
ಕೌಟುಂಬಿಕ ಹಿಂಸಾಚಾರಕ್ಕೆ ತುತ್ತಾಗಿದ್ದ ಪತ್ನಿಗೆ ₹5 ಲಕ್ಷದ ಬದಲು ₹1 ಕೋಟಿ ಪರಿಹಾರ ನೀಡುವಂತೆ ಕೋಟ್ಯಾಧಿಪತಿ ಕುಟುಂಬಕ್ಕೆ ಸೇರಿದ ಪತಿಗೆ ಮುಂಬೈ ನ್ಯಾಯಾಲಯ ಈಚೆಗೆ ಆದೇಶಿಸಿದೆ.
ಫೆಬ್ರವರಿ 18, 2020 ರಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನೀಡಿದ ತೀರ್ಪಿನ ವಿರುದ್ಧ ಪತಿ ಮತ್ತು ಪತ್ನಿ ಇಬ್ಬರೂ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ದಿನ್‌ದೋಶಿ ಸೆಷನ್ಸ್ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಸ್ ಜೆ ಅನ್ಸಾರಿ ಅವರು ಮೇ 5 ರಂದು ಆದೇಶ ಹೊರಡಿಸಿದ್ದಾರೆ.
ಪತಿ ಮತ್ತು ಅವರ ಕುಟುಂಬ ಸಾಮಾನ್ಯ ಭಾಷೆಯಲ್ಲಿ ಕೋಟ್ಯಾಧಿಪತಿಗಳು ಎಂಬುದನ್ನು ಪ್ರಕರಣ ಹೇಳುತ್ತಿದೆ. ಪತಿ ಅತ್ಯಂತ ಶ್ರೀಮಂತರಾಗಿರುವುದರಿಂದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ದೂರುದಾರರಿಗೆ ರೂ.5 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿರುವುದು ತುಂಬಾ ಕಡಿಮೆಯಾಯಿತು ಎಂದು ನ್ಯಾಯಾಲಯ ವಿವರಿಸಿದೆ.
ಮಹಿಳೆ 20 ವರ್ಷಗಳ ಕಾಲ ಚಿತ್ರಹಿಂಸೆ, ಅವಮಾನ, ಆರ್ಥಿಕ ದೌರ್ಜನ್ಯ, ಮೂದಲಿಕೆಗೆ ತುತ್ತಾಗಿದ್ದು ಆಕೆಗೆ ಪರಿಹಾರ ಹೆಚ್ಚಿಸುವುದು ಅಗತ್ಯವಾಗಿತ್ತು ಎಂದು ನ್ಯಾಯಾಲಯ ಆದೇಶಿಸಿದೆ.
ಪತಿ ಹಲವು ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ವಾದಿಸಿದ್ದರು. ಪತಿಯನ್ನು ಬಂಧಿಸಲಾಗಿತ್ತಾದರೂ ಅವರು ಆರೋಪ ನಿರಾಕರಿಸಿದ್ದರು. ಪತ್ನಿಯೇ ಸ್ವತಃ ಗಾಯ ಮಾಡಿಕೊಂಡು ತನ್ನನ್ನು ದೂರುತ್ತಿದ್ದಾಳೆ ಎಂದಿದ್ದರು. ಜೊತೆಗೆ ಮಕ್ಕಳ ಶಿಕ್ಷಣ ಮತ್ತು ಬಾಡಿಗೆ ಭರಿಸುತ್ತಿರುವುದಾಗಿಯೂ, ವ್ಯಾಪಾರದಲ್ಲಿ ನಷ್ಟ ಉಂಟಾಗಿರುವುದ ತಾನು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವುದಾಗಿಯೂ ಹೇಳಿದ್ದ ಅವರು ತಾನೇ ಕೌಟುಂಬಿಕ ದೌರ್ಜನ್ಯದ ನಿಜವಾದ ಸಂತ್ರಸ್ತ ಎಂದಿದ್ದರು.
ಆದರೆ ಈ ವಾದವನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ. ಪತಿ ಮತ್ತು ಅವರ ತಂದೆ 2012 ರಲ್ಲಿ ಮಾಡಿದ ₹1 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಖರೀದಿಯು ಅವರ ವ್ಯಾಪಾರದ ಪರಿಣಾಮವಾಗಿ ಕ್ರೋಢೀಕರಿಸಿದ ಸಂಪತ್ತು ಎಂದು ಹೇಳಿತು.
ಪತಿಯಂತೆಯೇ ಪತ್ನಿಯೂ ಜೀವನಮಟ್ಟದ ಹಕ್ಕನ್ನು ಹೊಂದಿದ್ದು ದೈಹಿಕ ಹಾನಿ ಮತ್ತು ಭಾವನಾತ್ಮಕ ಆಘಾತ ಎರಡಕ್ಕೂ ಪರಿಹಾರ ಒದಗಿಸಬೇಕು ಎಂದು ಬಾಂಬೆ ಹೈಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ಅವಲಂಬಿಸಿದ ನ್ಯಾಯಾಲಯ ಹೆಚ್ಚಿನ ಪರಿಹಾರ ಒದಗಿಸುವಂತೆ ಸೂಚಿಸಿ ₹1 ಕೋಟಿ ಪರಿಹಾರ ನೀಡಲು ಆದೇಶಿಸಿತು.
[ತೀರ್ಪಿನ ಪ್ರತಿ]