[ಅಪಘಾತ ಪರಿಹಾರ] ಸಂಭವನೀಯತೆಯ ಆಧಿಕ್ಯದ ಆಧಾರದಲ್ಲಿ ನಿರ್ಧರಿಸಬೇಕೆ ವಿನಾ ಅನುಮಾನಕ್ಕೆ ಆಸ್ಪದವಿಲ್ಲದೆ ಅಲ್ಲ: ಸುಪ್ರೀಂ

ಹಕ್ಕುದಾರರು ತಮ್ಮ ವಾದವನ್ನು ಸಾಧ್ಯತೆಗಳ ಬಲದ ಮೇಲೆ ಸಾಬೀತುಪಡಿಸಬೇಕೆ ವಿನಾ ಅನುಮಾನಾಸ್ಪದ ಪುರಾವೆಗಳ ಆಧಾರದ ಮೇಲೆ ಅಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Justices BV Nagarathna and Prashant Mishra
Justices BV Nagarathna and Prashant Mishra

ಮೋಟಾರು ಅಪಘಾತ ಪ್ರಕರಣದಲ್ಲಿ ಸಾವು ಅಥವಾ ದೈಹಿಕ ಹಾನಿಗೆ ಪರಿಹಾರ ನೀಡುವಂತೆ ಕೋರಿರುವ ಅರ್ಜಿಯ ಪ್ರಕರಣದಲ್ಲಿ ಅನುಮಾನಕ್ಕೆ ಆಸ್ಪದವಿಲ್ಲದ ಪುರಾವೆಯ ಮಾನದಂಡವನ್ನು ಅನ್ವಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಿಳಿಸಿದೆ [ಮ್ಯಾಥ್ಯೂ ಅಲೆಕ್ಸಾಂಡರ್‌ ಮತ್ತು ಮಹಮ್ಮದ್‌ ಶಫಿ ಮತ್ತಿತರರ ನಡುವಣ ಪ್ರಕರಣ].

ಹಕ್ಕುದಾರರು ತಮ್ಮ ವಾದವನ್ನು ಸಂಭವನೀಯತೆಗಳ ಆಧಿಕ್ಯದ (ಸಾಧ್ಯತೆಗಳು ಹೆಚ್ಚಿರುವುದರ ಆಧಾರದಲ್ಲಿ) ಮೇಲೆ ಸಾಬೀತುಪಡಿಸಬೇಕೆ ವಿನಾ ಅನುಮಾನಕ್ಕೆ ಆಸ್ಪದವಿಲ್ಲದ ಪುರಾವೆಗಳ ಆಧಾರದ ಮೇಲೆ ಅಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

“ಹಕ್ಕುದಾರರು ಸಂಭವನೀಯತೆಯ ಆಧಿಕ್ಯದ ಆಧಾರದ ಮೇಲೆ ತಮ್ಮ ವಾದ ಮಂಡಿಸಬೇಕು. ರಸ್ತೆ ಅಪಘಾತದಲ್ಲಿ ಸಾವು ಅಥವಾ ದೈಹಿಕಹಾನಿಗೆ ಪರಿಹಾರ ಕೋರಿರುವ ಅರ್ಜಿಯನ್ನು ಪರಿಗಣಿಸುವಾಗ ಅನುಮಾನಕ್ಕೆ ಆಸ್ಪದವಿಲ್ಲದ ಪುರಾವೆಯ ಮಾನದಂಡವನ್ನು ಅನ್ವಯಿಸುವಂತಿಲ್ಲ” ಎಂದು ನ್ಯಾಯಾಲಯ ನುಡಿದಿದೆ.

ಮೋಟಾರು ಅಪಘಾತ ಪ್ರಕರಣದ ಅಂತಿಮ ವರದಿಯನ್ನು ರದ್ದುಗೊಳಿಸಿದ ಕೇರಳ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ಸ್ಪಷ್ಟಪಡಿಸಿತು. ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ ಘಟನೆಯು ತಪ್ಪಿಸಲಾಗದ ಅಪಘಾತವಾಗಿದ್ದು ನಿರ್ಲಕ್ಷ್ಯಕ್ಕೆ ಮೇಲ್ಮನವಿದಾರರ ಮಗನನ್ನು (ಅಪಘಾತದ ವೇಳೆ ಮೃತಪಟ್ಟ ಕಾರು ಚಲಾಯಿಸುತ್ತಿದ್ದ ವ್ಯಕ್ತಿ) ಗುರಿಮಾಡುವಂತಿಲ್ಲ” ಎಂದು ತೀರ್ಪು ನೀಡಿತ್ತು.

ಗ್ಯಾಸ್‌ ಟ್ಯಾಂಕರ್‌ ಹಾಗೂ ಆಲ್ಟೋ ಕಾರ್‌ ನಡುವೆ ಡಿಕ್ಕಿ ಸಂಭವಿಸಿ ಕಾರು ಚಲಾಯಿಸುತ್ತಿದ್ದ ಮೇಲ್ಮನವಿದಾರನ ಮಗ ಸೇರಿದಂತೆ ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದರು. ಐಪಿಸಿ ಸೆಕ್ಷನ್‌ 279 ಮತ್ತು 304 ಎ ಅಡಿಯಲ್ಲಿ ಮೇಲ್ಮನವಿದಾರರ ಮಗನ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಪ್ರತಿವಾದಿ ಮತ್ತು ಮೃತ ಪ್ರಯಾಣಿಕರ ಸಂಬಂಧಿಕರು ಮೋಟಾರು ಅಪಘಾತ ಪರಿಹಾರ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಪರಿಹಾರ ಕೋರಿದ್ದ ಅರ್ಜಿಯಲ್ಲಿ ಮೇಲ್ಮನವಿದಾರನ ಮೃತ ಮಗನನ್ನು ಕೂಡ ಪ್ರತಿವಾದಿಯನ್ನಾಗಿ ಮಾಡಲಾಗಿತ್ತು. ಈ ಮಧ್ಯೆ ತನ್ನ ಮಗ ಚಲಾಯಿಸುತ್ತಿದ್ದ ಆಲ್ಟೋ ಕಾರಿಗೆ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮತ್ತು ಮಾಲೀಕನ ವಿರುದ್ಧವೂ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ಅಂತಿಮ ವರದಿ ಸಲ್ಲಿಸಿದ್ದ ಸಹಾಯಕ ಪೊಲೀಸ್‌ ಕಮಿಷನರ್‌ ಮೊದಲಿಗೆ ಮೇಲ್ಮನವಿದಾರನ ಮಗ ಸಾವನ್ನಪ್ಪಿರುವುದರಿಂದ ಆತನ ಮೇಲಿನ ಆರೋಪಗಳು ಗೌಣವಾಗಿವೆ ಎಂದು ಹೇಳಿದ್ದರು. ಮೂರು ವರ್ಷಗಳ ಬಳಿಕ 2019ರ ನವೆಂಬರ್‌ನಲ್ಲಿ ಮತ್ತೊಂದು ಅಂತಿಮ ವರದಿ ಸಲ್ಲಿಸಿ “ಘಟನೆ ತಪ್ಪಿಸಲಾಗದ ಅಪಘಾತವಾಗಿದ್ದು ಮೇಲ್ಮನವಿದಾರರ ಮಗನ ನಿರ್ಲಕ್ಷ್ಯ ಘಟನೆಗೆ ಕಾರಣವಲ್ಲ” ಎಂದು ತಿಳಿಸಲಾಯಿತು.

ಪ್ರತಿವಾದಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್‌ ಅಂತಿಮ ವರದಿ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಮೇಲ್ಮನವಿದಾರರು ಸುಪ್ರೀಂ ಕೋರ್ಟ್‌ಗೆ ಪ್ರಸ್ತುತ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ತನ್ನ ತೀರ್ಪಿನಲ್ಲಿ ವರದಿಯ ನಿಖರತೆಯನ್ನು ನಿರ್ಧರಿಸಲು ಅನಗತ್ಯ ಸಂಶೋಧನೆಗಳ ಸ್ವರೂಪದ ಅವಲೋಕನ ಮಾಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಹಿನ್ನೆಲೆಯಲ್ಲಿ ಅದು, ಪರಿಹಾರ ಕೋರಿರುವ ಹಕ್ಕುದಾರರು ತಮ್ಮ ವಾದವನ್ನು ಸಂಭವನೀಯತೆಗಳ ಆಧಿಕ್ಯದ (ಸಾಧ್ಯತೆಗಳು ಹೆಚ್ಚಿರುವುದರ ಆಧಾರದಲ್ಲಿ) ಮೇಲೆ ಸಾಬೀತುಪಡಿಸಬೇಕೆ ವಿನಾ ಅನುಮಾನಕ್ಕೆ ಆಸ್ಪದವಿಲ್ಲದ ಪುರಾವೆಗಳ ಆಧಾರದ ಮೇಲೆ ಅಲ್ಲ. ಹೈಕೋರ್ಟ್‌ನ ಇಂತಹ ಕ್ರಮ ಸರಿಯಲ್ಲ ಎಂದು ಮೇಲ್ಮನವಿಯನ್ನು ಪುರಸ್ಕರಿಸಿ ಹೈಕೋರ್ಟ್‌ ತೀರ್ಪನ್ನು ರದ್ದುಗೊಳಿಸಿದೆ.

ಸಂತ್ರಸ್ತ ಅರ್ಜಿದಾರರು ಸಂಭವನೀಯತೆಯ ಅಧಾರಗಳ ಮೇಲೆ ಪರಿಹಾರವನ್ನು ಕೋರಲು ಸೂಕ್ತ ಪ್ರಾಧಿಕಾರದ ಮುಂದೆ ತಮ್ಮ ವಾದ ಮಂಡಿಸಲು ಸ್ವತಂತ್ರರು ಎಂದಿದೆ.

Related Stories

No stories found.
Kannada Bar & Bench
kannada.barandbench.com