ಆರೋಪಿ ಸಾವನ್ನಪಿದ್ದು ತಿಳಿಯದೆ, ಆತ ಮೃತಪಟ್ಟ ಎರಡು ದಿನಗಳ ಬಳಿಕ ಜಾಮೀನು ನೀಡಿದ ಮುಂಬೈ ನ್ಯಾಯಾಲಯ!

ಸೆಷನ್ಸ್ ನ್ಯಾಯಾಧೀಶರು ಮೇ 11ರಂದು ಆರೋಪಿಗೆ ವೈದ್ಯಕೀಯ ಜಾಮೀನು ಮಂಜೂರು ಮಾಡಿದರು. ಆದರೆ ಆರೋಪಿ ಮೇ 9ರಂದೇ ಇಹಲೋಕ ತ್ಯಜಿಸಿದ್ದರು.
Mumbai sessions court
Mumbai sessions court
Published on

ಸರ್ಕಾರಿ ಆಸ್ಪತ್ರೆಯಲ್ಲಿ ಮೇ 9 ರಂದು ಮೃತಪಟ್ಟಿದ್ದ ಆರೋಪಿಯೊಬ್ಬರಿಗೆ ಮುಂಬೈನ ನ್ಯಾಯಾಲಯವೊಂದು ಮೇ 11ರಂದು ತಾತ್ಕಾಲಿಕ ಜಾಮೀನು ನೀಡಿದ ಘಟನೆ ನಡೆದಿದೆ [ಸುರೇಶ್‌ ಪವಾರ್‌ ಮತ್ತುಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಆರೋಪಿ ಸಾವನ್ನಪ್ಪಿರುವ ವಿಚಾರ ನ್ಯಾಯಾಲಯಕ್ಕೆ ತಿಳಿದಿರಲಿಲ್ಲ. ವೈದ್ಯಕೀಯ ಕಾರಣಕ್ಕೆ ತಾತ್ಕಾಲಿಕ ಜಾಮೀನು ನೀಡುತ್ತಿರುವ 9 ಪುಟಗಳ ಆದೇಶದಲ್ಲಿಯೂ ಆರೋಪಿ ಮೃತಪಟ್ಟಿರುವ ಅಂಶವನ್ನು ಉಲ್ಲೇಖಿಸಿರಲಿಲ್ಲ.

ಆರೋಪಿ ಮೃತಪಟ್ಟಿರುವ ಬಗ್ಗೆ ನ್ಯಾಯಾಲಯಕ್ಕಾಗಲಿ ಅಥವಾ ತಮಗಾಗಲಿ ಮಾಹಿತಿ ನೀಡಿರಲಿಲ್ಲ ಎಂದು ಆರೋಪಿ ಮತ್ತು ದೂರುದಾರರ ಪರ ವಕೀಲರು ʼಬಾರ್‌ ಅಂಡ್‌ ಬೆಂಚ್‌ʼಗೆ ತಿಳಿಸಿದರು.

ಆರೋಪಿಯ ವಿರುದ್ಧ 2021ರಲ್ಲಿ ಮುಂಬೈ ಪೊಲೀಸರು ವಂಚನೆ ಮತ್ತು ಫೋರ್ಜರಿ ಪ್ರಕರಣ ದಾಖಲಿಸಿದ್ದರು. ಡಿಸೆಂಬರ್ 31, 2021ರಲ್ಲಿ ಬಂಧಿತರಾಗಿದ್ದ ಅವರು ಅಂದಿನಿಂದಲೂ ಸೆರೆವಾಸ ಅನುಭವಿಸುತ್ತಿದ್ದರು. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಕೆಯಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.

Also Read
ವಿಚಾರಣೆ ವಿಳಂಬ: ಒಡಿಶಾದಲ್ಲಿ ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಕೆ

ತಾನು ತೀವ್ರ ಮಧುಮೇಹ ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವುದಾಗಿ ಆರೋಪಿ ದಿವಂಗತ ಸುರೇಶ್ ಪವಾರ್ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದರು. ಸೆರೆವಾಸದಲ್ಲಿದ್ದಾಗ ಕಾಲಿನ ಬೆರಳಿಗೆ ಗಾಯವಾಗಿ ಅದು ಗ್ಯಾಂಗ್ರಿನ್‌ಗೆ ತಿರುಗಿ ಕಾಲಿನ ಬೆರಳುಗಳನ್ನು ಕತ್ತರಿಸಲಾಗಿತ್ತು. ಅಸಮರ್ಪಕ ಚಿಕಿತ್ಸೆಯಿಂದಾಗಿ ಅವರ ಗಾಯ ಉಲ್ಬಣಿಸಿ ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಬಳಿಕ ಮೊಣಕಾಲಿನ ಕೆಳಗಿನ ಭಾಗವನ್ನು ಕತ್ತರಿಸಿ ತೆಗೆಯಲಾಗಿತ್ತು. ಅಲ್ಲದೆ ಅವರ ಶ್ವಾಸಕೋಶ ಕೂಡ ಸೋಂಕಿಗೆ ತುತ್ತಾಗಿತ್ತು.

ತನ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಕೋರಿ ಅರ್ಜಿದಾರರು ಮೇ 4ರಂದು ವೈದ್ಯಕೀಯ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಎರಡೂ ಕಡೆಯ ವಾದಗಳನ್ನು ಮೇ 8ರಂದು ಆಲಿಸಿದ್ದ ನ್ಯಾಯಾಲಯ ಮರುದಿನ ಅಂದರೆ ಮೇ 9 ರಂದು ತೀರ್ಪು ನೀಡುವುದಾಗಿ ತಿಳಿಸಿತ್ತು.

ಆದರೆ ಮೇ 9 ರಂದು ದೂರುದಾರರು ಮಧ್ಯಪ್ರವೇಶ ಅರ್ಜಿ ಸಲ್ಲಿಸಿದ್ದರಿಂದ ತೀರ್ಪು ಪ್ರಕಟಿಸುವುದನ್ನು ಇನ್ನೊಂದು ದಿನಕ್ಕೆ ಮುಂದೂಡಲಾಯಿತು. ಮೇ 10ರಂದು ಬೇರೆ ಪ್ರಕರಣಗಳ ವಿಚಾರಣೆಯಲ್ಲಿ ಮಗ್ನವಾದ ನ್ಯಾಯಾಲಯ ತೀರ್ಪು ಪ್ರಕಟಿಸುವುದನ್ನು ಮೇ 11ಕ್ಕೆ ಮುಂದೂಡಿತು. ಆದರೆ ಅಷ್ಟರಲ್ಲಾಗಲೇ ಅಂದರೆ ಮೇ 9ರಂದೇ ಆರೋಪಿ ಕೊನೆಯುಸಿರೆಳೆದಿದ್ದರು.  

Kannada Bar & Bench
kannada.barandbench.com