

ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ (ಐಜಿಎನ್‌ಟಿಯು) ಪ್ರಾಧ್ಯಾಪಕರೊಬ್ಬರನ್ನು ವಜಾಗೊಳಿಸಿದ್ದ ಆದೇಶವನ್ನು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ [ರಾಕೇಶ್ ಸಿಂಗ್ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ನಡುವಣ ಪ್ರಕರಣ].
ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿನಿ ನಡುವೆ 2013ರಿಂದ 2019ರವರೆಗೆ ಸಂಬಂಧವಿತ್ತು. 2021ರಲ್ಲಷ್ಟೇ ಆಕೆ ಸಂಶೋಧನಾ ವಿದ್ಯಾರ್ಥಿನಿಯಾಗಿ ವಿವಿಗೆ ಸೇರ್ಪಡೆಗೊಂಡರು. ಆಗ ಅವರಿಗೆ 30 ವರ್ಷ ವಯಸ್ಸಾಗಿತ್ತು ಮತ್ತು ವಿವಾಹಿತೆಯಾಗಿದ್ದರು. ಇಬ್ಬರ ನಡುವಿನ ಸಂಬಂಧ ಸಂಪೂರ್ಣವಾಗಿ ಖಾಸಗಿ ಮತ್ತು ವೈಯಕ್ತಿಕ ವಿಚಾರವಾಗಿದ್ದು ಪರಿಸ್ಥಿತಿ ಹೀಗಿರುವಾಗ ವಿಚಾರಣೆ ನಡೆಸಲು ವಿಶ್ವವಿದ್ಯಾಲಯಕ್ಕೆ ಯಾವುದೇ ಅಧಿಕಾರವಿಲ್ಲ ಎಂದ ನ್ಯಾಯಮೂರ್ತಿ ವಿವೇಕ್ ಜೈನ್ ತಿಳಿಸಿದರು.
ವಿದ್ಯಾರ್ಥಿನಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಕಾಯಿದೆ- 2013ರ (ಪೋಶ್ ಕಾಯಿದೆ) ಅಡಿಯಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ರಾಕೇಶ್ ಸಿಂಗ್ ವಿರುದ್ಧ ವಿವಿಯ ಆಂತರಿಕ ದೂರು ಸಮಿತಿ ತನಿಖೆ ನಡೆಸಿತ್ತು.
ಪ್ರಾಧ್ಯಾಪಕ ತನ್ನ ಮೇಲೆ ಅತ್ಯಾಚಾರವೆಸಗಿ ತನ್ನನ್ನು ಗರ್ಭಿಣಿ ಮಾಡಿದ್ದಾರೆ ಎಂದು ಆಕೆ ನೀಡಿದ್ದ ದೂರನ್ನು 2022ರಲ್ಲಿ ಸಮಿತಿ ಎತ್ತಿ ಹಿಡಿದಿತ್ತು. ಪರಿಣಾಮ ಸಿಂಗ್ ಅವರ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಲಾಗಿತ್ತು. ವಿಚಾರಣಾಕಾರಿ ರಾಕೇಶ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ ಹಿನ್ನೆಲೆಯಲ್ಲಿ ವಿವಿ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು.
ಸಮಿತಿ ರಚನೆ ಸೂಕ್ತವಾಗಿಲ್ಲ. ಅದರ ಅನೇಕ ಸದಸ್ಯರು ವಿಚಾರಣೆ ನಡೆಸಲಿಲ್ಲ. ಲೈಂಗಿಕ ಶೋಷಣೆ ಆರೋಪದ ಸಮಯದಲ್ಲಿ ದೂರುದಾರರು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರಲಿಲ್ಲವಾದ್ದರಿಂದ ಪೋಶ್ ಕಾಯಿದೆ ಅನ್ವಯಿಸುವಂತಿಲ್ಲ. ಸೆಷನ್ಸ್ ನ್ಯಾಯಾಲಯ ತನ್ನನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿದೆ ಎಂದು ರಾಕೇಶ್ ವಾದಿಸಿದರು.
ಇದನ್ನು ವಿವಾಹೇತರ ಸಂಬಂಧ ಎಂದು ಕರೆಯಬಹುದು ಎಂದ ಹೈಕೋರ್ಟ್ ಯುಜಿಸಿ ನಿಯಮಾವಳಿಗೆ ವಿರುದ್ಧವಾಗಿ ಸಮಿತಿಯನ್ನು ಕಾನೂನುಬಾಹಿರವಾಗಿ ರಚಿಸಲಾಗಿದೆ ಎಂದು ನಿರ್ಣಯಿಸಿತು. ವಿಚಾರಣಾ ಸಮಿತಿ ಸದಸ್ಯರ ಸಹಿ ಪ್ರಕ್ರಿಯೆ ಅನುಮಾನಾಸ್ಪದವಾಗಿದೆ. ಇದೊಂದು ನಕಲಿ ವರದಿ ಎಂದು ನ್ಯಾಯಾಲಯ ನುಡಿಯಿತು.
ಸಿಂಗ್ ವಿರುದ್ಧದ ಆರೋಪಗಳನ್ನು ಪರಿಶೀಲಿಸಿದಾಗ, ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವ ಮೊದಲೇ ಅವರ ಮತ್ತು ವಿದ್ಯಾರ್ಥಿನಿಯ ನಡುವಿನ ಸಂಬಂಧ ಪ್ರಾರಂಭವಾಗಿತ್ತು ಎಂಬ ಅಂಶವನ್ನು ಪರಿಗಣಿಸಲು ಸಮಿತಿ ವಿಫಲವಾಗಿದೆ. ಅಲ್ಲದೆ ಜಾಮೀನು ಪಡೆಯಲು ಯತ್ನಿಸುತ್ತಿದ್ದ ಹಿನ್ನೆಲೆಯಲ್ಲಿ ಅವರು ಕಾಲೇಜಿಗೆ ಹಾಜರಾಗುವುದು ಸಾಧ್ಯವಿಲ್ಲದೆ ಇದ್ದುದರಿಂದ ಅದನ್ನು ದುಷ್ಕೃತ್ಯ ಎಂದು ವಿವಿ ಪರಿಗಣಿಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಇದಲ್ಲದೆ, ಕ್ರಿಮಿನಲ್ ಪ್ರಕರಣದಲ್ಲಿ ಪರಿಹಾರಕ್ಕಾಗಿ ಹೈಕೋರ್ಟ್‌ಗೆ ಹೋಗಿದ್ದಕ್ಕಾಗಿ ಸಿಂಗ್ ಅವರ ಮೇಲೆ ಆರೋಪ ಹೊರಿಸಲು ಸಾಧ್ಯವಿಲ್ಲ. ಏಕೆಂದರೆ ತಮ್ಮ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣದಲ್ಲಿ ಹೈಕೋರ್ಟ್‌ಗೆ ಹೋಗಿರುವುದು ಅವರ ಕಾನೂನಾತ್ಮಕ ಹಕ್ಕು. ವಿಶ್ವವಿದ್ಯಾಲಯವನ್ನು ಪ್ರಾಧ್ಯಾಪಕ ಟೀಕಿಸಿರುವ ಬಗ್ಗೆ ವಿವಿ ಯಾವುದೇ ದಾಖಲೆ ಸಲ್ಲಿಸಿಲ್ಲ. ಹೀಗಾಗಿ ಇದನ್ನು ಅನುಚಿತ ವರ್ತನೆ ಎಂದು ಪರಿಗಣಿಸಲಾಗದು ಎಂದು ಅದು ಹೇಳಿತು.
ಪ್ರಶ್ನೆಪತ್ರಿಕೆ ಸೋರಿಕೆ ಆರೋಪವನ್ನಷ್ಟೇ ಮರುತನಿಖೆ ನಡೆಸುವಂತೆ ಸೂಚಿಸಿದ ನ್ಯಾಯಾಲಯ ಪ್ರಾಧ್ಯಾಪಕನ ವಿರುದ್ಧದ ಉಳಿದೆಲ್ಲಾ ಆರೋಪಗಳನ್ನು ಬದಿಗೆ ಸರಿಸಿತು. ಅವರನ್ನು ಮರುನೇಮಕ ಮಾಡಿಕೊಳ್ಳಬೇಕು. ಆದರೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಬಗ್ಗೆ ಹೊಸ ಆದೇಶ ಬರುವವರೆಗೆಅವರ ಅಮಾನತು ಆದೇಶ ಮುಂದುವರೆಯಬೇಕು ಎಂದು ಅದು ಸ್ಪಷ್ಟಪಡಿಸಿತು.
[ತೀರ್ಪಿನ ಪ್ರತಿ]