ಅಪಘಾತ ಸಂತ್ರಸ್ತರು ಕೇಳಿದ ಮೊತ್ತಕ್ಕಿಂತಲೂ ಹೆಚ್ಚಿನ ಪರಿಹಾರ ಧನವನ್ನು ಮೋಟಾರು ಅಪಘಾತದ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ಅಥವಾ ನ್ಯಾಯಾಲಯಗಳು ನೀಡಲು ಯಾವುದೇ ನಿರ್ಬಂಧ ಇಲ್ಲ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಯೋಗೇಶ್ ಸುಭಾಷ್ ಪಂಚಾಲ್ ಮತ್ತು ಮೊಹಮ್ಮದ್ ಹುಸೇನ್ ಮತ್ತು ಸಂಬಂಧಿತ ಮೇಲ್ಮನವಿ].
“ಹಕ್ಕುದಾರರು ಕೋರಿರುವುದಕ್ಕಿಂತ ಹೆಚ್ಚಿನ ಪರಿಹಾರ ನೀಡಲು ಯಾವುದೇ ನಿರ್ಬಂಧವಿಲ್ಲ. ಒಂದೊಮ್ಮೆ 'ನ್ಯಾಯಯುತ ಪರಿಹಾರ'ವು ಹಕ್ಕುದಾರರು ಕೋರಿರುವ ಪರಿಹಾರಕ್ಕಿಂತ ಹೆಚ್ಚಿನದಾಗಿದ್ದರೆ ಅದನ್ನು ನೀಡುವುದು ಮಂಡಳಿ ಮತ್ತು ನ್ಯಾಯಾಲಯದ ಹೊಣೆಯಾಗಿದೆ”ಎಂದು ಹೈಕೋರ್ಟ್ ಹೇಳಿದೆ.
ಈ ಹಿನ್ನೆಲೆಯಲ್ಲಿ ನ್ಯಾ. ಅನುಜಾ ಪ್ರಭುದೇಸಾಯಿ ಅವರಿದ್ದ ಏಕಸದಸ್ಯ ಪೀಠವು ಅರ್ಜಿದಾರರು ಕೋರಿದ್ದ ಮೊತ್ತಕ್ಕಿಂತಲೂ ಹೆಚ್ಚಿನ ಮೊತ್ತದ ರೂಪದಲ್ಲಿ ʼನೋ ಫಾಲ್ಟ್ ಲಯಬಿಲಿಟಿʼಯನ್ನೂ ಒಳಗೊಂಡಂತೆ ಎಂಎಸಿಟಿ ನೀಡಿದ್ದ ರೂ 48.3 ಲಕ್ಷ ಪರಿಹಾರದ ಬದಲಿಗೆ ₹ 64.8 ಲಕ್ಷ ಪರಿಹಾರಕ್ಕೆ ಆದೇಶಿಸಿತು. ಬಡ್ಡಿ ಸೇರಿ ಸಂತ್ರಸ್ತರಿಗೆ ₹1.17 ಕೋಟಿಗೂ ಹೆಚ್ಚು ಮೊತ್ತದ ಪರಿಹಾರ ನೀಡುವಂತೆ ವಿಮಾ ಕಂಪೆನಿಗೆ ಸೂಚಿಸಿತು.
ಸಂತ್ರಸ್ತ ವ್ಯಕ್ತಿ ಗಾಲಿ ಕುರ್ಚಿಯನ್ನೇ ಆಧರಿಸಿ ಜೀವನ ಪರ್ಯಂತ ಬದುಕಬೇಕಿದ್ದು ಕುಟುಂಬದ ಆಧಾರವಾಗಿದ್ದ ಆತ ತನ್ನ ಗಳಿಕೆಯ ಸಾಮರ್ಥ್ಯವನ್ನು ಸಂಪೂರ್ಣ ಕಳೆದುಕೊಂಡಿದ್ದಾನೆ ಎಂಬುದನ್ನು ಗಮನಿಸಿ ನ್ಯಾಯಾಲಯ ಈ ಆದೇಶ ನೀಡಿತು.
“ವಿತ್ತೀಯ ಪರಿಹಾರ ಎಷ್ಟೇ ಹೆಚ್ಚಿದ್ದರೂ ಅದು ಸಂತ್ರಸ್ತನ ಜೀವನವನ್ನು ಮರುರೂಪಿಸಲು ಅಥವಾ ಮಾನಸಿಕ ಇಲ್ಲವೇ ದೈಹಿಕ ಆಘಾತವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ . ಆತನ ಸಂಗಾತಿಯ ಒಡೆದ ಕನಸುಗಳನ್ನು ಜೋಡಿಸಲು ಸಾಧ್ಯವಿಲ್ಲ. ಆತನ ಮಕ್ಕಳ ಬಾಲ್ಯವನ್ನು ಮರಳಿ ತರಲು ಇಲ್ಲವೇ ತನ್ನ ಮಗ ಜೀವಂತ ಶವದಂತೆ ಇರುವುದನ್ನು ಕಂಡ ಪೋಷಕರ ಸಂಕಟವನ್ನು ತೊಡೆದು ಹಾಕಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ತಿಳಿಸಿತು.