[ಗ್ರಾಹಕ ವ್ಯಾಜ್ಯ] ರಾಯಭಾರಿಯಾದ ಮಾತ್ರಕ್ಕೆ ಮೋಹನ್‌ ಲಾಲ್‌ ವಿರುದ್ಧ ಪ್ರಕರಣ ದಾಖಲಿಸಲಾಗದು: ಕೇರಳ ಹೈಕೋರ್ಟ್‌

ಜಾಹೀರಾತಿನಲ್ಲಿರುವ ಖ್ಯಾತನಾಮರಿಗೂ ಮತ್ತು ವಂಚನೆಗೆ ಕಾರಣವಾದ ವಹಿವಾಟಿನ ನಡುವೆ ನೇರ ಸಂಪರ್ಕವಿದ್ದರೆ ಮಾತ್ರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಸಲೆಬ್ರಿಟಿ ಅನುಮೋದಕರನ್ನು ಹೊಣೆಗಾರರನ್ನಾಗಿ ಮಾಡಬಹುದು ಎಂದ ನ್ಯಾಯಾಲಯ.
Mohanlal
Mohanlal Facebook
Published on

ಮಣಪ್ಪುರಂ ಫೈನಾನ್ಸ್‌ನ ಜಾಹೀರಾತುಗಳಲ್ಲಿ ಪ್ರಚಾರ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ಜನಪ್ರಿಯ ಮಲಯಾಳಂ ನಟ ಮೋಹನ್ ಲಾಲ್ ವಿರುದ್ಧದ ಗ್ರಾಹಕ ನ್ಯಾಯಾಲಯದ ಪ್ರಕರಣವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ [ನಟ ಮೋಹನ್ ಲಾಲ್ ವಿಶ್ವನಾಥನ್ ವಿರುದ್ಧ ಕೇರಳ ರಾಜ್ಯ ಮತ್ತು ಇತರರು].

ಜಾಹೀರಾತುಗಳಲ್ಲಿ ಮಣಪ್ಪುರಂ ಅವರ ಸೇವೆಗಳ ಕುರಿತಾದ ಗ್ರಾಹಕರ ದೂರುಗಳಿಗೆ ನಟನನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಜಿಯಾದ್ ರೆಹಮಾನ್ ಎ ಎ ಅಭಿಪ್ರಾಯಪಟ್ಟಿದ್ದಾರೆ. ಜಾಹೀರಾತಿನಲ್ಲಿರುವ ಖ್ಯಾತನಾಮರಿಗೂ ಮತ್ತು ವಂಚನೆಗೆ ಕಾರಣವಾದ ವಹಿವಾಟಿನ ನಡುವೆ ನೇರ ಸಂಪರ್ಕವಿದ್ದರೆ ಮಾತ್ರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಸಲೆಬ್ರಿಟಿ ಅನುಮೋದಕರನ್ನು ಹೊಣೆಗಾರರನ್ನಾಗಿ ಮಾಡಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Also Read
ಆನೆ ದಂತ ಪ್ರಕರಣ: ನಟ ಮೋಹನ್‌ ಲಾಲ್‌ಗೆ ಹಿನ್ನಡೆ; ಮಾಲೀಕತ್ವ ಪ್ರಮಾಣಪತ್ರಗಳು ಕಾನೂನುಬಾಹಿರವೆಂದ ಕೇರಳ ಹೈಕೋರ್ಟ್‌

ಗ್ರಾಹಕ ರಕ್ಷಣಾ ಕಾಯ್ದೆ, 2019ರ ಅಡಿ ಅನುಮೋದಕರ ಹೊಣೆಗಾರಿಕೆಯನ್ನು ದಾರಿತಪ್ಪಿಸುವ ಜಾಹೀರಾತುಗಳ ವಿಷಯಕ್ಕೆ ಸಂಬಂಧಿಸಿದ ಸೆಕ್ಷನ್ 21ರ ಅಡಿಯ ವಿಚಾರಣೆಗಳಿಗೆ ಮಾತ್ರ ಸೀಮಿತಗೊಳಿಸಿದೆ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.

ಸೇವೆಗಳನ್ನು ಅನುಮೋದಿಸುವಲ್ಲಿ ಖ್ಯಾತನಾಮರ ವೈಯಕ್ತಿಕ ಒಳಗೊಳ್ಳುವಿಕೆ ಅಥವಾ ಗ್ರಾಹಕ ತನ್ನ ದೂರಿನಲ್ಲಿ ಉಲ್ಲೇಖಿಸಲಾದ ವಹಿವಾಟಿನೊಂದಿಗೆ ಖ್ಯಾತನಾಮ ವ್ಯಕ್ತಿಯ ನೇರ ಪಾಲುದಾರಿಕೆ ಇಲ್ಲದಿದ್ದರೆ, ಸಾಮಾನ್ಯ ಗ್ರಾಹಕರು ತಮ್ಮ ದೂರುಗಳಲ್ಲಿ ಆ ಖ್ಯಾತನಾಮ ಅನುಮೋದಕರ ಮೇಲೆ ಹೊಣೆಗಾರಿಕೆಯನ್ನು ಹೇರಲು ಈ ಕಾನೂನು ಅನುಮತಿಸುವುದಿಲ್ಲ ಎಂದು ನ್ಯಾಯಾಲಯವು ತಿಳಿಸಿತು.

"ಒಬ್ಬ ವ್ಯಕ್ತಿಯು 'ಅನುಮೋದಕ' ಎಂಬ ವ್ಯಾಖ್ಯಾನದೊಳಗೆ ಬಂದಾಕ್ಷಣಕ್ಕೆ, ನಿರ್ದಿಷ್ಟ ವಹಿವಾಟಿನಲ್ಲಿ ಅವರ ನೇರ ಪಾಲುಗೊಳ್ಳುವಿಕೆ ಇಲ್ಲದ ಹೊರತು, ಅವರನ್ನು ಅನ್ಯಾಯದ ವ್ಯಾಪಾರ ಚಟುವಟಿಕೆ ಅಥವಾ ಸೇವೆಯ ಕೊರತೆಗೆ ನೇರ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ" ಎಂದು ನ್ಯಾಯಾಲಯದ ತೀರ್ಪು ಹೇಳಿದೆ.

Also Read
ನೂರರ ಆರ್ಡರ್ ತಲುಪಿಸದೇ ಹೋದ ಜೊಮಾಟೊಗೆ ಅರವತ್ತು ಸಾವಿರ ರೂಪಾಯಿ ಪರಿಹಾರ ನೀಡಲು ಸೂಚಿಸಿದ ಧಾರವಾಡ ಗ್ರಾಹಕ ಆಯೋಗ

ತಿರುವನಂತಪುರಂ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಮತ್ತು ರಾಜ್ಯ ಗ್ರಾಹಕ ಆಯೋಗವು ಮಣಪ್ಪುರಂ ಪೈನಾನ್ಸ್‌ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನೀಡಿದ್ದ ಆದೇಶಗಳನ್ನು ಪ್ರಶ್ನಿಸಿ ಮೋಹನ್ ಲಾಲ್ ಹೈಕೋರ್ಟ್ ಮೊರೆ ಹೋಗಿದ್ದರು.

ಮಣಪ್ಪುರಂ ಫೈನಾನ್ಸ್ ವಿರುದ್ಧದ ಗ್ರಾಹಕ ಪ್ರಕರಣದಲ್ಲಿ ಅವರನ್ನು ಪ್ರತಿವಾದಿಯನ್ನಾಗಿ ಮಾಡಿರುವುದರಿಂದ ಕೈಬಿಡಲು ಗ್ರಾಹಕ ವೇದಿಕೆ ನಿರಾಕರಿಸಿತ್ತು.

ಕ್ಯಾಥೋಲಿಕ್ ಸಿರಿಯನ್ ಬ್ಯಾಂಕಿನಲ್ಲಿ ಆರಂಭದಲ್ಲಿ ಚಿನ್ನಾಭರಣಗಳನ್ನು ಒತ್ತೆ ಇಟ್ಟಿದ್ದ ಇಬ್ಬರು ಸಾಲಗಾರರು ನಂತರ ಕಡಿಮೆ ಬಡ್ಡಿದರದ ಭರವಸೆ ನೀಡಿ ಮಣಪ್ಪುರಂ ಫೈನಾನ್ಸ್‌ಗೆ ತಮ್ಮ ಸಾಲವನ್ನು ವರ್ಗಾಯಿಸಿದ ದೂರಿನಿಂದ ಈ ಗ್ರಾಹಕ ಪ್ರಕರಣ ಉದ್ಭವಿಸಿತ್ತು.

ಮೋಹನ್ ಲಾಲ್ ಅವರ ಜಾಹೀರಾತುಗಳಲ್ಲಿ ಪ್ರಚಾರ ಮಾಡಿದಂತೆ ವಾರ್ಷಿಕ ಶೇಕಡಾ 12 ರಷ್ಟು ಮಾತ್ರ ಬಡ್ಡಿ ವಿಧಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದಾಗ್ಯೂ, ಸಾಲವನ್ನು ಮುಕ್ತಾಯಗೊಳಿಸಿ, ಚಿನ್ನವನ್ನು ಹಿಂಪಡೆಯಲು ಅವರು ಪ್ರಯತ್ನಿಸಿದಾಗ, ಅವರಿಗೆ ಹೆಚ್ಚಿನ ಬಡ್ಡಿದರವನ್ನು ವಿಧಿಸಲಾಗಿದೆ ಎಂದು ಆರೋಪಿಸಲಾಗಿತ್ತು.

ಹೀಗಾಗಿ, ತಾವು ಪಾವತಿಸಿರುವ ಹೆಚ್ಚುವರಿ ಬಡ್ಡಿಯನ್ನು ಮರುಪಾವತಿಸುವಂತೆ ಮತ್ತು ಮಾನಸಿಕ ಯಾತನೆ ಮತ್ತು ನಷ್ಟಗಳಿಗೆ ₹25 ಲಕ್ಷ ಪರಿಹಾರವನ್ನು ಅವರು ಕೋರಿದ್ದರು.

Kannada Bar & Bench
kannada.barandbench.com