ವಿಚಾರಣೆಯಿಂದ ಹಿಂಸರಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ತನಿಖೆ ಕೋರಿದ್ದ ಅರ್ಜಿದಾರರಿಗೆ ಸುಪ್ರೀಂ ತಪರಾಕಿ

ಮನವಿ ಸೂಕ್ತವಾಗಿಲ್ಲ ಜೊತೆಗೆ ತಪ್ಪು ಸಂದೇಶ ಕಳುಹಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Supreme Court of India
Supreme Court of India
Published on

ಮೂರು ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿದಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನಿರ್ಧಾರದ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿದ್ದ ಅರ್ಜಿದಾರರನ್ನು  ಸುಪ್ರೀಂ ಕೋರ್ಟ್ ಗುರುವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು [ಚಂದ್ರಪ್ರಭಾ ಮತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ] .

ಮನವಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ , ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಮನವಿ ಸೂಕ್ತವಾಗಿಲ್ಲ ಜೊತೆಗೆ ತಪ್ಪು ಸಂದೇಶಗಳನ್ನು ಕಳುಹಿಸುತ್ತದೆ ಎಂದಿತು.

Also Read
ಪ್ರಧಾನಿ ಮೋದಿ ಕುರಿತ ಸಾಕ್ಷ್ಯಚಿತ್ರ: ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಅನುಪ್ ಜೆ ಭಂಭಾನಿ

"ನಿಮ್ಮ ಮನವಿಯನ್ನು ಒಮ್ಮೆ ನೋಡಿ. ಅದರಲ್ಲಿರುವ ಮನವಿ 'ಬಿ' ಅನ್ನು ನೀವು ಹೇಗೆ ಒತ್ತಾಯಿಸಲು ಸಾಧ್ಯ? ಇದೆಲ್ಲಾ ಏನು? ಇದು ತಪ್ಪು ಸಂದೇಶಗಳನ್ನು ಕಳುಹಿಸುತ್ತದೆ. ಮಾರ್ಗಸೂಚಿಗಳ ಬಗ್ಗೆ ಹೇಳಿರುವುದು ಉತ್ತಮವಾಗಿದೆ ಆದರೆ ಯಾವ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಹಿಂದೆ ಸರಿದರು ಎಂಬುದರ ಕುರಿತಂತೆ ನೀವು ಪರಿಹಾರ ಪಡೆಯುವುದು ಸಾಧ್ಯವಿಲ್ಲ,  ಹಾಗೆ ಮಾಡುವುದು ಬೇರೆಯದೇ ಉದ್ದೇಶವನ್ನು ಧ್ವನಿಸುತ್ತದೆ. ಈಗಲೂ ನೀವು ಮುಂದುವರಿಸಲು ಬಯಸುತ್ತೀರಾ?... ಕೇವಲ ತಾತ್ವಿಕ ನೆಲೆಯಲ್ಲಷ್ಟೇ ನೀವು ಪರಿಹಾರ ಪಡೆಯಬೇಕು. ಅರ್ಜಿಯಲ್ಲಿ ಎಲ್ಲ ಖಾಸಗಿ ಪಕ್ಷಕಾರರ ವಿರುದ್ಧ ಆಪಾದನೆಗಳನ್ನು ಮಾಡುವ ಅಗತ್ಯವೇನಿತ್ತು, ನ್ಯಾಯಮೂರ್ತಿಗಳೆಡೆಗೆ ಶಂಕೆ ಬೀರುವ ಅಗತ್ಯವೇನಿತ್ತು? ಈ ಅರ್ಜಿ ಸಲ್ಲಿಸಿರುವ ರೀತಿ ಅತ್ಯಂತ ಆಕ್ಷೇಪಾರ್ಹವಾಗಿದೆ?" ಎಂದು ನ್ಯಾಯಾಲಯ ಹೇಳಿತು.

ಇದು ತಪ್ಪು ಸಂದೇಶ ಕಳುಹಿಸುತ್ತದೆ. ನ್ಯಾಯಮೂರ್ತಿಗಳ ವಿವೇಚನೆ ಬಗ್ಗೆ ನಾವು ತನಿಖೆ ಮಾಡಲು ಸಾಧ್ಯವಿಲ್ಲ.
ಸುಪ್ರೀಂ ಕೋರ್ಟ್

ಪ್ರಕರಣಗಳಿಂದ ಹಿಂದೆ ಸರಿಯುವುದನ್ನು ನಿಯಂತ್ರಿಸುವುದಕ್ಕಾಗಿ ಮಾರ್ಗಸೂಚಿ ರೂಪಿಸಬೇಕು ಮತ್ತು ನ್ಯಾ. ನಾಗಪ್ರಸನ್ನ ಅವರು ಮೂರು ಪ್ರಕರಣಗಳಿಂದ ಹಿಂದೆ ಸರಿದಿರುವ ಕುರಿತು ತನಿಖೆ ನಡೆಸಬೇಕು ಎಂದು ವಕೀಲ ವಿಶಾಲ್ ಅರುಣ್ ಮಿಶ್ರಾ ಅವರ ಮೂಲಕ ಸಲ್ಲಿಸಲಾದ ಅರ್ಜಿ ಕೋರಿತ್ತು.

ಇವುಗಳಲ್ಲಿ ಒಂದರಲ್ಲಿ, ಕರ್ನಾಟಕದ ಹಾಲಿ ಲೋಕಾಯುಕ್ತರ ಪತ್ನಿ ಮತ್ತು ಅವರ ಪುತ್ರನ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲು ಕೋರಿದ್ದ ಪ್ರಕರಣದಲ್ಲಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿಗಳು ನಂತರ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ ಎಂದು ಆರೋಪಿಸಲಾಗಿತ್ತು. ಭ್ರಷ್ಟಾಚಾರ ಆರೋಪಗಳ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆಯೂ ಈ ಅರ್ಜಿ ಕೋರಿತ್ತು.

ಮನವಿ ಕುಟಿಲತೆಯಿಂದ ಕೂಡಿದೆ ಎಂದ ಸುಪ್ರೀಂ ಕೋರ್ಟ್‌ ಅರ್ಜಿ ಸಲ್ಲಿಸುವ ಹಿಂದಿನ ಪ್ರೇರಣೆಯನ್ನು ಪ್ರಶ್ನಿಸಿತು. "ನಿಮ್ಮ ಪ್ರಕಾರ ನ್ಯಾಯಮೂರ್ತಿಗಳು ದುರ್ಬಲರೇ? ಲೋಕಾಯುಕ್ತರು ನ್ಯಾಯಾಂಗದ ಫಲಿತಾಂಶಗಳ ಮೇಲೆ ಪ್ರಭಾವ ಬೀರಬಹುದು ಎಂದು ಭಾವಿಸುತ್ತೀರಾ? ಕುಟಿಲತೆಯಿಂದ ರಿಟ್ ಸಲ್ಲಿಸಲಾಗಿದ್ದು ಇದರ ಹಿಂದಿನ ಪ್ರೇರಣೆ ಏನೆಂಬುದು ತಿಳಿಯುತ್ತಿಲ್ಲ. ನ್ಯಾಯಮೂರ್ತಿಗಳು ಸಂಜೆ 7 ರವರೆಗೂ ಕಾರ್ಯ ನಿರ್ವಹಿಸುತ್ತಿರುತ್ತಾರೆ, ನೀವು ಅದರ ಬಗ್ಗೆ ಎಂದಿಗೂ ತಲೆಕೆಡಿಸಿಕೊಳ್ಳುವುದಿಲ್ಲ," ಎಂದು ನ್ಯಾಯಮೂರ್ತಿ ಓಕಾ ಅತೃಪ್ತಿ ವ್ಯಕ್ತಪಡಿಸಿದರು. 

Also Read
ಕುನಾಲ್ ಕಮ್ರಾ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಡಿ ವೈ ಚಂದ್ರಚೂಡ್

ಇದಕ್ಕೆ ಪೂರಕವಾಗಿ ಅಭಿಪ್ರಾಯ ತಿಳಿಸಿದ ನ್ಯಾ. ಅಮಾನುಲ್ಲಾ ಅವರು “ಅರ್ಜಿಯಲ್ಲಿನ ಅಂಶಗಳ ಬಗ್ಗೆ ನ್ಯಾಯಾಲಯ ಮೇಲ್ನೋಟಕ್ಕೆ ತೃಪ್ತವಾಗಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಗಳ ವಿವೇಚನೆ ಬಗ್ಗೆ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

"ಮೇಲ್ನೋಟಕ್ಕೆ ನಾವು ತೃಪ್ತಿ ಹೊಂದಿಲ್ಲ. ನಿಮ್ಮ ಬಳಿ ಕೆಲವು ದೊಡ್ಡ ಆಧಾರಗಳು ಇರಬಹುದು. ಆದರೆ, ನ್ಯಾಯಮೂರ್ತಿಗಳ ವಿವೇಚನೆಯನ್ನು ನಾವು ತನಿಖೆ ಮಾಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ಅಂತಿಮವಾಗಿ, ನ್ಯಾಯಾಲಯ ಮನವಿಯನ್ನು ಹಿಂಪಡೆಯಲು ಅನುಮತಿ ನೀಡಿತಾದರೂ ಅರ್ಜಿ ಹಲವಾರು ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿದೆ ಎಂದಿತು. ಇದೇ ವೇಳೆ ಪ್ರಕರಣಗಳ ವಿಚಾರಣೆಯಿಂದ ನ್ಯಾಯಮೂರ್ತಿಗಳು ಹಿಂದೆ ಸರಿಯುವ ಸಂಬಂಧ ಮಾರ್ಗಸೂಚಿಗಳನ್ನು ವಿಧಿಸುವುದು ಸೂಕ್ತವೇ ಎಂಬ ಕುರಿತೂ ತಾನು ತೀರ್ಪು ನೀಡಿಲ್ಲ ಎಂದು ಸ್ಪಷ್ಟಪಡಿಸಿತು. 

Kannada Bar & Bench
kannada.barandbench.com