ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಅವರ ಸಾವಿನ ಬಗ್ಗೆ ತನಿಖೆ ನಡೆಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಿಗೆ ಉತ್ತರ ಪ್ರದೇಶದ ಬಾಂದಾ ನ್ಯಾಯಾಲಯ ನಿರ್ದೇಶನ ನೀಡಿರುವುದಾಗಿ ವರದಿಯಾಗಿದೆ.
ಅನ್ಸಾರಿ ಅವರು ಬಾಂದಾದ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿನಲ್ಲಿ ನಿನ್ನೆ ರಾತ್ರಿ (ಮಾ. 28) ಹೃದಯಾಘಾತದಿಂದ ನಿಧನರಾದರು ಎಂದು ತಿಳಿದುಬಂದಿತ್ತು.
ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಅವರನ್ನು ನಿನ್ನೆ ರಾತ್ರಿ 8: 45ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಾವ್‌ನಲ್ಲಿರುವ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಗೆ ಮಾರ್ಚ್ 21ರಂದು ಪತ್ರ ಬರೆದಿದ್ದ ಅನ್ಸಾರಿ ಅವರು ಬಾಂದಾದ ಜೈಲು ಅಧಿಕಾರಿಗಳು ತನಗೆ ವಿಷಪ್ರಾಶನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ನಕಲಿ ಶಸ್ತ್ರಾಸ್ತ್ರ ಪರವಾನಗಿ ಪ್ರಕರಣದಲ್ಲಿ ವಾರಣಾಸಿಯ ವಿಶೇಷ ನ್ಯಾಯಾಲಯ ಕಳೆದ ಮಾರ್ಚ್ 13ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು.
ಅಪಹರಣ ಪ್ರಕರಣ, 1999ರಲ್ಲಿ ಉತ್ತರ ಪ್ರದೇಶ ಗೂಂಡಾ ಕಾಯಿದೆಯಡಿ ದಾಖಲಾದ ಪ್ರಕರಣ, 1991ರಲ್ಲಿ ನಡೆದ ಕಾಂಗ್ರೆಸ್ ನಾಯಕನ ಸಹೋದರ ಅವಧೇಶ್ ರಾಯ್ ಕೊಲೆ ಪ್ರಕರಣ, 2003ರಲ್ಲಿ ಜೈಲರ್‌ಗೆ ಪಿಸ್ತೂಲ್ ತೋರಿಸಿ ಬೆದರಿಸಿದ್ದ ಪ್ರಕರಣ ಸೇರಿದಂತೆ ಹಲವು ಕೇಸ್‌ಗಳಲ್ಲಿ ಅವರು ಶಿಕ್ಷೆಗೆ ಗುರಿಯಾಗಿದ್ದರು.