ಪಿಎಂಎಲ್ಎ ಸಿಂಧುತ್ವ ಪ್ರಶ್ನಿಸುವ ಸೋಗಿನಲ್ಲಿ 32ನೇ ವಿಧಿಯಡಿ ಜಾಮೀನು ಪಡೆಯುವ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಅಸಮಾಧಾನ

ಕಾಯಿದೆಯೊಂದನ್ನು ಪ್ರಶ್ನಿಸಿ 32ನೇ ವಿಧಿಯಡಿ ಅರ್ಜಿ ಸಲ್ಲಿಸಲಾಗಿದ್ದು ಈ ಪ್ರಕ್ರಿಯೆಯಲ್ಲಿ ಆ ಪರಿಣಾಮವಾಗಿ ಪರಿಹಾರ ಕೋರುವುದು ಲಭ್ಯವಿರುವ ಬೇರೆ ಕಾನೂನು ಪರಿಹಾರಗಳನ್ನು ಉಲ್ಲಂಘಿಸಿದಂತೆ ಮಾಡುವಂತಿದೆ ಎಂದಿದೆ ನ್ಯಾಯಾಲಯ.
Justice Bela M Trivedi and Justice Prashant Kumar Mishra
Justice Bela M Trivedi and Justice Prashant Kumar Mishra
Published on

ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ಆರೋಪಿಗಳು ನ್ಯಾಯಾಲಯದ ಮುಂದೆ 32ನೇ ವಿಧಿಯಡಿ ಅರ್ಜಿ ದಾಖಲಿಸುವ ಮೂಲಕ ತಮಗೆ ನೀಡಲಾಗಿರುವ ಸಮನ್ಸ್‌ಗಳನ್ನು ನೇರವಾಗಿ ಪ್ರಶ್ನಿಸುವ ಅಥವಾ ಪಿಎಂಎಲ್‌ಎ ನಿಯಮಾವಳಿಗಳನ್ನು ಪ್ರಶ್ನಿಸುವ ಸೋಗಿನಲ್ಲಿ ಜಾಮೀನನ್ನು ಕೋರುವ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಕಿಡಿಕಾರಿದೆ.

ಕಾಯಿದೆಯೊಂದನ್ನು ಪ್ರಶ್ನಿಸಿ 32ನೇ ವಿಧಿಯಡಿ ಅರ್ಜಿ ಸಲ್ಲಿಸಲಾಗಿದ್ದು ಇದರಡಿ ಪರಿಹಾರ ಕೋರುವುದು ಲಭ್ಯವಿರುವ ಬೇರೆ ಕಾನೂನು ಪರಿಹಾರಗಳನ್ನು ಬೈಪಾಸ್‌ ಮಾಡುವಂತಿದೆ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.

ವಿಜಯ್ ಮದನ್‌ಲಾಲ್ ಚೌಧರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜುಲೈ 2022ರಂದು ನೀಡಿದ ತೀರ್ಪಿನಲ್ಲಿ ಪಿಎಂಎಲ್‌ಎ ಸಿಂಧುತ್ವವನ್ನು ಎತ್ತಿಹಿಡಿದಿತ್ತು.

ರಾಜ್ಯದಲ್ಲಿನ ಮದ್ಯ/ಅಬಕಾರಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದಡಿ ಛತ್ತೀಸ್‌ಗಢದ ಸರ್ಕಾರಿ ಅಧಿಕಾರಿಗಳಾದ ಅಖ್ತರ್ ಧೇಬರ್ ಮತ್ತು ನಿರಂಜನ್ ದಾಸ್ ಅವರು ಪಿಎಂಎಲ್‌ಎ ಪ್ರಶ್ನಿಸಿ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ಗೆ ತೆರಳಿದ್ದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.  

ಇಂಥದ್ದೇ ಪ್ರಕರಣಗಳನ್ನು ಸೋಮವಾರ ವಿಚಾರಣೆ ನಡೆಸಿದ ಪೀಠ ಇಂತಹ ಪ್ರಕರಣಗಳನ್ನು ಏಕೆ ಪುರಸ್ಕರಿಸಬೇಕು ಎಂದು ಪ್ರಶ್ನಿಸಿತ್ತು.

ಜಾರಿ ನಿರ್ದೇಶನಾಲಯದ (ಇ ಡಿ) ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು, ಇಂತಹ ಅರ್ಜಿಗಳ ನಿರ್ವಹಣೆಯ ಬಗ್ಗೆ ತಮಗೆ ಗಂಭೀರ ಆಕ್ಷೇಪಗಳಿವೆ ಎಂದು ಹೇಳಿದ್ದರು.

ಇಂದು ವಿಚಾರಣೆಯ ಸಂದರ್ಭದಲ್ಲಿ, ಧೇಬರ್ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಜಾಮೀನು ಮತ್ತಿತರ ಪರಿಹಾರಕ್ಕಾಗಿ ಹೈಕೋರ್ಟ್‌ಗೆ ತೆರಳಲು ಸ್ವಾತಂತ್ರ್ಯ ನೀಡುವಂತೆ ಕೋರಿ ಮನವಿಯನ್ನು ಹಿಂಪಡೆಯಲು ಪ್ರಯತ್ನಿಸಿದರು.

ಆದರೆ, ಅಂತಹ ಮನವಿಗಳ ವಿರುದ್ಧ ಕೆಲವು ಅವಲೋಕನಗಳನ್ನು ಆದೇಶದಲ್ಲಿ ದಾಖಲಿಸಲು ಸಾಲಿಸಿಟರ್‌ ಜನರಲ್‌  ಒತ್ತಾಯಿಸಿದರು. ಇದಕ್ಕೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ದನಿಗೂಡಿಸಿದರು. ಈ ವೇಳೆ ನ್ಯಾಯಾಲಯ ಸಮ್ಮತಿ ಸೂಚಿಸಿ ಇಂತಹ ಪ್ರವೃತ್ತಿಯ ಬಗ್ಗೆ ತನ್ನ ಅಸಮಾಧಾನವನ್ನು ಆದೇಶದಲ್ಲಿ ದಾಖಲಿಸಿತು.

Kannada Bar & Bench
kannada.barandbench.com