ಹೈಕೋರ್ಟ್‌ಗೆ ಹೆಚ್ಚಿನ ಸ್ಥಳಾವಕಾಶ: ಮುಖ್ಯಮಂತ್ರಿಗೆ ಮೂರು ಪ್ರಸ್ತಾವನೆ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ

ರಾಜ್ಯ ಹೈಕೊರ್ಟ್‌ಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವುದಕ್ಕೆ ಸಿಎಂಗೆ ಒಂದು ಪ್ರಸ್ತಾವ ಸಲ್ಲಿಸಿದರೆ ಸಾಕಾಗುವುದಿಲ್ಲ. ಹೀಗಾಗಿ, ಮೂರು ಪ್ರಸ್ತಾವನೆ ಸಲ್ಲಿಸಬೇಕು. ಆಗ ಪರಿಗಣನೆಗೆ ಹೆಚ್ಚಿನ ಅವಕಾಶಗಳಿರುತ್ತವೆ ಎಂದಿರುವ ನ್ಯಾಯಾಲಯ.
Karnataka High Court
Karnataka High Court
Published on

ಕರ್ನಾಟಕ ಹೈಕೋರ್ಟ್ ವಿಸ್ತರಣೆಗೆ ಹೆಚ್ಚಿನ ಸ್ಥಳಾವಕಾಶ ಒದಗಿಸುವ ಸಂಬಂಧ ಮುಖ್ಯಮಂತ್ರಿಗಳು ಪರಿಗಣನೆಗೆ ಕನಿಷ್ಠ ಮೂರು ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.

ಬೆಂಗಳೂರಿನ ಹೈಕೋರ್ಟ್ ಕಟ್ಟಡದ ನೆಲಮಹಡಿಯಲ್ಲಿ ಇರುವ ಕಚೇರಿಗಳನ್ನು ಸ್ಥಳಾಂತರಿಸಲು ಸೂಕ್ತ ಆದೇಶ ಹೊರಡಿಸುವಂತೆ ಕೋರಿ ವಕೀಲ ಎಲ್ ರಮೇಶ್ ನಾಯಕ್ ಮತ್ತು ಹೈಕೋರ್ಟ್ ಕಟ್ಟಡ ಸಂಕೀರ್ಣಕ್ಕೆ ಬೆಂಗಳೂರಿನ ಕೇಂದ್ರ ಭಾಗದಲ್ಲಿ 30 ಎಕರೆ ಅಧಿಕ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಕೋರಿ ಶರಣ ದೇಸಾಯಿ ಎಂಬುವವರು ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ರಾಜ್ಯ ಹೈಕೊರ್ಟ್‌ಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ಒಂದು ಪ್ರಸ್ತಾವನೆ ಸಲ್ಲಿಸಿದರೆ ಸಾಕಾಗುವುದಿಲ್ಲ. ಹೀಗಾಗಿ, ಮೂರು ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಆಗ ಮುಖ್ಯಮಂತ್ರಿಗಳು ಪರಿಗಣಿಸಲು ಹೆಚ್ಚಿನ ಅವಕಾಶಗಳು ಇರುತ್ತದೆ. ಅದರಂತೆ ರಾಜ್ಯ ಸರ್ಕಾರ ಮುಂದಿನ ಮೂರು ವಾರಗಳಲ್ಲಿ ಮುಖ್ಯಮಂತ್ರಿಗಳಿಗೆ ಮೂರು ಪ್ರಸ್ತಾವನೆ ಸಲ್ಲಿಸಬೇಕು. ನಂತರದ ಎರಡು ವಾರದಲ್ಲಿ ಆ ಪ್ರಸ್ತಾವನೆಗಳ ಬಗ್ಗೆ ಮುಖ್ಯಮಂತ್ರಿಯವರು ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ರಾಜ್ಯ ಸರ್ಕಾರ ಮುಖ್ಯಮಂತ್ರಿಗಳಿಗೆ ಸಲ್ಲಿಸುವ ಮೂರು ಪ್ರಸ್ತಾವನೆಗಳ ಪ್ರತಿಯನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೂ ಒದಗಿಸಬೇಕು. ಆ ಪ್ರತಿಗಳನ್ನು ರಿಜಿಸ್ಟ್ರಾರ್ ಜನರಲ್ ಅವರು ಹೈಕೋರ್ಟ್‌ನ ಕಟ್ಟಡ ಸಮಿತಿ ಮುಂದಿಡಬೇಕು. ಸಮಿತಿ ನೀಡುವ ಪ್ರತಿಕ್ರಿಯೆಯನ್ನು ಸಹ ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕು. ಇದರಿಂದ ಸಮಿತಿಯ ಪ್ರತಿಕ್ರಿಯೆಯನ್ನು ಮುಖ್ಯಮಂತ್ರಿಗಳು ಪರಿಗಣಿಸಲು ಸಹಕಾರಿಯಾಗುತ್ತದೆ ಎಂದು ಆದೇಶದಲ್ಲಿ ಪೀಠ ತಿಳಿಸಿದೆ.

ಅಲ್ಲದೇ, ಹೈಕೋರ್ಟ್ ಕಟ್ಟಡದ ನೆಲಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಗಳನ್ನು ಹತ್ತಿರದ ಕಟ್ಟಡಕ್ಕೆ ಸ್ಥಳಾಂತರಿಸಲು ಪರಿಸರ ನಿರಾಕ್ಷೇಪಣಾ ಪತ್ರ ಪಡೆಯಲು ಸರ್ಕಾರ ಕಾರ್ಯೋನ್ಮುಖವಾಗಬೇಕು ಎಂದು ನಿರ್ದೇಶಿಸಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

Also Read
ನೆಲಮಹಡಿ ಕಚೇರಿಗಳ ಸ್ಥಳಾಂತರ ಪ್ರಕರಣ: ನ್ಯಾಯಿಕ ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್‌ ಹೇಳಿದ್ದೇಕೆ?

ಅರ್ಜಿ ಕುರಿತ ಹಿಂದಿನ ವಿಚಾರಣೆ ವೇಳೆಯಲ್ಲಿ ಪ್ರಕರಣಗಳ ಸಂಖ್ಯೆ ಮತ್ತು ನ್ಯಾಯಮೂರ್ತಿಗಳ ನೇಮಕಾತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಸ್ಥಳಾವಕಾಶ ಕೊರತೆ ಎದುರಾಗಿದೆ. ಹೈಕೋರ್ಟ್‌ನ ಕಚೇರಿಗಳಿಗೆ ಹೆಚ್ಚುವರಿ ಹಾಗೂ ಅಗತ್ಯ ಸ್ಥಳಾವಕಾಶ ಕಲ್ಪಿಸುವ ಬಗ್ಗೆ ಮಾತ್ರವಷ್ಟೇ ಅಲ್ಲದೆ ನ್ಯಾಯಮೂರ್ತಿಗಳ ಕೊಠಡಿ ಮತ್ತು ಕಚೇರಿಗಳಿಗೂ ಸ್ಥಳಾವಕಾಶ ಕಲ್ಪಿಸುವ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು. ಈ ಸಮಸ್ಯೆ ಪರಿಹರಿಸಲು ವಿಳಂಬ ಮಾಡಿದರೆ ಈಗಿರುವ ಸಮಸ್ಯೆ ಉಲ್ಬಣವಾಗುತ್ತದೆ ಎಂದು ನಿರ್ದೇಶಿಸಿತ್ತು.

Kannada Bar & Bench
kannada.barandbench.com