ಮುಡಾದಲ್ಲಿ ಮುಖ್ಯಮಂತ್ರಿ ಪತ್ನಿ ಬಿ ಎಂ ಪಾರ್ವತಿ ಅವರು 14 ಬದಲಿ ನಿವೇಶನ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಸೇರಿ ಹಲವರ ವಿರುದ್ಧ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಖಾಸಗಿ ದೂರಿನ ಸ್ವೀಕಾರಾರ್ಹತೆ ಪರಿಗಣಿಸುವುದಕ್ಕೆ ಸಂಬಂಧಿಸಿದ ಆದೇಶವನ್ನು ಆಗಸ್ಟ್ 20ರಂದು ಪ್ರಕಟಿಸುವುದಾಗಿ ಬೆಂಗಳೂರಿನ ಜನಪ್ರತಿನಿಧಿಗಳ ಸತ್ರ ನ್ಯಾಯಾಲಯವು ಹೇಳಿದೆ.
ಸ್ನೇಹಮಯಿ ಕೃಷ್ಣ, ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಹಾಗೂ ಸಿದ್ದರಾಮಯ್ಯ ಪರವಾಗಿ ಇನ್ನೊಬ್ಬ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ನಡೆಸಿದರು.
ಅಬ್ರಹಾಂ ಸಲ್ಲಿಸಿರುವ ಖಾಸಗಿ ದೂರಿನ ವಾದವನ್ನು ನ್ಯಾಯಾಲಯ ಆಲಿಸಿತು. ರಾಜ್ಯಪಾಲರ ಪೂರ್ವಾನುಮತಿಗೆ ಸಂಬಂಧಿಸಿದಂತೆ ವಾದ ಮಂಡಿಸಲು ಆಗಸ್ಟ್ 21ಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮಂದೂಡಿತು. ಇನ್ನು ಆಲಂ ಪಾಷಾ ಅವರಿಗೆ ಮಧ್ಯಂತರ ಅರ್ಜಿ ಸಲ್ಲಿಸುವ ಹಕ್ಕು ಇಲ್ಲ ಎಂದು ನ್ಯಾಯಾಲಯ ಅದನ್ನು ವಜಾ ಮಾಡಿದೆ.
ಇದಕ್ಕೂ ಮುನ್ನ, ಮೊದಲಿಗೆ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್ ಅವರು “ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಅದಾಗ್ಯೂ, ರಾಜ್ಯಪಾಲರಲ್ಲಿ ಪೂರ್ವಾನುಮತಿ ಕೋರಲಾಗಿದೆ. ಒಂದೊಮ್ಮೆ ರಾಜ್ಯಪಾಲರು ಪೂರ್ವಾನುಮತಿ ನೀಡದಿದ್ದರೂ ಐಪಿಸಿ ಸೆಕ್ಷನ್‌ಗಳ ಅಡಿ ಅಪರಾಧ ಪರಿಗಣಿಸಬಹುದು” ಎಂದರು.
ಆಗ ಪೀಠವು “ನ್ಯಾಯಾಲಯದ ಮುಂದೆ ಮೂರು ಆಯ್ಕೆಗಳಿವೆ. ಅರ್ಜಿ ಪರಿಗಣಿಸಿ, ದೂರುದಾರರ ಹೇಳಿಕೆ ದಾಖಲಿಸಲು ರಾಜ್ಯಪಾಲರ ಪೂರ್ವಾನುಮತಿ ಅಗತ್ಯವಿದೆ. ಪೊಲೀಸರಿಂದ ತನಿಖೆಗೆ ಆದೇಶಿಸಿದರೆ ಅವರಿಗೂ ರಾಜ್ಯಪಾಲರ ಪೂರ್ವಾನುಮತಿ ಬೇಕಿದೆ. ಅರ್ಜಿಯನ್ನು ತಿರಸ್ಕರಿಸುವ ಆಯ್ಕೆಯೂ ಮುಂದಿದೆ” ಎಂದರು.
ಆಗ ಲಕ್ಷ್ಮಿ ಅವರು “ಕನಿಷ್ಠ ಪಕ್ಷ ಐಪಿಸಿ ಸೆಕ್ಷನ್ ಅಡಿ ಪ್ರಕರಣ ಪರಿಗಣಿಸಬೇಕು” ಎಂದರು. ಇದನ್ನು ಆಲಿಸಿದ ಪೀಠವು ಆಗಸ್ಟ್ 20ರಂದು ಆದೇಶ ಮಾಡುವುದಾಗಿ ಹೇಳಿತು.
ಆನಂತರ ಟಿ ಜೆ ಅಬ್ರಹಾಂ ಅವರು “ನಮ್ಮ ಖಾಸಗಿ ದೂರು ಮತ್ತು ಕೃಷ್ಣ ಅವರ ಖಾಸಗಿ ದೂರಿಗೂ ವ್ಯತ್ಯಾಸವಿದೆ. ಆಕ್ಷೇಪಾರ್ಹವಾದ ಭೂಮಿಯ ಮಾಲೀಕತ್ವ 1998-99ರಲ್ಲಿ ಮುಡಾ ಬಳಿ ಇತ್ತು. ಇದನ್ನು ದೇವನೂರು ಬಡಾವಣೆ ಅಂತಾ ಬದಲಾವಣೆ ಮಾಡಲಾಗಿತ್ತು. 2004ರಲ್ಲಿ ಅಲ್ಲಿ ಕೆಸರೆ ಗ್ರಾಮ ಅನ್ನೋದು ಇರಲಿಲ್ಲ. 2005ರ ಮಾರ್ಚ್‌ನಲ್ಲಿ ತಹಶೀಲ್ದಾರ್ ಆದೇಶ ಮಾಡುವಾಗ ಕೆಸರೆ ಗ್ರಾಮ ಇರಲಿಲ್ಲ. ಇದನ್ನು ಅಂದಿನ ಜಿಲ್ಲಾಧಿಕಾರಿ ಕುಮಾರ ನಾಯ್ಕ್ ಪರಿಶೀಲಿಸಿದ್ದಾರೆ. ಬಡಾವಣೆಯನ್ನು ಕೃಷಿ ಭೂಮಿ ಎಂದು ಅವರು ಹೇಳಿದ್ದಾರೆ. ಸಿದ್ದರಾಮಯ್ಯನವರ ಒತ್ತಡ ಇಲ್ಲದೇ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆಗೆ ಹೋಗುತ್ತಾರೆಯೇ? ಈ ವಿಚಾರವನ್ನು ಸಿದ್ದರಾಮಯ್ಯ ಅವರು 2013ರ ಚುನಾವಣಾ ಅಫಿಡವಿಟ್‌ನಲ್ಲಿ ಘೋಷಿಸಿಲ್ಲ. ಲೋಕಾಯುಕ್ತಕ್ಕೆ ದಾಖಲೆ ಸಲ್ಲಿಸುವಾಗಲೂ ವಿಚಾರವನ್ನು ಮುಚ್ಚಿಟ್ಟಿದ್ದಾರೆ. ಇದು ನಕಲಿಯಾಗಿರುವುದರಿಂದ ಅದು ಜನರಿಗೆ ತಿಳಿಯುವುದು ಸಿದ್ದರಾಮಯ್ಯ ಅವರಿಗೆ ಬೇಕಿರಲಿಲ್ಲ” ಎಂದು ವಾದಿಸಿದರು.
“ದೇವನೂರು ಬಡಾವಣೆಯನ್ನ ಕೆಸರೆ ಗ್ರಾಮ ಮಾಡಿದ್ದಾರೆ. ದೇವನೂರು ಬಡಾವಣೆಯನ್ನ ಕೃಷಿ ಭೂಮಿ ಮಾಡಿದ್ದಾರೆ. ಆದರೂ ವಿಶೇಷ ಭೂ ಸ್ವಾಧೀನ ಅಧಿಕಾರಿ ಇದನ್ನು ಪರಿಗಣಿಸುತ್ತಾರೆ. ಸುಮಾರು ರೂ. 55 ಕೋಟಿ 80 ಲಕ್ಷ ಬೆಲೆಯ ನಿವೇಶನಗಳನ್ನು ಪಾರ್ವತಿ ಅವರಿಗೆ ನೀಡಲಾಗಿದೆ. ಬದಲಿ ನಿವೇಶನ ಕೋರಿ ಪಾರ್ವತಿ ಅವರು ಸಲ್ಲಿಸಿದ್ದ ಅರ್ಜಿಯ ಸಂಬಂಧ ನಡೆದ ಸಭೆಯಲ್ಲಿ ಪುತ್ರ, ಅಂದು ಶಾಸಕರಾಗಿದ್ದ ಯತೀಂದ್ರ ಭಾಗವಹಿಸಿದ್ದರು. ಕೆಸರೆ ಗ್ರಾಮವೇ ಅಸ್ತಿತ್ವದಲ್ಲಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಹಗರಣ ಎಸಗಲಾಗಿದೆ. ಈ ಸಂಬಂಧ ಈಗಾಗಲೇ ಮೈಸೂರಿನಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆ. ರಾಜ್ಯಪಾಲರಿಂದ ಪೂರ್ವಾನುಮತಿ ಕೋರಿಯೂ ಅರ್ಜಿ ಸಲ್ಲಿಸಿದ್ದೇನೆ. ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್ 19ರ ಅಡಿ ಪೂರ್ವಾನುಮತಿಗೆ ಸಂಬಂಧಿಸಿದಂತೆ ವಾದಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಈ ಹಿನ್ನೆಲೆಯಲ್ಲಿ ಅಬ್ರಹಾಂ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಆಗಸ್ಟ್ 21ಕ್ಕೆ ಮುಂದೂಡಿತು.