ಬಾಲಿವುಡ್ ನಟಿ ಕಂಗನಾ ರನೌತ್ ಅವರು ಸಾಹಿತಿ ಜಾವೆದ್ ಅಖ್ತರ್ ವಿರುದ್ಧ ದಾಖಲಿಸಿದ್ದ ಸುಲಿಗೆ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕೈಬಿಟ್ಟಿದೆ.
ಅಂಧೇರಿಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್ ಎಂ ಶೇಖ್ ಅವರು ಅಖ್ತರ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 506 (ಕ್ರಿಮಿನಲ್ ಬೆದರಿಕೆ) ಮತ್ತು 509 (ಮಹಿಳೆಯ ಘನತೆಗೆ ಧಕ್ಕೆ) ಅಡಿ ಅಪರಾಧಗಳ ಪ್ರಕ್ರಿಯೆ ಆರಂಭಿಸಿದ್ದು, ಆಗಸ್ಟ್ 5ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಿದೆ.
ತನ್ನ ಮತ್ತು ಹೃತಿಕ್ ರೋಷನ್ ವಿರುದ್ಧದ ವಿವಾದ ಬಗೆಹರಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ 2020ರಲ್ಲಿ ಅಖ್ತರ್ ಅವರು ತಮ್ಮನ್ನು ಅವರ ಸ್ಥಳಕ್ಕೆ ಆಹ್ವಾನಿಸಿದ್ದರು ಎಂದು ರನೌತ್ ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಭೇಟಿಯ ಸಂದರ್ಭದಲ್ಲಿ ರೋಷನ್‌ಗೆ ಕ್ಷಮೆ ಕೇಳಲು ನಿರಾಕರಿಸಿದ್ದರಿಂದ ಅಖ್ತರ್ ಅವರು ತನಗೆ ಅವಮಾನಿಸುವ ಮೂಲಕ ಸುಲಿಗೆ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅಖ್ತರ್ ವಿರುದ್ಧ ರನೌತ್ ಅವರು ಕ್ರಿಮಿನಲ್ ಪಿತೂರಿ, ಸುಲಿಗೆ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದ ಅಡಿ ಪ್ರಕರಣ ದಾಖಲಿಸಿದ್ದರು. ಜುಲೈ 6ರಂದು ರನೌತ್ ಹೇಳಿಕೆ ದಾಖಲಿಸಿಕೊಂಡಿದ್ದ ನ್ಯಾಯಾಲಯವು ಜುಲೈ 24ರಂದು ದೂರಿನ ಸಂಜ್ಞೇಯ ಪರಿಗಣಿಸಿತ್ತು.
ಅಖ್ತರ್ ಪರ ವಕೀಲ ಜೇ ಕೆ ಭಾರಧ್ವಾಜ್ ಅವರು ಸಮನ್ ಆದೇಶದ ವಿರುದ್ಧ ಮರುಪರಿಶೀಲನಾ ಅರ್ಜಿ ದಾಖಲಿಸಲಾಗುವುದು ಎಂದು ʼಬಾರ್ ಅಂಡ್ ಬೆಂಚ್‌ಗೆʼ ತಿಳಿಸಿದ್ದಾರೆ.