

ತಾಯಿ ತನ್ನ ಮಗುವಿನ ಮುಖ್ಯ ಪೋಷಕಿ ಎಂದ ಮಾತ್ರಕ್ಕೆ ಅದು ಆಕೆಯ ಶೈಕ್ಷಣಿಕ ಆಕಾಂಕ್ಷೆಗಳನ್ನು ಅಥವಾ ವೈಯಕ್ತಿಕ ಬೆಳವಣಿಗೆಯನ್ನು ಮೊಟಕುಗೊಳಿಸಲು ಬಳಕೆಯಾಗಬಾರದು ಎಂದು ದೆಹಲಿ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಟ್ವಿಂಕಲ್ ವಿನಾಯಕ್ ಮತ್ತು ವಿಶಾಲ್ ಶರ್ಮಾ ನಡುವಣ ಪ್ರಕರಣ].
ತಾಯಿಯೊಬ್ಬರು ತಮ್ಮ ಮಗುವಿನೊಟ್ಟಿಗೆ ಅಮೆರಿಕಕ್ಕೆ ತೆರಳಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ಅನುಮತಿ ನೀಡಿದ ಪೀಠ ಈ ವಿಚಾರ ತಿಳಿಸಿತು.
ತಾಯಿ ಎಂಬ ಕಾರಣಕ್ಕೆ ಆಕೆ ಉನ್ನತ ಶಿಕ್ಷಣ ಪಡೆಯದಂತೆ ತಡೆಯುವುದು ಆಕೆಗೆ ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಗತಿಯ ಹಕ್ಕನ್ನು ತಡೆದಂತೆ ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅಭಿಪ್ರಾಯಪಟ್ಟರು.
“ತಾಯಿ ಎಂಬುದು ಸ್ವತಃ ಒಂದು ಬಲವಾದ ಅಸ್ಮಿತೆ. ಹಕ್ಕನ್ನು ಪ್ರತಿಪಾದಿಸುವ ವ್ಯಕ್ತಿ ತಾಯಿಯಾಗಿದ್ದರೆ, ಆ ಹಕ್ಕಿಗೆ ಸಮಾನವಾಗಿಯೇ ಅಲ್ಲದೆ ಹೆಚ್ಚು ಬಲವಿದೆ. ಸಂವಿಧಾನಾತ್ಮಕ ರಕ್ಷಣೆ ಎಂಬುದು ಪೋಷಕರ ಸ್ಥಾನಮಾನದ ಕಾರಣಕ್ಕೆ ಕುಗ್ಗುವಂತಿಲ್ಲ. ಸಮಾಜ ವಿಧಿಸಿರುವ ಸಾಂಪ್ರದಾಯಿಕ ಪಾತ್ರಗಳಲ್ಲಿ ವ್ಯಕ್ತಿಯನ್ನು ಸೀಮಿತಗೊಳಿಸುವ ರೀತಿ ಮೂಲಭೂತ ಹಕ್ಕುಗಳನ್ನು ವ್ಯಾಖ್ಯಾನಿಸಬಾರದು ಎಂಬುದು ಸುಸ್ಥಾಪಿತ ಕಾನೂನು. ತಾಯಿ ಮಗುವಿನ ಪ್ರಮುಖ ಆರೈಕೆಗಾರಳಾಗಿರುವ ಕಾರಣಕ್ಕೆ, ಆಕೆಯನ್ನು ತನ್ನ ಶಿಕ್ಷಣ, ವೈಯಕ್ತಿಕ ಬೆಳವಣಿಗೆ ಅಥವಾ ಸ್ವವಿಕಾಸದ ಹಕ್ಕನ್ನು ತ್ಯಜಿಸುವಂತೆ ಒತ್ತಾಯಿಸುವಂತಿಲ್ಲ,” ಎಂದು ನ್ಯಾಯಾಲಯ ಹೇಳಿದೆ.
ತನ್ನ ಮಗು ಇಲ್ಲವೇ ವೃತ್ತಿ ಜೀವನ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ತಾಯಿಗೆ ಬಲವಂತ ಮಾಡುವಂತಿಲ್ಲ. ಮಕ್ಕಳ ಸುಪರ್ದಿ ಸಂಬಂಧಿತ ತತ್ವಗಳನ್ನು ಈ ಅಂಶವನ್ನು ಮನಸ್ಸಿನಲ್ಲಿರಿಸಿಕೊಂಡೇ ವ್ಯಾಖ್ಯಾನಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
“ಈ ಪ್ರಕರಣದ ತಾಯಿ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಸಾಕಾರಗೊಳಿಸುವ ಹಕ್ಕು ಇದೆ. ತಾಯಿಯನ್ನು ತನ್ನ ಮಗು ಮತ್ತು ವೃತ್ತಿಜೀವನದ ನಡುವೆ ಅನ್ಯಾಯಕರ ಆಯ್ಕೆ ಮಾಡಲು ಒತ್ತಾಯಿಸಲು ಸಾಧ್ಯವಿಲ್ಲ,” ಎಂದು ನ್ಯಾಯಾಲಯ ಹೇಳಿತು.
ಇಂತಹ ಸಮತೋಲನದ ದೃಷ್ಟಿಕೋನವು ತಾಯಿಗೆ ಮಾತ್ರವಲ್ಲ, ಮಗುವಿಗೂ ಉಪಯುಕ್ತವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ತಾಯಿಗೆ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸುವುದು ಆಕೆಯ ಸ್ವಾಭಿಮಾನ, ಆರ್ಥಿಕ ಸ್ವಾತಂತ್ರ್ಯ ಮತ್ತು ಒಟ್ಟಾರೆ ಏಳಿಗೆಯನ್ನು ಬಲಪಡಿಸುತ್ತದೆ. ಇವುಗಳು ಸಂವಿಧಾನದ ವಿಧಿ 21ನೇ ಅಡಿಯಲ್ಲಿ ಜೀವಿಸುವ ಹಕ್ಕಿನ ಮೂಲಭೂತ ಅಂಶಗಳಾಗಿದ್ದು, ಇದರ ಮೂಲಕ ತಾಯಿ ಮಗುವಿಗೆ ಇನ್ನಷ್ಟು ಸುರಕ್ಷಿತ, ಸ್ಥಿರ ಮತ್ತು ಪೋಷಕ ವಾತಾವರಣ ಒದಗಿಸಲು ಸಮರ್ಥಳಾಗುತ್ತಾಳೆ,” ಎಂದು ನ್ಯಾಯಾಲಯ ವಿವರಿಸಿದೆ.
ಮಗುವಿನ ತಾಯಿ ಮತ್ತು ತಂದೆ ನಡುವೆ ಬಹುಕಾಲದಿಂದ ವೈವಾಹಿಕ ವ್ಯಾಜ್ಯ ತಲೆದೋರಿತ್ತು. ಕೌಟುಂಬಿಕ ನ್ಯಾಯಾಲಯ ಮಗುವನ್ನು ಭೇಟಿಯಾಗಲು ತಂದೆಗೆ ಅವಕಾಶ ಕಲ್ಪಿಸಿತ್ತು. ಆದರೆ ತಾಯಿ ಮಗುವಿನೊಂದಿಗೆ ಅಮೆರಿಕಾಗೆ ತೆರಳಿದ ಹಿನ್ನೆಲೆಯಲ್ಲಿ ಪ್ರಕರಣ ವಿವಿಧ ನ್ಯಾಯಾಂಗ ಹಂತಗಳನ್ನು ದಾಟಿ ಹೈಕೋರ್ಟ್ ತಲುಪಿತು.
ತಾಯಿ ತಾನು ಈಗಾಗಲೇ ಒಂದು ಸೆಮಿಸ್ಟರ್ ಪೂರ್ಣಗೊಳಿಸಿದ್ದು, ತನ್ನ ಶಿಕ್ಷಣ ತನಗೆ ಉದ್ಯೋಗಾವಕಾಶ ಹೆಚ್ಚಿಸಿ ಮಗುವಿನ ಜೀವನಮಟ್ಟ ಸುಧಾರಿಸುತ್ತದೆ ಎಂದು ವಾದಿಸಿದರು. ಮಗುವಿನ ಹಿತವೇ ತಾಯಿಗೆ ಮುಖ್ಯ ಎಂದು ತಂದೆ ಆಕ್ಷೇಪಿಸಿದರು.
ಆದರೆ ತಾಯಿಯ ಹಕ್ಕು ಮತ್ತು ಮಗುವಿನ ಹಿತಾಸಕ್ತಿ ನಡುವೆ ಸಮತೋಲನ ಸಾಧಿಸುವುದು ಅಗತ್ಯ ಎಂದು ನ್ಯಾಯಾಲಯ ತಿಳಿಸಿತು. ತಾಯಿ ಉತ್ತಮವಾಗಿ ಅಧ್ಯಯನ ಮಾಡುತ್ತಿರುವುದು ಹಾಗೂ ಮಗು ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿರುವುದನ್ನು ಪರಿಗಣಿಸಿದ ಅದು ತಾಯಿಗೆ ಮಗುವಿನೊಂದಿಗೆ ಅಮೆರಿಕಾಗೆ ತೆರಳಿ ತನ್ನ ಪದವಿ ಅಧ್ಯಯನ ಪೂರ್ಣಗೊಳಿಸಲು ಅನುಮತಿ ನೀಡಿತು.
[ತೀರ್ಪಿನ ಪ್ರತಿ]