕೆಗಳೂ ಚುನಾವಣೋತ್ತರ ಹಿಂಸಾಚಾರಕ್ಕೆ ನಾಂದಿ ಹಾಡಿವೆ ಎಂದು ಟಿಎಂಸಿ ಮುಖಂಡರೊಬ್ಬರು ಮೇ 6ರಂದು ದೂರು ದಾಖಲಿಸಿದ್ದರು. ತಮ್ಮ ವಿರುದ್ಧದ ದೂರು ವಜಾಗೊಳಿಸುವಂತೆ ಮನವಿ ಸಲ್ಲಿಸಿದ್ದ ಚಕ್ರವರ್ತಿ ಅವರು ಮನರಂಜನೆಗಾಗಿ ಆ ಸಂಭಾಷಣೆಗಳನ್ನು ಬಳಸಿದ್ದು, ತಾನು ಮುಗ್ಧ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಮತ್ತು ಅಯಾನ್ ಭಟ್ಟಾಚಾರ್ಯ ಅವರು ಚಕ್ರವರ್ತಿ ಪ್ರತಿನಿಧಿಸಿದ್ದರು.