
ನ್ಯಾಯಾಲಯದ ಕಾರ್ಯಗಳಲ್ಲಿ ನೈತಿಕ ಪೊಲೀಸ್‌ಗಿರಿ ಸೇರಿಲ್ಲ ಎಂದಿರುವ ಸುಪ್ರೀಂ ಕೋರ್ಟ್ 2016 ರಲ್ಲಿ ಜೈನ ಸನ್ಯಾಸಿಯೊಬ್ಬರನ್ನು ಗೇಲಿ ಮಾಡಿದ್ದ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಸಂಗೀತಗಾರ ವಿಶಾಲ್ ದದ್ಲಾನಿ ಮತ್ತು ರಾಜಕೀಯ ಹೋರಾಟಗಾರ ತೆಹ್ಸೀನ್ ಪೂನಾವಾಲಾ ಅವರಿಗೆ ವಿಧಿಸಿದ್ದ ದಂಡವನ್ನು ಮಂಗಳವಾರ ದ್ದುಗೊಳಿಸಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 2019ರಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಪೂನಾವಾಲಾ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ಆದೇಶ ಹೊರಡಿಸಿತು.
ಯಾವುದೇ ಕ್ರಿಮಿನಲ್ ಅಪರಾಧ ಸಾಬೀತಾಗಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತಾದರೂ ಪೂನಾವಾಲಾ ಮತ್ತು ದದ್ಲಾನಿ ಅವರಿಗೆ ತಲಾ ₹10 ಲಕ್ಷದಷ್ಟು ಭಾರಿ ದಂಡ ಪಾವತಿಸುವಂತೆ ಆದೇಶಿಸಿತ್ತು.
ಇಂತಹ ನೈತಿಕ ವಿಧಾನವನ್ನು ಅಳವಡಿಸಿಕೊಂಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಇಂದು ಹೈಕೋರ್ಟನ್ನು ಕಟುವಾಗಿ ಟೀಕಿಸಿತು.
"ಪ್ರಕರಣದಲ್ಲಿ ಯಾವುದೇ ನೋಟಿಸ್ ನೀಡಿಲ್ಲ. ಯಾವ ರೀತಿಯ ಆದೇಶ ಹೊರಡಿಸಲಾಗಿದೆ? ನ್ಯಾಯಾಲಯ ನೈತಿಕ ಪೊಲೀಸ್‌ಗಿರಿ ಮಾಡುತ್ತಾ ಕೂರಬಾರದು. ಇದು ನ್ಯಾಯಾಲಯದ ಕಾರ್ಯವಲ್ಲ" ಎಂದು ಪೀಠ ಮೌಖಿಕವಾಗಿ ಹೇಳಿತು. ಅಂತೆಯೇ ದಂಡ ವಿಧಿಸಿದ್ದ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತು.
ಅಲ್ಲದೆ, "ಯಾವುದೇ ಅಪರಾಧ ಸಾಬೀತಾಗಿಲ್ಲ ಎಂದು ಕಂಡುಕೊಂಡ ನಂತರವೂ ಹೈಕೋರ್ಟ್ ಸನ್ಯಾಸಿ (ಟೀಕೆಗೆ ಒಳಗಾದವರು) ನೀಡಿರುವ ಕೊಡುಗೆಯು ಮೇಲ್ಮನವಿದಾರರು ಮತ್ತು ಸಹ-ಆರೋಪಿ ನೀಡಿರುವ ಕೊಡುಗೆಗಿಂತ ಬಹಳಷ್ಟು ಹೆಚ್ಚು ಎಂದೆಲ್ಲಾ ಹೇಳುವ ಮೂಲಕ ತನ್ನ ಸಲಹಾ ನ್ಯಾಯವ್ಯಾಪ್ತಿಯನ್ನು ಚಲಾಯಿಸಬಾರದಿತ್ತು ಎಂದು ನಾವು ಭಾವಿಸುತ್ತೇವೆ... ನ್ಯಾಯಾಲಯದ ಕಾರ್ಯ ನೈತಿಕ ಪೊಲೀಸ್ ಗಿರಿ ಮಾಡುವುದಲ್ಲ" ಎಂದು ಕಿವಿ ಹಿಂಡಿತು.
2016ರಲ್ಲಿ ಹರಿಯಾಣ ವಿಧಾನಸಭೆಯಲ್ಲಿ ಭಾಷಣ ಮಾಡಿದ್ದ (ದಿವಂಗತ) ಜೈನ ಸನ್ಯಾಸಿ ತರುಣ್ ಸಾಗರ್ ಅವರನ್ನು ಟೀಕಿಸಿ ಈ ಇಬ್ಬರೂ ಟ್ವೀಟ್ ಮಾಡಿದ್ದರು. ಸನ್ಯಾಸಿಗಳು ನಗ್ನವಾಗಿ ನಡೆದರೂ ಅವರನ್ನು ಪವಿತ್ರರು ಎಂದು ಏಕೆ ಕರೆಯುತ್ತಾರೆ ಎಂದು ಪೂನಾವಲಾ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಧಾರ್ಮಿಕ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು ನೀಡುವ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಅಪರಾಧಗಳಿಗಾಗಿ ದದ್ಲಾನಿ ಮತ್ತು ಪೂನಾವಾಲಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನಂತರ ಇಬ್ಬರೂ ಸನ್ಯಾಸಿಯವರ ಬಳಿ ಖುದ್ದು ತೆರಳಿ ಕ್ಷಮೆಯಾಚಿಸಿದ್ದರು. ಸನ್ಯಾಸಿ ತರುಣ್ ಸಾಗರ್ ಅವರು ಕೂಡ ಕ್ಷಮಿಸಿದ್ದರು.
ಆದರೆ ಜೈನ ಧರ್ಮೀಯರಲ್ಲದ ಮೂರನೇ ವ್ಯಕ್ತಿಯೊಬ್ಬರು ದದ್ಲಾನಿ ಮತ್ತು ಪೂನಾವಾಲಾ ಇಬ್ಬರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. 2019ರಲ್ಲಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿತಾದರೂ ದಂಡ ವಿಧಿಸಿತು. ಪೂನಾವಾಲಾ ಮತ್ತು ದದ್ಲಾನಿ ಯಾವುದೇ ಅಪರಾಧ ಮಾಡಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿರುವಾಗ ದಂಡ ವಿಧಿಸುವ ಪ್ರಶ್ನೆಯೇ ಉದ್ಭವಿಸದು ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ.