ಮುಡಾ ಹಗರಣದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಪಿ ಎನ್‌ ದೇಸಾಯಿ ನೇತೃತ್ವದಲ್ಲಿ ಆಯೋಗ ರಚಿಸಿದ ಸರ್ಕಾರ

ತನಿಖಾ ಆಯೋಗವು 6 ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ವಿಚಾರಣಾ ಆಯೋಗದ ವಿಚಾರಣಾ ವ್ಯಾಪ್ತಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
Rtd Justice P N Desai
Rtd Justice P N Desai
Published on

ಮೈಸೂರಿನ ನಗಾರಭಿವೃದ್ಧಿ ಪ್ರಾಧಿಕಾರದಲ್ಲಿನ (ಮುಡಾ) ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ ಎನ್‌ ದೇಸಾಯಿ ಅವರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಸಂಸ್ಥೆ ರಚಿಸಿ ಭಾನುವಾರ ರಾತ್ರಿ ಆದೇಶಿಸಿದೆ.

ತನಿಖಾ ಆಯೋಗ ಕಾಯಿದೆಯ ನಿಯಮ 3ರ ಉಪನಿಯಮ 1ರ ಅನ್ವಯ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಿಂದ ವಿಚಾರಣೆ ನಡೆಸಲು ವಿಚಾರಣಾ ಆಯೋಗವನ್ನು ರಚಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ತನಿಖಾ ಆಯೋಗಗಳ ಕಾಯಿದೆ 1952 ಹಾಗೂ ನಾಗರಿಕಾ ಪ್ರಕ್ರಿಯಾ ಸಂಹಿತೆ ಅವಕಾಶದಡಿ ವಿಚಾರಣೆ ನಡೆಸಲು ಎಲ್ಲಾ ಅಧಿಕಾರವನ್ನು ವಿಚಾರಣಾ ಆಯೋಗವು ಹೊಂದಿರಲಿದೆ. ನ್ಯಾ. ದೇಸಾಯಿ ಅವರ ಆಯೋಗವು 6 ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ವಿಚಾರಣಾ ಆಯೋಗದ ವಿಚಾರಣಾ ವ್ಯಾಪ್ತಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Also Read
ಮುಡಾ ಅಕ್ರಮ: ಸ್ವಯಂ ಪ್ರೇರಿತ ಪಿಐಎಲ್‌ ದಾಖಲಿಸಿ ಸಿಬಿಐ ತನಿಖೆಗೆ ಒಪ್ಪಿಸಲು ಸಿಜೆ ಅಂಜಾರಿಯಾಗೆ ಶಾಸಕ ಯತ್ನಾಳ್‌ ಪತ್ರ

ವಿಚಾರಣಾ ಆಯೋಗಕ್ಕೆ ನಗರಾಭಿವೃದ್ಧಿ ಇಲಾಖೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಆಯೋಗವು ಕಾಲಾನುಕಾಲಕ್ಕೆ ವಿಚಾರಣೆಗಾಗಿ ಅಪೇಕ್ಷಿಸುವ ಎಲ್ಲಾ ಕಡತ/ದಾಖಲಾತಿ ಇತ್ಯಾದಿಗಳನ್ನು ಒದಗಿಸಬೇಕು. ವಿಚಾರಣೆ ಸಂದರ್ಭದಲ್ಲಿ ಆಯೋಗಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಹೇಳಲಾಗಿದೆ.

ಆಯೋಗ ವಿಚಾರಣೆ ಪೂರ್ಣಗೊಳಿಸಲು ಅಗತ್ಯವಾದ ತಾಂತ್ರಿಕ ಸಲಹೆಗಾರರು/ಆರ್ಥಿಕ ಸಲಹೆಗಾರರು/ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲು ನಗರಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಸಹಕರಿಸಬೇಕು ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಮುಡಾ ಹಗರಣವು ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಜಮೀನಿನಲ್ಲಿ ಮುಡಾ ಅನಿಧಿಕೃತವಾಗಿ ನಿವೇಶನಗಳನ್ನು ಮಾಡಿ ಮಾರಿದ್ದು ಇದಕ್ಕೆ ಪರ್ಯಾಯವಾಗಿ ಅವರಿಗೆ ಮೈಸೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಸೈಟುಗಳನ್ನು ನೀಡಿರುವುದು ವಿವಾದದ ಕೇಂದ್ರವಾಗಿದೆ. ಇಡೀ ಪ್ರಕರಣದಲ್ಲಿ ಮುಡಾ ನಿಯಮಗಳನ್ನು ಗಾಳಿಗೆ ತೂರಿ ಸೈಟುಗಳನ್ನು ಹಂಚಿಕೆ ಮಾಡಿದೆ ಎನ್ನುವುದು ವಿಪಕ್ಷಗಳ ಆರೋಪವಾಗಿದೆ.

ಸೋಮವಾರದಿಂದ (ಜು.15) ವಿಧಾನಸಭೆಯ ಅಧಿವೇಶನ ಆರಂಭವಾಗುತ್ತಿರುವ ಪ್ರತಿಪಕ್ಷಗಳು ಹಗರಣವನ್ನು ಸದನದಲ್ಲಿ ಪ್ರಸ್ತಾಪಿಸಲು ಸಜ್ಜಾಗಿರುವ ಬೆನ್ನಿಗೇ ಸರ್ಕಾರವು ತನಿಖಾ ಆಯೋಗವನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.

Attachment
PDF
ಏಕ ಸದಸ್ಯ ಆಯೋಗ.pdf
Preview
Kannada Bar & Bench
kannada.barandbench.com