ನೀಟ್ ಪಿಜಿ ಸೀಟುಗಳನ್ನು ಖಾಲಿ ಇಟ್ಟರೆ ನಿಮಗೇನು ಲಾಭ? ಎಂಸಿಸಿಗೆ ಸುಪ್ರೀಂ ತರಾಟೆ

ಪಿಜಿ ಕೋರ್ಸ್‌ಗಳಿಗೆ ಅಖಿಲ ಭಾರತ ಕೋಟಾದಲ್ಲಿ (ಎಐಕ್ಯೂ) 1,456 ಸೀಟುಗಳು ಖಾಲಿ ಇವೆ ಎಂಬುದನ್ನು ತಿಳಿದ ನ್ಯಾಯಾಲಯ ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಗೆ (ಎಂಸಿಸಿ) ತಾಕೀತು ಮಾಡಿತು.
ನೀಟ್ ಪಿಜಿ ಸೀಟುಗಳನ್ನು ಖಾಲಿ ಇಟ್ಟರೆ ನಿಮಗೇನು ಲಾಭ? ಎಂಸಿಸಿಗೆ ಸುಪ್ರೀಂ ತರಾಟೆ

ಖಾಲಿ ಇರುವ ಸ್ನಾತಕೋತ್ತರ (ಪಿಜಿ) ವೈದ್ಯಕೀಯ ಸೀಟುಗಳ ಕುರಿತಾದ ವಿವಿಧ ಮನವಿಗಳಿಂದ ಬೇಸರಗೊಂಡು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ ಸೀಟು ಭರ್ತಿ ಮಾಡದೇ ಇರುವುದರಿಂದ ತೊಂದರೆಗೀಡಾದ ಎಲ್ಲಾ ವೈದ್ಯ- ವಿದ್ಯಾರ್ಥಿಗಳಿಗೆ ಪರಿಹಾರ ನೀಡುವ ಬಗ್ಗೆ ಸುಳಿವು ನೀಡಿದೆ. [ಡಾ ಅಥರ್ವ್ ತುಂಗಟ್ಕರ್ ಮತ್ತಿತರರು ಹಾಗೂ ವೈದ್ಯಕೀಯ ಕೌನ್ಸೆಲಿಂಗ್‌ ಸಮಿತಿ ಇನ್ನಿತರರ ನಡುವಣ ಪ್ರಕರಣ].

ಪಿಜಿ ಕೋರ್ಸ್‌ಗಳಿಗೆ ಅಖಿಲ ಭಾರತ ಕೋಟಾದಲ್ಲಿ (ಎಐಕ್ಯೂ) 1,456 ಸೀಟುಗಳು ಖಾಲಿ ಇವೆ ಎಂಬುದನ್ನು ತಿಳಿದ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠ ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಗೆ (ಎಂಸಿಸಿ) ತಾಕೀತು ಮಾಡಿತು.

"ನಾವು 2021- 22ನೇ ಸಾಲಿನ ಪ್ರವೇಶಾತಿ ಕುರಿತು ಆದೇಶ ನೀಡಬೇಕಿದೆ. ನಾವು ಇಂದು ಆದೇಶ ಹೊರಡಿಸುತ್ತೇವೆ. 1,000 ಸೀಟುಗಳು ಖಾಲಿ ಇವೆ... ವಿದ್ಯಾರ್ಥಿಗಳಿಗೆ ಪ್ರವೇಶಾತಿ ದೊರೆಯದಿದ್ದರೆ ನಾವು ಅವರಿಗೆ ಪರಿಹಾರಕ್ಕೆ ಆದೇಶಿಸುತ್ತೇವೆ. ಇದನ್ನು ನೆನಪಿಡಿ. ಅಸಾಧಾರಣ ಸನ್ನಿವೇಶದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ... ನೀವು 1,000 ವಿದ್ಯಾರ್ಥಿಗಳ ಹಕ್ಕನ್ನು ಕಸಿದುಕೊಂಡಿದ್ದು ಈಗ ಆ ಎಲ್ಲಾ 1,000 ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗುತ್ತಾರೆ, ”ಎಂದು ನ್ಯಾ. ಶಾ ಕಿಡಿಕಾರಿದರು.

Also Read
ನೀಟ್‌ ಪಿಜಿ 2022 ಮುಂದೂಡಿಕೆ ಕೋರಿದ್ದ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌ [ಚುಟುಕು]

ಇಂತಹ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕೌನ್ಸೆಲಿಂಗ್‌ ಅಥವಾ ಮಾಪ್‌ ಅಪ್‌ ನಡೆಸದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ ವೈದ್ಯಕೀಯ ವಿದ್ಯಾರ್ಥಿಗಳ ಜೀವದೊಂದಿಗೆ ವಿದ್ಯಾರ್ಥಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದಿತು.ಅಲ್ಲದೆ ತಾನು ನಾಳೆ ಆದೇಶ ನೀಡುವಾಗ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಧಿಕಾರಿಗಳು ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಹಾಜರಿರಬೇಕು ಎಂದು ಅದು ಸೂಚಿಸಿತು.

ಎಂಸಿಸಿ ನಿಲುವನ್ನು ಸಮಿತಿ ಪರ ವಕೀಲರು ಸಮರ್ಥಿಸಿಕೊಂಡರು. ಆಗ ನ್ಯಾಯಾಲಯ “ಮೇ ತಿಂಗಳಿನಲ್ಲಿ ಖಾಲಿ ಸೀಟುಗಳ ಇರುವ ಬಗ್ಗೆ ನಿಮಗೆ ತಿಳಿಯಿತು. (ಆದರೆ) ಇನ್ನೊಂದು ಮಾಪ್‌ ಅಪ್‌ ರೌಂಡ್‌ ಏಕೆ ಮಾಡಲಿಲ್ಲ? ನಮಗೆ ವೈದ್ಯರು ಮತ್ತು ಸೂಪರ್ ಸ್ಪೆಷಲಿಸ್ಟ್‌ಗಳು ಬೇಕಿರುವಾಗ ಸೀಟುಗಳನ್ನು ಖಾಲಿ ಇಡುವುದರಿಂದ ನಿಮಗೆ ಏನು ಸಿಗುತ್ತದೆ? ಜವಾಬ್ದಾರಿ ಇದೆಯೋ ಇಲ್ಲವೋ?!" ಎಂದು ಪ್ರಶ್ನೆಗಳ ಮಳೆ ಸುರಿಸಿತು.

ಆದೇಶ ಹೊರಡಿಸುವ ಮುನ್ನ ನ್ಯಾಯಮೂರ್ತಿ ಶಾ "ನೀವು 1,000 ವಿದ್ಯಾರ್ಥಿಗಳ ಹಕ್ಕನ್ನು ಕಸಿದುಕೊಂಡಿದ್ದೀರಿ ಮತ್ತು ಈಗ ಎಲ್ಲಾ 1,000 ವಿದ್ಯಾರ್ಥಿಗಳು ನ್ಯಾಯಾಲಯಕ್ಕೆ ಬರುತ್ತಾರೆ. ನೀವು ಅವರ ಭವಿಷ್ಯವನ್ನು ಕಸಿದುಕೊಂಡಿದ್ದೀರಿ. ನಾವು ಎಲ್ಲಿಗೆ ಹೋಗಿ ಮುಟ್ಟುತ್ತಿದ್ದೇವೆ? ಯಾವುದೇ ವ್ಯವಸ್ಥಿತ ಪ್ರಕ್ರಿಯೆ ಇಲ್ಲದೆ ಶಿಕ್ಷಣ ವ್ಯವಸ್ಥೆಯ ಮೇಲೆ ಒತ್ತಡ ಹಾಕುವುದೇಕೆ? ವಿದ್ಯಾರ್ಥಿಗಳ ಒತ್ತಡದ ಮಟ್ಟ ತಿಳಿದಿದೆಯೇ?" ಎಂದು ಕೇಳಿದರು.

Related Stories

No stories found.
Kannada Bar & Bench
kannada.barandbench.com