ಕಂಗನಾ ವಿರುದ್ಧ ಜಾವೇದ್ ಅಖ್ತರ್ ಹೂಡಿದ್ದ ಮಾನನಷ್ಟ ಮೊಕದ್ದಮೆಯ ಶೀಘ್ರ ವಿಚಾರಣೆಗೆ ಮುಂಬೈ ನ್ಯಾಯಾಲಯ ಸಮ್ಮತಿ

ಏಪ್ರಿಲ್ 19ರ ಬದಲಿಗೆ ಮಾರ್ಚ್ 23ಕ್ಕೇ ಪ್ರಕರಣದ ವಿಚಾರಣೆ ನಡೆಸುವುದಾಗಿ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ತಿಳಿಸಿದರು.
Javed Akhtar, Kangana Ranaut
Javed Akhtar, Kangana Ranaut

ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ತಾನು ಹೂಡಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಶೀಘ್ರವಾಗಿ ಆಲಿಸಬೇಕು ಎಂದು ಹಿರಿಯ ಚಲನಚಿತ್ರ ಗೀತರಚನೆಕಾರ ಜಾವೇದ್‌ ಅಖ್ತರ್‌ ಸಲ್ಲಿಸಿದ್ದ ಮನವಿಗೆ ಮುಂಬೈನ ಅಂಧೇರಿಯಲ್ಲಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮ್ಮತಿ ಸೂಚಿಸಿದ್ದಾರೆ.

ಮ್ಯಾಜಿಸ್ಟ್ರೇಟ್ ಆರ್‌ಎಂ ಶೇಖ್ ಅವರು ಏಪ್ರಿಲ್ 19ರ ಬದಲಿಗೆ ಮಾರ್ಚ್ 23ಕ್ಕೇ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಿದರು.

Also Read
ಜಾವೇದ್ ಅಖ್ತರ್ ವಿರುದ್ಧದ ಪ್ರಕರಣ: ವಿಚಾರಣೆ ವರ್ಗಾಯಿಸಲು ಕೋರಿದ್ದ ಕಂಗನಾ ಮನವಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್

ಕಡೆಯ ಬಾರಿಗೆ ಅವರು ನವೆಂಬರ್ 23, 2022ರಂದು ದೂರು ಆಲಿಸಿದ್ದ ನ್ಯಾ. ಶೇಖ್‌ ಅವರು ಏಪ್ರಿಲ್ 19ಕ್ಕೆ ಪ್ರಕರಣ ಮುಂದೂಡಿದ್ದರು. ಆದರೆ ಅಖ್ತರ್‌ ಅವರು ಪ್ರಕರಣವನ್ನು ತುರ್ತಾಗಿ ಆಲಿಸಬೇಕೆಂದು ಮನವಿ ಸಲ್ಲಿಸಿದ್ದರು.

ಅಖ್ತರ್‌ ಅವರ ವಯಸ್ಸನ್ನು ಪರಿಗಣಿಸಿ ಶೀಘ್ರವೇ ವಿಚಾರಣೆ ನಡೆಸುವುದು ನ್ಯಾಯದ ಹಿತಾಸಕ್ತಿಯಾಗುತ್ತದೆ ಎಂದು ಅಖ್ತರ್ ಪರ ವಕೀಲ ಜಯ್ ಭಾರದ್ವಾಜ್ ಶನಿವಾರ ನ್ಯಾಯಾಲಯಕ್ಕೆ ತಿಳಿಸಿದರು.

Also Read
ಕಂಗನಾ ವಿರುದ್ಧದ ಎಲ್ಲಾ ಆರೋಪಗಳು ಪರಿಗಣನೆಗೆ ಯೋಗ್ಯ ಎಂದ ಮುಂಬೈ ನ್ಯಾಯಾಲಯ: ಎಫ್‌ಐಆರ್‌ ದಾಖಲಿಸಿಕೊಳ್ಳಲು ಆದೇಶ

ಆದರೆ ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಿಕಿ ಅವರು ಅರ್ಜಿಗೆ  ವಿರೋಧ ವ್ಯಕ್ತಪಡಿಸಿದರು. ಕಂಗನಾ ಸಹೋದರಿ ರಂಗೋಲಿ ಚಾಂಡೆಲ್‌ ಅವರು ನೀಡುವ ಸಾಕ್ಷಿ ಹೇಳಿಕೆಯನ್ನು ದಾಖಲಿಸಿಕೊಳ್ಳಲು ನ್ಯಾಯಾಲಯಕ್ಕೆ ಮನವಿ ಮಾಡಿ ಕಂಗನಾ ಸಲ್ಲಿಸಿದ ಅರ್ಜಿಯನ್ನು ಅವರು ಉಲ್ಲೇಖಿಸಿದರು. ಆದರೆ ನ್ಯಾಯಾಲಯ, ಅಖ್ತರ್‌ ಅವರ ಅರ್ಜಿಗೆ ಸಮ್ಮತಿ ನೀಡಿ ಮಾರ್ಚ್ 23, 2023ರಂದೇ ವಿಚಾರಣೆ ನಡೆಸಲು ಅನುಮತಿಸಿತು. ಈ ಅರ್ಜಿಯ ವಿಚಾರಣೆ ವೇಳೆಯೇ ರಂಗೋಲಿ ಅವರ ಹೇಳಿಕೆಯನ್ನು ಸಾಕ್ಷಿಯಾಗಿ ದಾಖಲಿಸಬೇಕೆ ಅಥವಾ ಬೇಡವೇ ಎಂಬುದನ್ನು ನ್ಯಾಯಾಧೀಶರು ನಿರ್ಧರಿಸಲಿದ್ದಾರೆ.

ರಿಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಸಂದರ್ಶನವೊಂದರಲ್ಲಿ ಕಂಗನಾ ಮಾಡಿದ ಕೆಲವು ಟೀಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿ ಅಖ್ತರ್ ಅವರು ಆಕೆಯ ವಿರುದ್ಧ ದೂರು ದಾಖಲಿಸಿದ್ದರು. 2016ರಲ್ಲಿ ತಮ್ಮ ಮತ್ತು ಅಖ್ತರ್ ನಡುವಿನ ಭೇಟಿಗೆ ಸಂಬಂಧಿಸಿದಂತೆ ರನೌತ್ ಅವರು ಆ ಹೇಳಿಕೆ ನೀಡಿದ್ದರು. ಈ ಮಧ್ಯೆ ಕ್ರಿಮಿನಲ್ ಪಿತೂರಿ, ಸುಲಿಗೆ ಮತ್ತು ತನ್ನ ಘನತೆಗೆ ಧಕ್ಕೆ ತಂದ ಆರೋಪದಡಿ ಕಂಗನಾ ಕೂಡ ಅಖ್ತರ್‌ ಅವರ ವಿರುದ್ಧ ಪ್ರತಿದೂರು ದಾಖಲಿಸಿದ್ದರು.

Kannada Bar & Bench
kannada.barandbench.com