ಹಾಸನ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮೊಮ್ಮಗ ಸೂರಜ್ ರೇವಣ್ಣ ಅವರು ತಮ್ಮ ಆಸ್ತಿ, ಪತ್ನಿ ಮತ್ತು ಅವರ ಹೆಸರಿನಲ್ಲಿರುವ ಆಸ್ತಿ ಮಾಹಿತಿಯನ್ನು ಘೋಷಿಸಿಲ್ಲ. ಹೀಗಾಗಿ ಅವರ ಉಮೇದುವಾರಿಕೆ ವಜಾ ಮಾಡಬೇಕು ಎಂದು ಕೋರಿರುವ ಮನವಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಗ್ರಾಮದ ಹರೀಶ್ ಕೆ ಎಲ್ ಎಂಬವರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ರಾಜ್ಯ, ಕೇಂದ್ರ ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿಗೆ ಪ್ರತಿಕ್ರಿಯಿಸಲು ಆದೇಶಿಸಿದ್ದು, ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿದೆ.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು "ಸೂರಜ್ ರೇವಣ್ಣ ಅವರು ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿರುವ ನಮೂನೆ 26ರ ಅಡಿಯಲ್ಲಿನ ಪ್ರಮಾಣ ಪತ್ರದಲ್ಲಿ ಅನೇಕ ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ. ಆದ್ದರಿಂದ, ಇವರ ನಾಮಪತ್ರ ತಿರಸ್ಕರಿಸಬೇಕು ಅಥವಾ ಆಯುಕ್ತರಿಗೆ ಸೂಕ್ತ ನಿರ್ದೇಶನ ನೀಡಬೇಕು" ಎಂದು ಕೋರಿದರು.
ವಕೀಲ ಜಿ ದೇವರಾಜೇಗೌಡ ಅವರ ಮೂಲಕ ಸಲ್ಲಿಸಲಾಗಿರುವ ಮನವಿಯಲ್ಲಿ ಸೂರಜ್ ರೇವಣ್ಣ ಅವರು 2017ರಲ್ಲಿ ಸಾಗರಿಕಾ ಅವರೊಂದಿಗೆ ವಿವಾಹವಾಗಿದ್ದಾರೆ. ಆದರೆ, ಚುನಾವಣಾ ಅಫಿಡವಿಟ್‌ನಲ್ಲಿ ಪತ್ನಿ ಹಾಗೂ ಅವಲಂಬಿತರ ಹೆಸರಿನಲ್ಲಿರುವ ಆಸ್ತಿ ಮಾಹಿತಿ ಘೋಷಣೆ ಮಾಡಿಲ್ಲ.
ಅಲ್ಲದೇ, ಹೊಳೆನರಸೀಪುರದಲ್ಲಿರುವ ಚೆನ್ನಾಂಬಿಕಾ ಕನ್ವೆನ್ಷನ್ ಹಾಲ್‌ನ ಪಾಲುದಾರ ಎಂದು ಸೂರಜ್ ಅವರು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಆದರೆ, ಉದ್ದೇಶಪೂರ್ವಕವಾಗಿ ಆ ಕನ್ವೆನ್ಷನ್ ಹಾಲ್‌ಗೆ ಸಂಬಂಧಿಸಿದ ಬ್ಯಾಂಕ್ ಖಾತೆ ನಿರ್ವಹಣೆ ಮಾಹಿತಿಯನ್ನು ಬಚ್ಚಿಟ್ಟಿದ್ದಾರೆ. ಸದರಿ ಕನ್ವೆನ್ಷನ್ ಹಾಲ್‌ಗೆ ಅವರು ಪಾಲುದಾರರಾಗಿದ್ದರೂ ಸಹಿ ಮಾಡುವ ಅಧಿಕಾರ ಸೂರಜ್ ಅವರಿಗೆ ಮಾತ್ರ ಇದೆ. ಇದನ್ನು ಅವರು ಚುನಾವಣಾ ಅಫಿಡವಿಟ್‌ನಲ್ಲಿ ಘೋಷಿಸಿಲ್ಲ. ಇದು ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 33(ಎ) ಮತ್ತು 125(ಎ) ಗೆ ವಿರುದ್ಧವಾಗಿದೆ. ಹೀಗಾಗಿ, ಸೂರಜ್ ಅವರ ಉಮೇದುವಾರಿಕೆಯನ್ನು ತಿರಸ್ಕರಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಮಾಜಿ ಸಚಿವ ಹಾಗೂ ಹೊಳೆನರಸೀಪುರದ ಜೆಡಿಎಸ್ ಶಾಸಕರಾಗಿರುವ ಎಚ್ ಡಿ ರೇವಣ್ಣ ಅವರ ಮೊದಲ ಪುತ್ರರಾದ ಸೂರಜ್ ರೇವಣ್ಣ ಅವರು ವೃತ್ತಿಯಿಂದ ವೈದ್ಯರಾಗಿದ್ದಾರೆ. ಸೂರಜ್ ಸಹೋದರ ಪ್ರಜ್ವಲ್ ರೇವಣ್ಣ ಅವರು ಹಾಸನ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದಾರೆ. ಸೂರಜ್ ತಾಯಿ ಭವಾನಿ ಅವರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯಾಗಿದ್ದಾರೆ.
ಹಾಸನ ಸೇರಿದಂತೆ 25 ಸ್ಥಳೀಯ ಸಂಸ್ಥೆ ಕ್ಷೇತ್ರಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.