ಮೋದಿ - ಅದಾನಿ ಪ್ರೇಮ ಸಂಬಂಧ ಹೇಳಿಕೆ: ಕಾಂಗ್ರೆಸ್ ನಾಯಕನ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ತನಿಖೆ ಇನ್ನೂ ನಡೆಯುತ್ತಿದೆ ಮತ್ತು ಅಲಾಹಾಬಾದ್ ಹೈಕೋರ್ಟ್ ಐಪಿಸಿ ಸೆಕ್ಷನ್ 153 ಎ ಅಡಿಯ ಅಪರಾಧದ ವಾದವನ್ನು ತಿರಸ್ಕರಿಸಿದೆ ಎಂಬ ಅಂಶವನ್ನು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಗಮನಿಸಿತು.
PM Modi, Gautam Adani and Supreme Court
PM Modi, Gautam Adani and Supreme Court
Published on

ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ನಡುವೆ ಪ್ರೇಮ ಸಂಬಂಧವಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಸಚಿನ್ ಚೌಧರಿ ವಿರುದ್ಧ ದಾಖಲಾದ ದ್ವೇಷ ಭಾಷಣದ ಪ್ರಕರಣ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಈಚೆಗೆ ನಿರಾಕರಿಸಿದೆ [ಸಚಿನ್‌ ಚೌಧರಿ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ].

ತನಿಖೆ ಇನ್ನೂ ನಡೆಯುತ್ತಿದೆ ಮತ್ತು ಅಲಾಹಾಬಾದ್ ಹೈಕೋರ್ಟ್ ಐಪಿಸಿ ಸೆಕ್ಷನ್ 153 ಎ ಅಡಿಯ ಅಪರಾಧದ ವಾದವನ್ನು ತಿರಸ್ಕರಿಸಿದೆ ಎಂಬ ಅಂಶವನ್ನು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಗಮನಿಸಿತು.

ಸೆಕ್ಷನ್ ಅಡಿಯಲ್ಲಿ ಚೌಧರಿ ವಿರುದ್ಧದ ಕ್ರಿಮಿನಲ್ ದೂರನ್ನು ರದ್ದುಗೊಳಿಸಲು ಅಲಾಹಾಬಾದ್ ಹೈಕೋರ್ಟ್‌ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

Also Read
ಮೋದಿ ಉಪನಾಮ ಹೇಳಿಕೆ: ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಗಾಂಧಿ ವಿರುದ್ಧದ ದೋಷಿ ಆದೇಶಕ್ಕೆ ಸುಪ್ರೀಂ ತಡೆ

ಸಂಭಾಲ್‌ನಲ್ಲಿ ನಡೆದಿದ್ದ ಪತ್ರಿಕಾಗೋಷ್ಠಿ ವೇಳೆ ಚೌಧರಿ ಅವರು ಪ್ರಧಾನಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ಬಿಜೆಪಿ ಯುವ ಘಟಕದ ಮುಖಂಡರೊಬ್ಬರು ದೂರು ನೀಡಿದ್ದರು.

ಪ್ರಧಾನಿ ಅವರು ತನಗೆ ಹಾಗೂ ಉಳಿದ ಬಿಜೆಪಿ ಸದಸ್ಯರ ಪಾಲಿಗೆದೇವರ ಸಮಾನ. ಅವರ ವಿರುದ್ಧ ನೀಡಿದ ಹೇಳಿಕೆಯಿಂದಾಗಿ ತಮ್ಮ ಹಾಗೂ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರುದಾರರು ಹೇಳಿದ್ದರು. ಐಪಿಸಿ ಸೆಕ್ಷನ್‌ 153 ಎ ಮತ್ತು ಸೆಕ್ಷನ್‌ 505(2) (ಸಮುದಾಯಗಳ ನಡುವೆ ದ್ವೇಷ ಬಿತ್ತುವಂತಹ ಹೇಳಿಕೆ ನೀಡುವುದು ಅಥವಾ ಸಮುದಾಯಗಳ ನಡುವೆ ಕೆಟ್ಟದನ್ನು ಉಂಟುಮಾಡಲು ಕುಮ್ಮಕ್ಕು ನೀಡುವುದು) ಅಡಿ ಬರುತ್ತದೆ ಎಂದು ತಿಳಿಸಿದ್ದ ಹೈಕೋರ್ಟ್‌ ಪ್ರಕರಣ ರದ್ದತಿಗೆ ನಿರಾಕರಿಸಿತ್ತು.

ಎಫ್‌ಐಆರ್‌ನಲ್ಲಿರುವ ಆರೋಪಗಳು ನಿಜವಾಗಿದ್ದರೂ ಅದು ಐಪಿಸಿಯ ಸೆಕ್ಷನ್ 153 ಎ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರಾದರೂ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿತು.

Kannada Bar & Bench
kannada.barandbench.com