ಕುನಾಲ್‌ ಕಮ್ರಾ ಹಾಸ್ಯ ಕಾರ್ಯಕ್ರಮ ವಿವಾದ: ದಾಂಧಲೆ ಎಸಗಿದ 12 ಮಂದಿಗೆ ಮುಂಬೈ ನ್ಯಾಯಾಲಯ ಜಾಮೀನು

ಕಮ್ರಾ ತಮ್ಮ ಕಾರ್ಯಕ್ರಮದ ಸಮಯದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು "ದೇಶದ್ರೋಹಿ" ಎಂದು ಕರೆದಿದ್ದರು. ಆನಂತರ ಅವರು ಕಾರ್ಯಕ್ರಮ ನೀಡಿದ ಹೋಟೆಲ್‌ಗೆ ನುಗ್ಗಿ ಶಿವಸೇನಾ ಕಾರ್ಯಕರ್ತರು ದಾಂಧಲೆ ನಡೆಸಿದ್ದರು.
Kunal Kamra YouTube
Kunal Kamra YouTube
Published on

ಹಾಸ್ಯ ಕಲಾವಿದ ಕುನಾಲ್‌ ಕಮ್ರಾ ಅವರು ಕಾರ್ಯಕ್ರಮ ನೀಡಿದ್ದ ಹೋಟೆಲ್‌ಗೆ ನುಗ್ಗಿ ದಾಂಧಲೆಗೈದು, ವಸ್ತುಗಳನ್ನು ಧ್ವಂಸಗೊಳಿಸಿದ್ದ ಕಾರಣಕ್ಕೆ ಬಂಧಿತರಾಗಿದ್ದ ರಾಹುಲ್‌ ಕನಾಲ್‌ ಸೇರಿ 12 ಶಿವಸೇನಾ ಕಾರ್ಯಕರ್ತರಿಗೆ ಬಾಂದ್ರಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.

 ₹15,000 ವೈಯಕ್ತಿಕ ಬಾಂಡ್‌ ಆಧರಿಸಿ ಅವರನ್ನು ಬಿಡುಗಡೆ ಮಾಡಲಾಗಿದೆ. ಕಮ್ರಾ ತಮ್ಮ ಕಾರ್ಯಕ್ರಮದ ಸಮಯದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು "ದೇಶದ್ರೋಹಿ" ಎಂದು ಕರೆದಿದ್ದರು. ನಂತರ ಅವರು ಕಾರ್ಯಕ್ರಮ ನೀಡಿದ ಹೋಟೆಲ್‌ನಲ್ಲಿ ದಾಂಧಲೆ ನಡೆಸಲಾಗಿತ್ತು.

Also Read
ಐಟಿ ನಿಯಮಾವಳಿಗೆ ತಿದ್ದುಪಡಿ: ಹಾಸ್ಯ ಕಲಾವಿದ ಕಮ್ರಾ ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ

ಖಾರ್‌ನ ಹ್ಯಾಬಿಟ್ಯಾಟ್ ಕಾಮಿಡಿ ಕ್ಲಬ್‌ನಲ್ಲಿ ಶನಿವಾರ ನಡೆದ ತಮ್ಮ ಪ್ರದರ್ಶನದ ವಿಡಿಯೋವನ್ನು ಕಮ್ರಾ ಹಂಚಿಕೊಂಡ ನಂತರ ವಿವಾದ ಭುಗಿಲೆದ್ದಿತು. ವಿಡಿಯೋದಲ್ಲಿ ಕಮ್ರಾ ಅವರು ಶಿಂಧೆ ಅವರನ್ನು ಅಣಕಿಸಿದ್ದ ದೃಶ್ಯಗಳಿದ್ದವು. 2022ರಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ರಾಜಕೀಯ ಬಂಡಾಯ ಎದ್ದಿದ್ದನ್ನು ಪ್ರಸ್ತಾಪಿಸಿ ಶಿಂಧೆ ದೇಶದ್ರೋಹಿ ಎಂದು ಕಮ್ರಾ ಬಣ್ಣಿಸಿದ್ದರು. ಶಿಂಧೆ ಬಂಡಾಯದ ನಂತರ ಶಿವಸೇನೆ ಹೋಳಾಗಿತ್ತು. ಶಿಂಧೆ ಅವರ ಆಲೋಚನೆ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗಿನ ಮೈತ್ರಿಯನ್ನು ಅಣಕಿಸಿ  ಬಾಲಿವುಡ್ ಚಲನಚಿತ್ರ ದಿಲ್ ತೋ ಪಾಗಲ್ ಹೈ ಯ ಹಾಡನ್ನು ವಿಡಂಬನಾತ್ಮಕವಾಗಿ ಕಮ್ರಾ ಪ್ರಸ್ತುತಪಡಿಸಿದ್ದರು.

ವೀಡಿಯೊದಲ್ಲಿ ಕಮ್ರಾ ಸ್ಪಷ್ಟವಾಗಿ ಶಿಂಧೆ ಅವರ ಹೆಸರನ್ನು ಹೇಳದಿದ್ದರೂ, ಹೇಳಿಕೆಗಳು ಅವರನ್ನು ನೇರವಾಗಿ ಗುರಿಯಾಗಿಸಿಕೊಂಡಿವೆ ಎನ್ನಲಾಗಿದೆ. ಮರುದಿನ, ರಾಹುಲ್‌ ಕನಾಲ್ ನೇತೃತ್ವದಲ್ಲಿ ಶಿವಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸ್ಥಳದಲ್ಲಿ ದಾಂಧಲೆ ನಡೆಸಿದರು. ಕಮ್ರಾ ಹೇಳಿಕೆ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

Also Read
ಉದ್ಧವ್‌ಗೆ ಬಹುಮತ ಇಲ್ಲ ಎಂದು ನಿರ್ಧರಿಸುವಲ್ಲಿ ರಾಜ್ಯಪಾಲರು ಎಡವಿದ್ದಾರೆ ಎಂದ ಸುಪ್ರೀಂ; ಶಿಂಧೆ ಸರ್ಕಾರ ಅಬಾಧಿತ

ಹೋಟೆಲ್‌ನಲ್ಲಿನ ದಾಂಧಲೆಗೆ ಸಂಬಂಧಿಸಿದಂತೆ ಸೋಮವಾರ, ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ 12 ಮಂದಿ ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ನ್ಯಾಯಾಲಯ ಇದೀಗ ಅವರಿಗೆ ಜಾಮೀನು ನೀಡಿದೆ

ಘಟನೆಗೆ ಸಂಬಂಧಿಸಿದಂತೆ ಪೊಲೀಸರು 19 ಜನರನ್ನು ಗುರುತಿಸಿದ್ದಾರೆ, ಆದರೆ ಹಲವರ ಹೆಸರು ತಿಳಿದುಬಂದಿಲ್ಲ. ಇನ್ನೂ ಹಲವು ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

Kannada Bar & Bench
kannada.barandbench.com