ಸ್ವಲ್ಪವೂ ಸುಧಾರಿಸದ ರಾಜ್ಯ ಕರ್ನಾಟಕ: ಕ್ರಿಮಿನಲ್ ಮೊಕದ್ದಮೆ ವಿಚಾರಣೆ ವೇಳೆ ಸರ್ಕಾರದ ಎಡವಟ್ಟಿಗೆ ಸುಪ್ರೀಂ ಕಿಡಿ
ಕ್ರಿಮಿನಲ್ ಮೊಕದ್ದಮೆಯಲ್ಲಿ ತನ್ನ ವಕೀಲರಿಗೆ ತಪ್ಪು ಸೂಚನೆ ನೀಡಿದ ಕರ್ನಾಟಕ ಸರ್ಕಾರವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ [ವಿನಾಯಕ @ ವಿನಾಯಕ್ ಗೌಡ ಮರಿಗೌಡ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].
ರಾಜ್ಯ ಸರ್ಕಾರ ಇಂತಹ ಎಡವಟ್ಟು ಮಾಡುತ್ತಿರುವುದು ಇದೇ ಮೊದಲಲ್ಲ ಎಂದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಸರ್ಕಾರಿ ವಕೀಲರು ಸೂಕ್ತ ನೆರವು ನೀಡದಿದ್ದರೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸಮನ್ಸ್ ನೀಡಬೇಕಾಗುತ್ತದೆ ಎಂದ ಎಚ್ಚರಿಕೆ ನೀಡಿತು.
ಪ್ರಕರಣವೊಂದರ ವಿಚಾರಣೆ ವೇಳೆ, ಸರ್ಕಾರದ ಅಚಾತುರ್ಯದಿಂದಾಗಿ ನ್ಯಾಯಾಲಯವು ತನ್ನ ಈ ಹಿಂದಿನ ಆದೇಶದಲ್ಲಿ 'ಆರೋಪ ನಿಗದಿ ಸಾಧ್ಯವಾಗಿಲ್ಲ' ಎಂದು ದಾಖಲಿಸಿರುವ ಬಗ್ಗೆ ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್ ಅವರು ಪೀಠದ ಗಮನಕ್ಕೆ ತಂದರು.
ಇದರಿಂದ ಕುಪಿತವಾದ ಪೀಠ ರಾಜ್ಯ ಸರ್ಕಾರದಿಂದ ಇಂತಹ ತಪ್ಪು ನಡೆಯುತ್ತಿರುವುದು ಇದೇ ಮೊದಲಲ್ಲ ಎಂದು ಕಿಡಿಕಿಡಿಯಾಯಿತು. "ಇದೇ ಮೊದಲಲ್ಲ. ನಮಗೆ ಸೂಕ್ತ ನೆರವು ಸಿಗದಿದ್ದರೆ ನಿಮ್ಮ ಮುಖ್ಯ ಕಾರ್ಯದರ್ಶಿಗೆ ಸಮನ್ಸ್ ನೀಡಬೇಕಾಗುತ್ತದೆ. ಇದು ಸ್ವಲ್ಪವೂ ಸುಧಾರಿಸದ ರಾಜ್ಯ" ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನುಬಾಹಿರ ಸಭೆ ಮತ್ತು ಸಂಘಟಿತ ಅಪರಾಧದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಪೀಠವು ಆಗಸ್ಟ್ 30ರಂದು ಆರೋಪಿಗಳಿಗೆ ಮೂರು ತಿಂಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ತನ್ನ ಹಿಂದಿನ ಆದೇಶದಲ್ಲಿ ನ್ಯಾಯಾಲಯವು "ಅರ್ಜಿದಾರರು ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಸಾರ್ವಜನಿಕರಿಗೆ ಅಪಾಯಕಾರಿ ಎಂದು ತನಗೆ ಮಾಹಿತಿ ನೀಡಲಾಗಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿರುತ್ತಾರೆ. ವಿಚಾರಣಾ ನ್ಯಾಯಾಲಯಕ್ಕೆ 21 ಆರೋಪಿಗಳು ಒಂದರ ನಂತರ ಒಂದರಂತೆ ವಿವಿಧ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಪರಿಣಾಮ ಇದುವರೆಗೆ ಆರೋಪ ನಿಗದಿಪಡಿಸಲು ಸಾಧ್ಯವಾಗಿಲ್ಲ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ” ಎಂಬುದಾಗಿ ವಿವರಿಸಿತ್ತು.
ಆದರೆ ಇಂದಿನ ವಿಚಾರಣೆ ವೇಳೆ ಆರೋಪ ನಿಗದಿಪಡಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದ್ದು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಯಿತು.
ದೀಪಾವಳಿ ರಜೆ ಬಳಿಕ ನ್ಯಾಯಾಲಯ ಪ್ರಕರಣದ ಅಂತಿಮ ವಿಚಾರಣೆ ನಡೆಸಲಿದೆ.