ಮಧ್ಯಪ್ರದೇಶ ವಲಸೆ ಕಾರ್ಮಿಕರ ಕುರಿತಂತೆ ಆಡಳಿತಾರೂಢರ ಧೋರಣೆ ಏನು?

ಸಮೀಕ್ಷಾ ವರದಿ ಹೇಳುವ ಪ್ರಕಾರ ಸುಪ್ರೀಂಕೋರ್ಟ್‌ ನಿರ್ದೇಶನಗಳಿಗೆ ಸಂಬಂಧಿಸಿದಂತೆ ವಾಸ್ತವದಲ್ಲಿ ಕೈಗೊಂಡ ಕ್ರಮ ನೀರಸವಾಗಿದೆ. ಕೇವಲ ಶೇ. 14 ರಷ್ಟು ವಲಸೆ ಕಾರ್ಮಿಕರಿಂದ ಮಾತ್ರ ಅವರ ಕೌಶಲ್ಯದ ಸ್ವರೂಪದ ಕುರಿತಂತೆ ಮಾಹಿತಿ ಪಡೆಯಲಾಗಿದೆ.
ಮಧ್ಯಪ್ರದೇಶ ವಲಸೆ ಕಾರ್ಮಿಕರ ಕುರಿತಂತೆ ಆಡಳಿತಾರೂಢರ ಧೋರಣೆ ಏನು?

ವಲಸೆ ಕಾರ್ಮಿಕರು ಬಲವಂತವಾಗಿ ತಮ್ಮೂರು ಸೇರುವಂತೆ ಮಾಡಿತು ಕೋವಿಡ್‌ ದಾಳಿ. ಅವೈಜ್ಞಾನಿಕ ಲಾಕ್‌ಡೌನ್‌ ಹಲವು ದುಷ್ಪರಿಣಾಮಗಳನ್ನು ಬೀರಿತು. ಅನ್ನಾಹಾರ ದೊರೆಯದೇ ಕೆಲವರು ಹಾದಿ ಮಧ್ಯೆ ಜೀವ ತೊರೆದರೆ ಮತ್ತೆ ಕೆಲವರು ನಿರುದ್ಯೋಗ, ಆರ್ಥಿಕ ಅಭದ್ರತೆ ಎಂಬ ಹಸಿದ ಹಲ್ಲಿಗೆ ಆಹಾರವಾಗಿದ್ದಾರೆ. ಅದಕ್ಕೆ ಕೋವಿಡ್‌ ಎಷ್ಟು ಹೊಣೆಯೋ ಅಷ್ಟೇ ಹೊಣೆ ವ್ಯವಸ್ಥೆಯದ್ದು ಕೂಡ. ನಿರೀಕ್ಷಿತ ಮಟ್ಟದ ಸಹಾಯ ದೊರೆಯದಿರುವುದು, ದೊರೆತ ನೆರವು ಕೂಡ ದೊಡ್ಡ ಮಟ್ಟದಲ್ಲಿ ವಲಸೆ ಕಾರ್ಮಿಕರನ್ನು ತಲುಪದಿರುವುದು ಅವರ ಬದುಕನ್ನು ಮೂರಾಬಟ್ಟೆ ಮಾಡಿದೆ. ಇದೆಲ್ಲದರ ಪರಿಣಾಮ ಮತ್ತೆ ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ತ್ಯಜಿಸಿ ನಗರಗಳತ್ತ ಮುಖಮಾಡಿದ್ದಾರೆ. ಕೋವಿಡ್‌ ಭೀತಿ, ಅಭದ್ರತೆಯ ನಡುವೆಯೂ ಕೆಲಸ ಮಾಡಲೇಬೇಕಾದ ಅವರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಎಂಬಂತಿದೆ.

ಮಧ್ಯಪ್ರದೇಶ ವಲಸೆ ಕಾರ್ಮಿಕರ ಪ್ರಸ್ತುತ ಸ್ಥಿತಿಗತಿಗೆ ಸಂಬಂಧಿಸಿದ ಸಮೀಕ್ಷೆಯೊಂದರ ಪ್ರಮುಖ ಅಂಶಗಳನ್ನು ಆಧರಿಸಿದ ವರದಿಯ ಎರಡನೇ ಮತ್ತು ಅಂತಿಮ ಭಾಗ ಇದಾಗಿದೆ. ವಲಸೆ ಕಾರ್ಮಿಕರ ಪ್ರಸಕ್ತ ಸ್ಥಿತಿಗತಿಯ ಕುರಿತಾದ ಅನೇಕ ಕಹಿ ಸತ್ಯಗಳು ರಕ್ಷಿತಾ ಅಗರ್‌ವಾಲ್‌, ರೋಹಿತ್‌ ಶರ್ಮಾ ಹಾಗೂ ಲಕ್ಷಯ್‌ ಎಂಬ ಯುವ ಸಂಶೋಧಕರು ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗಗೊಂಡಿವೆ. ಸುಮಾರು ಅರವತ್ತು ಸಾವಿರ ಮಂದಿಯನ್ನು ಸಮೀಕ್ಷೆಗೆ ಪರಿಗಣಿಸಿ ಅವರಲ್ಲಿ ವೈಜ್ಞಾನಿಕ ವಿಧಾನದ ಮೂಲಕ 1500 ಮಂದಿಯನ್ನು ಆಯ್ದು ಈ ಪೈಲಟ್‌ ಸಮೀಕ್ಷೆ ನಡೆಸಲಾಗಿದೆ. ʼಎಂಪಿ ಮೈಗ್ರೆಂಟ್‌ ಪ್ರಾಜೆಕ್ಟ್‌ʼ ಹೆಸರಿನ ಈ ಅಧ್ಯಯನ ಮಧ್ಯಪ್ರದೇಶದ ವಲಸೆ ಕಾರ್ಮಿಕರ ಕಠೋರ ಬದುಕನ್ನು ಹಲವು ಮಗ್ಗಲುಗಳಿಂದ ವಿಶ್ಲೇಷಿಸುವುದರ ಜೊತೆಗೆ ವ್ಯವಸ್ಥೆ ವರ್ತಿಸಿದ ರೀತಿಯನ್ನೂ ಕಣ್ಣಿಗೆ ಕಟ್ಟಿಕೊಡುತ್ತದೆ. ಉದಾಹರಣೆಗೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 90ರಷ್ಟು ಮಂದಿಗೆ ಆಳುವವರು ನೀಡಿದ್ದ ಭರವಸೆಯ ಹೊರತಾಗಿಯೂ ಇದುವರೆಗೆ ಯಾವುದೇ ಧನಸಹಾಯ ದೊರೆತಿಲ್ಲ. ದುರ್ಬಲ ಸಮುದಾಯಗಳ ಬಗ್ಗೆ ಸರ್ಕಾರಗಳು ಹೊಂದಿರುವ ಧೋರಣೆಯನ್ನು ಅರಿಯಲು ಇಂತಹ ಒಂದು ಉದಾಹರಣೆ ಸಾಕು.

Also Read
ಮಧ್ಯಪ್ರದೇಶ ವಲಸೆ ಕಾರ್ಮಿಕರ ಕಣ್ಣೀರ ಕತೆ: ಕುಟುಂಬ ನಡೆಸಲು ಆಡಳಿತಾತ್ಮಕ ನೆರವು ಬೇಡಿದ ಶೇ. 67 ಮಂದಿ

ಅದು ಏಪ್ರಿಲ್‌ ತಿಂಗಳು. ರಾಜ್ಯಕ್ಕೆ ಮರಳುತ್ತಿರುವ ವಲಸೆ ಕಾರ್ಮಿಕರು ನೇರವಾಗಿ ತಮ್ಮ ಬ್ಯಾಂಕ್‌ ಖಾತೆಗೆ ರೂ 1,000 ಪರಿಹಾರ ಧನ ಪಡೆಯಲಿದ್ದಾರೆ ಎಂದು ಮಧ್ಯಪ್ರದೇಶ ಸರ್ಕಾರ ಘೋಷಿಸಿತು. ನೆರವು ಅಗತ್ಯವಿದ್ದವರ ಖಾತೆಗೆ ಹೆಚ್ಚುವರಿಯಾಗಿ ಹಣ ವರ್ಗಾಯಿಸಲಾಗುವುದು ಎಂಬ ಭರವಸೆಯನ್ನೂ ನೀಡಿತು. ಆದರೆ ಸಂದರ್ಶನದಲ್ಲಿ ಭಾಗವಹಿಸಿದ್ದ 1460 ಮಂದಿಯಲ್ಲಿ ಅಂದರೆ ಶೇ 90ರಷ್ಟು ಜನರಿಗೆ ಯಾವುದೇ ಹಣಕಾಸಿನ ನೆರವು ದೊರೆತಿಲ್ಲ. ಬಹುತೇಕ ಜನ ಈಗಲೂ ಹಣ ದೊರೆಯಬಹುದೆಂಬ ತೀವ್ರ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿ ಗಮನಿಸಬೇಕಿರುವುದು ಮಧ್ಯಪ್ರದೇಶ ಸರ್ಕಾರ ಘೋಷಿಸಿದ ಮೊತ್ತ. ರೂ 1,000 ಮೊತ್ತದ ಪರಿಹಾರ ನಿಜಕ್ಕೂ ಒಂದು ಪರಿಹಾರವೇ ಎಂಬುದನ್ನು ವ್ಯವಸ್ಥೆಯೇ ಹೇಳಬೇಕು.

ಸುಪ್ರೀಂಕೋರ್ಟ್‌ ನಿರ್ದೇಶನಗಳ ಬಗ್ಗೆ ಅಲಕ್ಷ್ಯ

ತವರು ರಾಜ್ಯಗಳಿಗೆ ಮರಳುತ್ತಿರುವ ವಲಸೆ ಕಾರ್ಮಿಕರಿಗೆ ಸೂಕ್ತ ಪ್ರಮಾಣದಲ್ಲಿ ಉದ್ಯೋಗಾವಕಾಶ ದೊರೆಯುತ್ತಿದೆಯೇ ಎಂದು ಖಾತ್ರಿಪಡಿಸಿಕೊಳ್ಳಲು ಸುಪ್ರೀಂಕೋರ್ಟ್‌ 2020ರ ಜೂನ್‌ 9ರಂದು ಕೆಳಗಿನ ನಿರ್ದೇಶನಗಳನ್ನು ನೀಡಿತು:

  • ಪ್ರತಿ ರಾಜ್ಯ ಸರ್ಕಾರ ಮರಳಿ ಬರುತ್ತಿರುವ ವಲಸೆ ಕಾರ್ಮಿಕರ ದಾಖಲೆ ಹೊಂದಿರಬೇಕು. ಗ್ರಾಮ, ವಲಯ, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ವಲಸೆ ಕಾರ್ಮಿಕರ ವಿವರಗಳು, ಕೌಶಲ್ಯದ ಮಾಹಿತಿ, ಹಿಂದೆ ಉದ್ಯೋಗದಲ್ಲಿದ್ದ ಸ್ಥಳಗಳ ಮಾಹಿತಿ ಕಲೆಹಾಕಬೇಕು. ಇದರಿಂದ ರಾಜ್ಯಾಡಳಿತ ಹಾಗೂ ಜಿಲ್ಲಾಡಳಿತಗಳು ಕಾರ್ಮಿಕರಿಗೆ ಅಗತ್ಯ ನೆರವಿನ ಹಸ್ತ ಚಾಚಲು ಸಾಧ್ಯವಾಗುತ್ತದೆ.

  • ವಲಯಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಾಲೋಚನಾ ಕೇಂದ್ರಗಳನ್ನು ಸ್ಥಾಪಿಸಿ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳು ಮತ್ತಿತರ ಉದ್ಯೋಗ ಮಾಹಿತಿಗಳನ್ನು ಒದಗಿಸಬೇಕು. ಇದರಿಂದ ಕಾರ್ಮಿಕರು ನಿಷ್ಕ್ರಿಯವಾಗುವುದು ತಪ್ಪುತ್ತದೆ ಮತ್ತು ಅವರನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುವುದು ಸರ್ಕಾರಕ್ಕೆ ಸಾಧ್ಯವಾಗುತ್ತದೆ.

  • ತಮ್ಮ ಉದ್ಯೋಗಕ್ಕೆ ಮರಳಲು ಬಯಸುವ ಕಾರ್ಮಿಕರು ಹಿಂತಿರುಗಲು ಅನುಕೂಲವಾಗುವಂತೆ ಅಗತ್ಯ ಮಾಹಿತಿಯನ್ನು ರಾಜ್ಯ ಸರ್ಕಾರಗಳು ಒದಗಿಸಬೇಕು ಎಂದು ನಿರೀಕ್ಷಿಸಲಾಗಿದೆ. ರೈಲ್ವೆ ಅಧಿಕಾರಿಗಳು, ಭೂ ಸಾರಿಗೆ ಇಲಾಖೆಯ ನೆರವಿನಿಂದ ಸಹಾಯ ಕೇಂದ್ರ ರಚಿಸಿ ಅಗತ್ಯ ಮಾಹಿತಿ ಒದಗಿಸಬಹುದು.

ಆದರೆ ಸಮೀಕ್ಷಾ ವರದಿ ಹೇಳುವ ಪ್ರಕಾರ ಸುಪ್ರೀಂಕೋರ್ಟ್‌ ನಿರ್ದೇಶನಗಳಿಗೆ ಸಂಬಂಧಿಸಿದಂತೆ ವಾಸ್ತವದಲ್ಲಿ ಕೈಗೊಂಡ ಕ್ರಮ ನೀರಸವಾಗಿದೆ. ಕೇವಲ 14.07%ರಷ್ಟು ವಲಸೆ ಕಾರ್ಮಿಕರಿಂದ ಮಾತ್ರ ಅವರ ಕೌಶಲ್ಯದ ಸ್ವರೂಪ (ನುರಿತ ಅಥವಾ ಕೌಶಲ್ಯರಹಿತ) ಕುರಿತಂತೆ ಮಾಹಿತಿ ಪಡೆಯಲಾಗಿದೆ. 66.24%ರಷ್ಟು ಬೃಹತ್ ಪ್ರಮಾಣದ ಕಾರ್ಮಿಕರಿಂದ ಕೇವಲ ಅವರ ಹೆಸರು, ವಯಸ್ಸು, ಲಿಂಗ, ಕೆಲಸ ಮಾಡುವ ಸ್ಥಳ, ಗ್ರಾಮ ಇತ್ಯಾದಿ ಮಾಹಿತಿ ಸ್ವೀಕರಿಸಲಾಗಿದೆ. ಕಾರ್ಮಿಕರಿಗೆ ಸೂಕ್ತವಾದ ಉದ್ಯೋಗಾವಕಾಶ ಪತ್ತೆ ಹಚ್ಚುವುದಕ್ಕಾಗಿ ಮತ್ತು ಅವರ ಜೀವನೋಪಾಯಕ್ಕೆ ನೆರವು ನೀಡುವುದಕ್ಕಾಗಿ ಅವರ ಕೌಶಲ್ಯದ ಸ್ವರೂಪ ತಿಳಿಯುವುದು ಮುಖ್ಯವಾಗಿದೆ. ಇನ್ನು ಪುನರ್‌ ಉದ್ಯೋಗಕ್ಕೆ ಸಂಬಂಧಿಸಿದಂತೆ ಗ್ರಾಮಗಳಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಕೇವಲ 8.18% ರಷ್ಟು ಮಂದಿಗೆ ಮಾತ್ರ ಅರಿವು ಇತ್ತು. ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುಪಾಲು ಜನರಿಗೆ ಸರ್ಕಾರದ ಒಂದೇ ಒಂದು ಯೋಜನೆಯ ಬಗ್ಗೆ ಅರಿವು ಇರಲಿಲ್ಲ.

ದಡಮುಟ್ಟಿಸಿದ ಹಾಯಿದೋಣಿ…

ಹಾಗೆಂದು ವ್ಯವಸ್ಥೆ ಸಂಪೂರ್ಣ ಕೈಕಟ್ಟಿ ಕುಳಿತಿತ್ತು ಎಂದೇನೂ ಅಲ್ಲ. ಅದು ವಲಸೆ ಕಾರ್ಮಿಕರಿಗೆ ತಕ್ಕ ಮಟ್ಟಿಗೆ ನೆರವು ನೀಡಲು ಯತ್ನಿಸಿದೆ. ಕಾರ್ಮಿಕರ ಪ್ರಯಾಣಕ್ಕೆ ಸಂಬಂಧಿಸಿದಂತೆ ಮಹತ್ವದ ಕೆಲಸ ಸರ್ಕಾರದ ಕಡೆಯಿಂದ ನಡೆದಿದೆ ಎನ್ನುತ್ತದೆ ವರದಿ.

ಕೆಲಸ ಮಾಡುತ್ತಿದ್ದ ಸ್ಥಳಗಳಿಂದ ತಮ್ಮ ಸ್ವಂತ ರಾಜ್ಯಕ್ಕೆ ಮರಳಲು ಕಾರ್ಮಿಕರು ನೋಂದಣಿ ಮಾಡಿಕೊಳ್ಳಬೇಕಿತ್ತು. ಹೀಗೆ ನೋಂದಣಿ ಮಾಡಿಕೊಂಡವರ ಸಂಖ್ಯೆ ಶೇ 68ರಷ್ಟಿದೆ. ಪ್ರಕ್ರಿಯೆ ಪೂರ್ಣಗೊಳಿಸಲು 39% ಮಂದಿ ಸರ್ಕಾರದ ನೆರವು ಪಡೆದಿದ್ದಾರೆ. 52% ಮಂದಿ ಸ್ಮಾರ್ಟ್‌ಫೋನ್‌ಗಳ ಮೂಲಕ ನೋಂದಣಿ ಮಾಡಿಕೊಂಡಿದ್ದು 48% ಮಂದಿ ಆಫ್‌ಲೈನ್‌ ಮೂಲಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. 58% ಮಂದಿಯ ಪ್ರಯಾಣದ ಸಂಪೂರ್ಣ ಟಿಕೆಟ್‌ ವೆಚ್ಚವನ್ನು ಸರ್ಕಾರ ಭರಿಸಿದೆ. ಅಲ್ಲದೆ ರೈಲು ನಿಲ್ದಾಣಗಳಿಂದ ತಮ್ಮ ಊರುಗಳಿಗೆ ತೆರಳಲು ಕೂಡ ಸರ್ಕಾರ ಸಾರಿಗೆ ಸೌಲಭ್ಯ ಒದಗಿಸಿತ್ತು ಎಂದು 51% ಮಂದಿ ಹೇಳಿದ್ದಾರೆ.

ತಮ್ಮ ಪ್ರಯಾಣದ ವೇಳೆ ಉಚಿತವಾಗಿ ಆಹಾರ ಒದಗಿಸಲಾಗಿತ್ತು ಎಂದು 73.68% ವಲಸೆ ಕಾರ್ಮಿಕರು ಹೇಳಿಕೊಂಡಿದ್ದಾರೆ. ಆಹಾರದ ಗುಣಮಟ್ಟ ಸಾಧಾರಣಕ್ಕಿಂತ ಉತ್ತಮವಾಗಿತ್ತು ಎಂದು ಶೇ 75 ಮಂದಿ ಹೇಳಿರುವುದು ಸರ್ಕಾರ ಕಾರ್ಮಿಕರ ಪ್ರಯಾಣದ ನಿಟ್ಟಿನಲ್ಲಿ ಕೈಗೊಂಡ ಮುತುವರ್ಜಿಯನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com