ವಿಲಾಸಿ ಹಡಗಿನ ಡ್ರಗ್ಸ್ ಪ್ರಕರಣ: ಮಧ್ಯಾಹ್ನ 12.30ಕ್ಕೆ ಆರ್ಯನ್‌ ಜಾಮೀನು ಮನವಿ ಆಲಿಸಲಿರುವ ಮುಂಬೈ ನ್ಯಾಯಾಲಯ

ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆರ್‌ ಎಂ ನೇರ್ಲಿಕರ್‌ ಅವರು ಪ್ರಕರಣದ ವಿಚಾರಣೆಯನ್ನು ನಡೆಸಲಿದ್ದಾರೆ.
ವಿಲಾಸಿ ಹಡಗಿನ ಡ್ರಗ್ಸ್ ಪ್ರಕರಣ: ಮಧ್ಯಾಹ್ನ 12.30ಕ್ಕೆ ಆರ್ಯನ್‌ ಜಾಮೀನು ಮನವಿ ಆಲಿಸಲಿರುವ ಮುಂಬೈ ನ್ಯಾಯಾಲಯ
Aryan Khan, NCB

ವಿಲಾಸಿ ಹಡಗಿನಲ್ಲಿ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಜಾಮೀನು ಮನವಿಯ ವಿಚಾರಣೆಯನ್ನು ಇಂದು ಮಧ್ಯಾಹ್ನ 12.30ಕ್ಕೆ ಮುಂಬೈ ನ್ಯಾಯಾಲಯ ನಡೆಸಲಿದೆ.

ಆರ್ಯನ್‌ ಮತ್ತು ಸದರಿ ಪ್ರಕರಣದಲ್ಲಿ ಬಂಧಿತರಾಗಿರುವ ಉಳಿದ ಏಳು ಮಂದಿಯನ್ನು ಪೊಲೀಸ್‌ ಕಸ್ಟಡಿಗೆ ನೀಡುವಂತೆ ಕೋರಿದ್ದ ಮಾದಕ ವಸ್ತು ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ಮನವಿಯನ್ನು ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆರ್‌ ಎಂ ನೇರ್ಲಿಕರ್‌ ತಿರಸ್ಕರಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ನೇರ್ಲಿಕರ್‌ ಅವರು ಇಂದು ಮುಂದುವರಿಸಲಿದ್ದಾರೆ.

ಆರ್ಯನ್‌ ಜಾಮೀನು ಮನವಿಯ ಕುರಿತು ಅವರ ಪರ ವಕೀಲರ ವಾದ ಅಪೂರ್ಣವಾಗಿದ್ದರಿಂದ ನ್ಯಾಯಾಲಯವು ಆರೋಪಿಗಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇಂದು ವಿಚಾರಣೆ ಮುಂದುವರಿಯಲಿದೆ.

ಅಕ್ಟೋಬರ್‌ 4ರಂದು ಆರ್ಯನ್‌ ಖಾನ್‌ ಮತ್ತು ಇತರೆ ಆರೋಪಿಗಳನ್ನು ನ್ಯಾಯಾಲಯವು ಅಕ್ಟೋಬರ್‌ 7ರವರೆಗೆ ಎನ್‌ಸಿಬಿ ರಿಮ್ಯಾಂಡ್‌ಗೆ ನೀಡಿತ್ತು. ಬುಧವಾರ ಮತ್ತೆ ನಾಲ್ವರನ್ನು ಹೆಚ್ಚುವರಿಯಾಗಿ ಬಂಧಿಸಲಾಗಿದ್ದು, ಅವರನ್ನು ಅಕ್ಟೋಬರ್‌ 11ರವರೆಗೆ ಎನ್‌ಸಿಬಿ ವಶಕ್ಕೆ ನೀಡಲಾಗಿದೆ. ಹೀಗಾಗಿ, ಪ್ರಕರಣದಲ್ಲಿ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಅಚಿತ್‌ ಕುಮಾರ್‌ ಮತ್ತು ಅಂತಾರಾಷ್ಟ್ರೀಯ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ವಿದೇಶಿ ಪ್ರಜೆಯೊಬ್ಬರು ಪ್ರಕರಣದಲ್ಲಿ ಬಂಧಿಸಲಾಗಿದೆ.

Also Read
ಆರ್ಯನ್‌ ಖಾನ್‌ ಅ. 7ರವರೆಗೆ ಎನ್‌ಸಿಬಿ ವಶಕ್ಕೆ: ಡ್ರಗ್ಸ್‌ ಪ್ರಕರಣದಲ್ಲಿ ಮುಂಬೈ ನ್ಯಾಯಾಲಯ ಆದೇಶ

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಸಾಕಷ್ಟು ಮಂದಿಯನ್ನು ಬಂಧಿಸಬೇಕಿದ್ದು, ಅವರನ್ನು ಆರ್ಯನ್‌ ಹಾಗೂ ಇತರೆ ಬಂಧಿತರ ಜೊತೆ ಮುಖಾಮುಖಿಯಾಗಿಸಬೇಕಿದೆ ಎಂದು ಹೇಳಿದ್ದ ಎನ್‌ಸಿಬಿ ಮನವಿಯನ್ನು ಗುರುವಾರ ನ್ಯಾಯಾಲಯವು ತಿರಸ್ಕರಿಸಿತ್ತು. ಆರ್ಯನ್‌ ಮತ್ತು ಇತರರನ್ನು ವಿಚಾರಣೆಗೆ ಒಳಪಡಿಸುವ ಸಂಬಂಧ ಎನ್‌ಸಿಬಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಹೀಗಾಗಿ, ಇನ್ನೂ ಹೆಚ್ಚಿನ ಕಸ್ಟಡಿಯ ವಿಚಾರಣೆ ಅಗತ್ಯವಿಲ್ಲ ಎಂದು ಪೀಠ ಹೇಳಿದೆ.

ಸಮರ್ಪಕ ಕಾರಣಗಳಿಲ್ಲದೇ ಆರೋಪಿಗಳನ್ನು ಎನ್‌ಸಿಬಿ ವಶಕ್ಕೆ ನೀಡುವುದರಿಂದ ಬಂಧಿತರ ಸ್ವಾತಂತ್ರ್ಯ ಉಲ್ಲಂಘಿಸಿದಂತಾಗುತ್ತದೆ ಎಂದಿರುವ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

Related Stories

No stories found.