ಸಚಿವರಾಗುವ ವಿಶ್ವನಾಥ್‌ ಕನಸಿಗೆ ಹಿನ್ನಡೆಯಾಗಿರುವುದು ಏಕೆ? ಇಲ್ಲಿದೆ ಹೈಕೋರ್ಟ್‌ ಆದೇಶದ ಮಾಹಿತಿ

ಸಂವಿಧಾನದ 164 (1) (b) ಮತ್ತು 361 (B) ವಿಧಿಯ ಅಡಿ ವಿಶ್ವನಾಥ್‌ ಅವರು ಅನರ್ಹತೆಗೆ ಒಳಪಡಲಿದ್ದು ಸಚಿವರಾಗಲು ಅರ್ಹರಲ್ಲ ಎಂದಿರುವ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ.
R Shankar, AH Vishwanath, and MTB Nagaraj
R Shankar, AH Vishwanath, and MTB Nagaraj
Published on

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್‌ ಸದಸ್ಯ ಎ ಎಚ್‌ ವಿಶ್ವನಾಥ್‌ ಅವರು ಸಚಿವರಾಗಲು ಅನರ್ಹ ಎಂದು ಸೋಮವಾರ ಕರ್ನಾಟಕ ಹೈಕೋರ್ಟ್‌ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ.

ಸಂವಿಧಾನದ 164 (1) (b) ಮತ್ತು 361 (B) ವಿಧಿಯ ಅಡಿ ವಿಶ್ವನಾಥ್‌ ಅವರು ಅನರ್ಹತೆಗೆ ಒಳಪಟ್ಟಿದ್ದು ಸಚಿವರಾಗಲು ಅರ್ಹರಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಆರ್‌ ಶಂಕರ್‌ ಹಾಗೂ ಎಂಟಿಬಿ ನಾಗರಾಜ್‌ ಅವರು ಮೇಲ್ನೋಟಕ್ಕೆ ಸಂವಿಧಾನದ 164 (1) (b) ಮತ್ತು 361 (B) ವಿಧಿಯ ಅಡಿ ಅನರ್ಹವಾಗಿಲ್ಲ. ಆದ್ದರಿಂದ ಅವರಿಗೆ ಆದೇಶ ಅನ್ವಯಿಸುವುದಿಲ್ಲ ಎಂದು ವಿಭಾಗೀಯ ಪೀಠ ಹೇಳಿರುವುದರಿಂದ ಶಂಕರ್‌ ಮತ್ತು ನಾಗರಾಜ್‌ ನಿರಾಳರಾಗಿದ್ದಾರೆ.

“ಸಚಿವ ಸಂಪುಟಕ್ಕೆ ಸೇರಿಸುಕೊಳ್ಳುವಾಗ ಶಿಫಾರಸ್ಸು ಮಾಡುವ ಸಂದರ್ಭದಲ್ಲಿ ವಿಶ್ವನಾಥ್‌ ಅವರ ಅನರ್ಹತೆಯ ವಿಚಾರವನ್ನು ಮುಖ್ಯಮಂತ್ರಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಒಂದೊಮ್ಮೆ ಮುಖ್ಯಮಂತ್ರಿಯವರು ವಿಶ್ವನಾಥ್‌ ಅವರ ಹೆಸರನ್ನು ಶಿಫಾರಸ್ಸು ಮಾಡಿದರೂ ರಾಜ್ಯಪಾಲರು ಅನರ್ಹತೆ ವಿಚಾರವನ್ನು ಪರಿಗಣಿಸಬೇಕು.”
ಕರ್ನಾಟಕ ಹೈಕೋರ್ಟ್‌

“ಪಕ್ಷಾಂತರದ ಹಿನ್ನೆಲೆಯಲ್ಲಿ ಅನರ್ಹತೆ ಶಿಕ್ಷೆಗೆ ಗುರಿಯಾಗಿದ್ದ ವಿಶ್ವನಾಥ್‌ ಮತ್ತು ನಾಗರಾಜ್‌ ಅವರು ಬಿಜೆಪಿಯಿಂದ ಉಪಚುನಾವಣೆಯಲ್ಲಿ ಕಣಕ್ಕಿಳಿದು ತಮ್ಮತಮ್ಮ ಕ್ಷೇತ್ರಗಳಲ್ಲಿ ಪರಾಭವಗೊಂಡಿದ್ದರು. ಬಳಿಕ ಪ್ರತಿವಾದಿಗಳನ್ನು ಸಚಿವರನ್ನಾಗಿಸುವ ಏಕೈಕ ಉದ್ದೇಶದಿಂದ ಹಿಂಬಾಗಿಲ ಮೂಲಕ ವಿಧಾನ ಪರಿಷತ್‌ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ” ಎಂದು ಅರ್ಜಿದಾರ ಹಾಗೂ ವಕೀಲ ಎ ಎಸ್‌ ಹರೀಶ್‌ ಪರ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ವಾದಿಸಿದರು.

ಅನರ್ಹಗೊಂಡಿರುವ ಶಾಸಕ ಸಚಿವರಾಗಲು ಅದೇ ವಿಧಾನಸಭಾ ಅವಧಿಯಲ್ಲಿ ನಿರ್ದಿಷ್ಟ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಪುನರಾಯ್ಕೆಯಾಗಬೇಕು ಎಂದು ಮನವಿಯಲ್ಲಿ ವಿವರಿಸಲಾಗಿದೆ.

Also Read
ಪವರ್‌ ಟಿವಿ ಮುಖ್ಯಸ್ಥ ರಾಕೇಶ್‌ ಶೆಟ್ಟಿಗೆ ನಿರೀಕ್ಷಣಾ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್‌

ಕಳೆದ ವರ್ಷದ ಜುಲೈನಲ್ಲಿ ವಿಧಾನ ಸಭೆಯ ಸ್ಪೀಕರ್ ಅವರು‌ ಮೂವರು ಪ್ರತಿವಾದಿಗಳನ್ನು ಅನರ್ಹಗೊಳಿಸಿತ್ತು. ಸ್ಪೀಕರ್‌ ತೀರ್ಮಾನವನ್ನು 2019ರ ನವೆಂಬರ್‌ 13ರಂದು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ರಾಜಕೀಯವಾಗಿ ಲಾಭದಾಯಕ ಹುದ್ದೆಗಳಿಗಾಗಲಿ ಅಥವಾ ಸಚಿವ ಸ್ಥಾನ ನೀಡುವಂತಿಲ್ಲ ಎಂದು ಸಾಂವಿಧಾನ ನಿಬಂಧನೆಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಮನವಿಗಳು ಅಕಾಲಿಕ ಎಂದು ಅವುಗಳನ್ನು ವಿರೋಧಿಸಿದರು. ಹಿರಿಯ ವಕೀಲರಾದ ಅಶೋಕ್‌ ಹಾರನಹಳ್ಳಿ ಮತ್ತು ಉದಯ್‌ ಹೊಳ್ಳ ಪ್ರತಿವಾದಿಗಳನ್ನು ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com