ನೀಟ್ ಪಿಜಿ ಕೌನ್ಸೆಲಿಂಗ್ 2021ರ ತಂತ್ರಾಂಶದ ಬಳಕೆಯು ಮುಕ್ತಾಯಗೊಂಡಿದ್ದು (ಸಾಫ್ಟ್‌ವೇರ್ ಕ್ಲೋಸ್ಡ್) ಈಗ ಸೀಟುಗಳನ್ನು ಭರ್ತಿ ಮಾಡಲು ಹೊರಟರೆ ಅದು ಬರುವ ವರ್ಷದ ಕೌನ್ಸೆಲಿಂಗ್‌ಗೆ ತೊಡಕುಂಟುಮಾಡುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. “ಇನ್ನೂ ಏಕೆ 1456 ನೀಟ್ ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಖಾಲಿ ಉಳಿದಿವೆ ಎಂದು ಸರ್ವೋಚ್ಚ ನ್ಯಾಯಾಲಯ ಬುಧವಾರ ತರಾಟೆಗೆ ತೆಗೆದುಕೊಂಡ ಕೆಲ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಈ ಉತ್ತರ ನೀಡಿದೆ [ಡಾ. ಆಸ್ತಾ ಗೋಯೆಲ್ ಇನ್ನಿತರರು ಮತ್ತು ಎಂಸಿಸಿ ಮತ್ತಿತರರ ನಡುವಣ ಪ್ರಕರಣ].
ಕೋವಿಡ್ ಸಾಂಕ್ರಾಮಿಕದಿಂದಾಗಿ 2021ನೇ ಸಾಲಿನ ನೀಟ್ ಪಿಜಿ ಸೀಟುಗಳನ್ನು ಭರ್ತಿ ಮಾಡಲು ವಿಳಂಬವಾಗಿದೆ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠಕ್ಕೆ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಈ ಹಂತದಲ್ಲಿ ಹೆಚ್ಚುವರಿಯಾಗಿ ಕೌನ್ಸೆಲಿಂಗ್ ನಡೆಸಿದರೆ ಅದು 2022ನೇ ಸಾಲಿನ ಕೌನ್ಸೆಲಿಂಗ್‌ಗೆ ಅಡ್ಡಿ ಉಂಟು ಮಾಡುತ್ತದೆ. ಅಲ್ಲದೆ ಭದ್ತತಾ ಠೇವಣಿ ಮರುಪಾವತಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಸಲ್ಲಿಸಿರುವ ಅಫಿಡವಿಟ್ ತಿಳಿಸಿದೆ.
ಅಫಿಡವಿಟ್‌ನ ಪ್ರಮುಖಾಂಶಗಳು
ನ್ಯಾಯಾಲಯದ ಹಿಂದಿನ ಆದೇಶಗಳ ಪ್ರಕಾರ, ನಿಗದಿತ ಸಂಖ್ಯೆಯ ಮಾಪ್-ಅಪ್ ಸುತ್ತುಗಳನ್ನು ನಡೆಸುವ ಸಂದರ್ಭದಲ್ಲಿ ಶೇಕಡಾವಾರು ಅರ್ಹತಾ ಮಟ್ಟವನ್ನು ಈಗಾಗಲೇ ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ (50 ರಿಂದ 35 ಕ್ಕೆ 15 ಅಂಕಗಳು).
ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಡಿಪ್ಲೊಮೇಟ್ ಆಫ್ ನ್ಯಾಶನಲ್ ಬೋರ್ಡ್ ಕೋರ್ಸ್‌ಗಳನ್ನು ಸಹ ಸೇರಿಸಿರುವುದರಿಂದ, ಸೀಟುಗಳು ಮತ್ತು ಖಾಲಿ ಹುದ್ದೆಗಳ ಸಂಖ್ಯೆಯೂ ಹೆಚ್ಚಾಗಿದೆ.
ಇದಲ್ಲದೆ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವ ರಾಜ್ಯಗಳಿಂದ ಯಾವುದೇ ಸೀಟು ಮರಳಿರದ ಕಾರಣ ಅಧಿಸೂಚಿತ ಯೋಜನೆಗಳ ಮೂಲಕ ಮಾಪ್ ಅಪ್ ಸುತ್ತುಗಳನ್ನು ನಡೆಸಲಾಗಿದೆ.
ನ್ಯಾಯಾಲಯದ ಆದೇಶಗಳನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಪಾಲಿಸಿದ್ದು ಮನವಿಗಳನ್ನು ವಜಾಗೊಳಿಸಬೇಕು.