ಓ’ ರೋಮಿಯೋ ಬಿಡುಗಡೆಗೆ ತಡೆ ನೀಡಲು ಮುಂಬೈ ನ್ಯಾಯಾಲಯ ನಕಾರ

ಚಿತ್ರ ಹುಸೇನ್ ಉಸ್ತಾರಾ ಅವರ ಜೀವನಚರಿತ್ರೆ (ಬೈಯೋಪಿಕ್) ಅಲ್ಲ ಬದಲಿಗೆ ಕಾಲ್ಪನಿಕ ಕತೆ ಆಧಾರಿತ ಎಂದು ನಿರ್ದೇಶಕ ವಿಶಾಲ್‌ ಭಾರದ್ವಾಜ್‌ ಅವರ ಅಫಿಡವಿಟ್‌ ತಿಳಿಸಿದೆ.
O Romeo film
O Romeo film
Published on

'ಮಕ್ಬೂಲ್‌', 'ಓಂಕಾರ'ದಂತಹ ಜನಪ್ರಿಯ ಚಿತ್ರಗಳ ನಿರ್ದೇಶಕ ವಿಶಾಲ್‌ ಭಾರದ್ವಾಜ್‌ ನಿರ್ದೇಶಿಸಿರುವ ಹಾಗೂ ಶಾಹಿದ್‌ ಕಪೂರ್‌ ಅಭಿನಯದ ಹೊಸ ಸಿನಿಮಾ ಓʼ ರೋಮಿಯೊ ಬಿಡುಗಡೆಗೆ ತಡೆ ನೀಡಲು ಮುಂಬೈ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ [ಸನೋಬರ್ ಶೇಖ್ ಮತ್ತು ಸಾಜಿದ್ ನಾಡಿಯಲ್‌ವಾಡಿಯಾ ಇನ್ನಿತರರ ನಡುವಣ ಪ್ರಕರಣ].

ಫೆಬ್ರವರಿ 13ರಂದು ಚಿತ್ರ ಬಿಡುಗಡೆಯಾಗಲಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ  ಎಚ್.ಸಿ. ಶೆಂಡೆ ಅವರು ತಮ್ಮ ಅವಲೋಕನಗಳು ಪ್ರಾಥಮಿಕವಾಗಿದ್ದು, ಮೊಕದ್ದಮೆಯ ಅಂತಿಮ ತೀರ್ಪಿನ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರತಿವಾದಿಗಳು ಲಿಖಿತ ಹೇಳಿಕೆಯನ್ನು ಸಲ್ಲಿಸುವುದಕ್ಕಾಗಿ ಪ್ರಕರಣವನ್ನು ಮಾರ್ಚ್‌ 12ಕ್ಕೆ ಮುಂದೂಡಲಾಗಿದೆ.

Also Read
ವಿಜಯ್ ಚಿತ್ರ ಜನ ನಾಯಗನ್ ಬಿಡುಗಡೆಗೆ ತಕ್ಷಣ ಅನುಮತಿ ನೀಡುವಂತೆ ಸಿಬಿಎಫ್‌ಸಿಗೆ ಮದ್ರಾಸ್ ಹೈಕೋರ್ಟ್ ಆದೇಶ

ಮಧ್ಯಂತರ ಅರ್ಜಿ ವಜಾಗೊಂಡಿರುವುದರಿಂದ, ನ್ಯಾಯಾಲಯದಲ್ಲಿ ಮೊಕದ್ದಮೆ ಮುಂದುವರಿದಿದ್ದರೂ ಚಿತ್ರವನ್ನು ಬಿಡುಗಡೆ ಮಾಡಬಹುದಾಗಿದೆ.

ತಮ್ಮ ತಂದೆಯ ಬದುಕನ್ನು ಆಧರಿಸಿದ ಬಯೋಪಿಕ್ ಇದಾಗಿದ್ದು, ಅವರ ವ್ಯಕ್ತಿತ್ವ, ಖಾಸಗಿತನ ಹಾಗೂ ಕೀರ್ತಿಗೆ ಧಕ್ಕೆ ಒದಗಿದೆ ಎಂದು ದಿವಂಗತ ಪತ್ರಕರ್ತ ಮತ್ತು ಎನ್‌ಕೌಂಟರ್ ಮಾಹಿತಿದಾರ ಹುಸೇನ್ ಶೇಖ್ ಅಲಿಯಾಸ್ ಹುಸೇನ್ ಉಸ್ತಾರಾ ಅವರ ಪುತ್ರಿ ಸನೋಬರ್ ಶೇಖ್ ದೂರಿದ್ದರು.

Also Read
'ಯುಪಿ 77' ವೆಬ್ ಸರಣಿ ಪಾತಕಿ ದುಬೆ ಜೀವನ ಆಧರಿಸಿಲ್ಲ ಎಂದ ನಿರ್ಮಾಪಕರು: ಚಿತ್ರಕ್ಕೆ ತಡೆ ನೀಡದ ದೆಹಲಿ ಹೈಕೋರ್ಟ್

ಆದರೆ ಚಿತ್ರ ಹುಸೇನ್ ಉಸ್ತಾರಾ ಅವರ ಜೀವನಚರಿತ್ರೆ (ಬೈಯೋಪಿಕ್) ಅಲ್ಲ ಬದಲಿಗೆ ಕಾಲ್ಪನಿಕ ಕತೆ ಆಧಾರಿತ ಎಂದು ನಿರ್ದೇಶಕ ವಿಶಾಲ್‌ ಭಾರದ್ವಾಜ್‌ ಅವರ ಅಫಿಡವಿಟ್‌ ತಿಳಿಸಿತು. ಜೊತೆಗೆ ಚಿತ್ರದ ಹಕ್ಕುತ್ಯಾಗ ಘೋಷಣೆಯಲ್ಲಿ ಅದನ್ನು ಸ್ಪಷ್ಟವಾಗಿ ವಿವರಿಸಲಾಗಿದೆ ಎಂದು ಅವರು ಹೇಳಿದರು.

ಇದೊಂದು ಸುಳ್ಳು ಮೊಕದ್ದಮೆಯಾಗಿದ್ದು ಕೊನೆಯ ಕ್ಷಣದಲ್ಲಿ ಹಣಕಾಸು ಒಪ್ಪಂದಕ್ಕೆ ಮಣಿಯುವಂತೆ ಮಾಡುವ ಯತ್ನ ಎಂದು ಅವರು ಆಕ್ಷೇಪಿಸಿದ್ದರು. ಅಲ್ಲದೆ, ಸುಸ್ಥಾಪಿತ ಕಾನೂನು ತತ್ವಗಳ ಪ್ರಕಾರ ವ್ಯಕ್ತಿಯ ಮರಣದ ನಂತರ ವ್ಯಕ್ತಿತ್ವ, ಗೌಪ್ಯತೆ ಮತ್ತು ಮಾನಹಾನಿ ಸಂಬಂಧಿತ ಹಕ್ಕುಗಳು ಮುಂದುವರಿಯುವುದಿಲ್ಲ ಎಂದು ಕೂಡ ಅವರು ತಿಳಿಸಿದರು.

[ಆದೇಶದ ಪ್ರತಿ]

Attachment
PDF
Sanober_Shaikh_v__Sajid_Nadiadwala___Ors_
Preview
Kannada Bar & Bench
kannada.barandbench.com