ರಿಪಬ್ಲಿಕ್‌ ಸಿಇಒ ಖಾನ್‌ಚಂದಾನಿ ಬಂಧನ: 'ಅಂತಹ ತುರ್ತೇನಿತ್ತು?' ಮುಂಬೈ ಪೊಲೀಸರಿಗೆ ಸೆಷನ್ಸ್‌ ನ್ಯಾಯಾಲಯದ ಪ್ರಶ್ನೆ

ಖಾನ್‌ಚಂದಾನಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಮಾರನೇ ದಿನಕ್ಕೆ ನಿಗದಿಯಾಗಿರುವಾಗ ಹಿಂದಿನ ದಿನ ಅವರನ್ನು ಬಂಧಿಸಿರುವುದಕ್ಕೆ ಹೆಚ್ಚುವರಿ ಸೆಷನ್ಸ್‌ ನ್ಯಾಯಧೀಶ ಡಿ ಇ ಕೋಥಲಿಕರ್‌ ಅವರಿದ್ದ ಪೀಠವು ಬೇಸರ ವ್ಯಕ್ತಪಡಿಸಿದೆ.
Mumbai Police, TRP scam, Vikas Khanchandani
Mumbai Police, TRP scam, Vikas Khanchandani

ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್‌ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್‌ ಟಿವಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ವಿಕಾಸ್‌ ಖಾನ್‌ಚಂದಾನಿ ಅವರನ್ನು ಆತುರದಲ್ಲಿ ಬಂಧಿಸಿರುವುದಕ್ಕೆ ಮುಂಬೈನ ಸೆಷನ್ಸ್‌ ನ್ಯಾಯಾಲಯ ಸೋಮವಾರ ಆಕ್ಷೇಪಿಸಿದೆ.

ಖಾನ್‌ಚಂದಾನಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಮಾರನೇ ದಿನಕ್ಕೆ ನಿಗದಿಯಾಗಿರುವಾಗ ಹಿಂದಿನ ದಿನ ಅವರನ್ನು ಬಂಧಿಸಿರುವುದಕ್ಕೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಡಿ ಇ ಕೋಥಲಿಕರ್‌ ಅವರಿದ್ದ ಪೀಠವು ಬೇಸರ ವ್ಯಕ್ತಪಡಿಸಿದೆ.

“ಮನವಿಯು ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿರುವಾಗ ಅವರನ್ನು ಅಷ್ಟು ಆತುರದಲ್ಲಿ ಬಂಧಿಸುವ ತುರ್ತೇನಿತ್ತು?” ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಡಿ ಇ ಕೋಥಲಿಕರ್‌ ಅವರು ವಿಶೇಷ ಸರ್ಕಾರಿ ಅಭಿಯೋಜಕ ಸಿಶೆರ್‌ ಹಿರೇ ಅವರನ್ನು ಪ್ರಶ್ನಿಸಿದರು.

ಟಿಆರ್‌ಪಿ ಹಗರಣಕ್ಕೆ ತಮ್ಮನ್ನೂ ಬಂಧಿಸುವ ಆತಂಕದಿಂದ ನಿರೀಕ್ಷಣಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದ ರಿಪಬ್ಲಿಕ್‌ ಟಿವಿಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಎಸ್‌ ಸುಂದರಂ ಅವರ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸುಂದರಂ ಅವರ ಮನವಿಯನ್ನು ವಿಚಾರಣೆಗೆ ಎತ್ತಿಕೊಳ್ಳುವವರೆಗೆ ಅವರಿಗೆ ರಕ್ಷಣೆ ಒದಗಿಸುವಂತೆ ವಕೀಲ ನಿರಂಜನ್‌ ಮುಂಡರಗಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ಖಾನ್‌ಚಂದಾನಿ ಅವರ ಮನವಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿದ್ದರೂ ಅವರನ್ನು ಹೇಗೆ ಬಂಧಿಸಲಾಯಿತು ಎಂಬುದನ್ನು ಮುಂಡರಗಿ ಅವರು ಪೀಠದ ಗಮನಕ್ಕೆ ತಂದರು.

ಖಾನ್‌ಚಂದಾನಿ ಅವರನ್ನು ಬಂಧಿಸಿ ಭಾನುವಾರ ಎಸಪ್ಲನೇಡ್‌ನಲ್ಲಿರುವ ರಜಾಕಾಲೀನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಡಿಸೆಂಬರ್‌ 15 ರವರೆಗೆ ಅವರನ್ನು ಪೊಲೀಸ್‌ ವಶಕ್ಕೆ ನೀಡಿತ್ತು. ಸೆಷನ್ಸ್‌ ನ್ಯಾಯಾಲಯವು ಸುಂದರಂ ಅವರಿಗೆ ಭದ್ರತೆ ಒದಗಿಸದಿದ್ದರೆ ಖಾನ್‌ಚಂದಾನಿ ಅವರಿಗೆ ಒದಗಿದ ಸ್ಥಿತಿಯೇ ಬಂದೊದಗಲಿದೆ ಎಂದರು. ಈ ವಾದವನ್ನು ಆಲಿಸಿದ ನ್ಯಾಯಾಲಯವು ಮುಂಬೈ ಪೊಲೀಸರ ನಡತೆಗೆ ಬೇಸರ ವ್ಯಕ್ತಪಡಿಸಿತು.

“ಮನವಿಯು ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿರುವಾಗ ಅವರನ್ನು ಅಷ್ಟು ಆತುರದಲ್ಲಿ ಬಂಧಿಸುವ ತುರ್ತೇನಿತ್ತು?”
ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಡಿ ಇ ಕೋಥಲಿಕರ್‌

ಸುಂದರಂ ಅವರ ವಿರುದ್ಧ ನಾಳೆಯವರೆಗೆ ಯಾವುದೇ ತೆರನಾದ ಕ್ರಮಕೈಗೊಳ್ಳುವುದಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಹಿರೇ ಅವರಿಗೆ ನ್ಯಾಯಾಲಯ ಸೂಚಿಸಿತು. ಇಲ್ಲವಾದಲ್ಲಿ ಈ ಸಂಬಂಧ ಆದೇಶ ಹೊರಡಿಸುವುದಾಗಿ ಹೇಳಿತು. “ಒಂದು ದಿನದ ಮಟ್ಟಿಗೆ ನೀವು ಕಾಯಬಹುದು, ನಾಳೆ ಮನವಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಕ್ರಮವಾಗದಿದ್ದರೆ ನೀವು ಕ್ರಮಕೈಗೊಳ್ಳಬಹುದು. ಇದು ಒಂದು ದಿನಕ್ಕೆ ಸಂಬಂಧಿಸಿದ್ದು” ಎಂದು ನ್ಯಾಯಾಧೀಶ ಕೋಥಲಿಕರ್‌ ಹೇಳಿದರು.

ಸುಂದರಂ ವಿರುದ್ಧ ನಾಳೆಯವರೆಗೆ ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎಂದು ಹಿರೇ ಹೇಳಿಕೆ ದಾಖಲಿಸಿದರು. ಟಿಆರ್‌ಪಿ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಮಹಾ ಮೂವಿಯ ಸಿಇಒ ಸಂಜಯ್‌ ಸುಖದೇವ್‌ ವರ್ಮಾ ಅವರಿಗೆ ಇದೇ ಸೆಷನ್ಸ್‌ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು.

ಪೊಲೀಸರಿಗೆ ಸಲ್ಲಿಸಲಾಗಿರುವ ದಾಖಲೆಗಳು ಮತ್ತು ಬ್ಯಾಂಕ್‌ ದಾಖಲೆಗಳನ್ನು ಆಧರಿಸಿ ಟಿಆರ್‌ಪಿ ಹಗರಣದ ತನಿಖೆ ನಡೆಸಲಾಗುತ್ತಿದೆ. ಈ ಎಲ್ಲಾ ದಾಖಲೆಗಳನ್ನು ಈಗಾಗಲೇ ಪೊಲೀಸರಿಗೆ ಸಲ್ಲಿಸಿರುವುದರಿಂದ ವರ್ಮಾ ಅವರ ಬಂಧನ ಅಗತ್ಯವಿಲ್ಲ ಎಂದು ಅವರ ಪರ ವಕೀಲ ಸುದೀಪ್‌ ಪಸ್ಬೋಲಾ ವಾದಿಸಿದ್ದರು.

ರಿಪಬ್ಲಿಕ್‌ ಟಿವಿ ಉದ್ಯೋಗಿಗೆ ಲಾಕಪ್‌ನಲ್ಲಿ ಕಿರುಕುಳ ಆರೋಪ: ಮಹಾರಾಷ್ಟ್ರ ಪೊಲೀಸರಿಗೆ ಎನ್‌ಎಚ್‌ಆರ್‌ಸಿ ನೋಟಿಸ್‌

ಟಿಆರ್‌ಪಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ರಿಪಬ್ಲಿಕ್‌ ಮೀಡಿಯಾ ನೆಟ್‌ವರ್ಕ್‌ನ ಹಂಚಿಕೆ ವಿಭಾಗದ ಸಹಾಯಕ ಉಪಾಧ್ಯಕ್ಷ ಘನಶ್ಯಾಮ್‌ ಸಿಂಗ್‌ ಅವರನ್ನು ವಿನಾ ಕಾರಣ ಪ್ರಕರಣದಲ್ಲಿ ಸಿಲುಕಿಸಲಾಗಿದ್ದು, ಅವರಿಗೆ ಲಾಕಪ್‌ಲ್ಲಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್‌ ಜಾರಿ ಮಾಡಿದೆ.

ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರ ದೂರು ಆಧರಿಸಿ ಎನ್‌ಎಚ್‌ಆರ್‌ಸಿಯು ನೋಟಿಸ್‌ ಜಾರಿ ಮಾಡಿದೆ. “.. ಪ್ರಮುಖ ಸುದ್ದಿ ಸಂಸ್ಥೆಯ ಪದಾಧಿಕಾರಿಗೆ (ರಿಪಬ್ಲಿಕ್‌ ಟಿವಿ ನೆಟ್‌ವರ್ಕ್‌) ದೈಹಿಕವಾಗಿ ಕಿರುಕುಳ ನೀಡಲಾಗಿದ್ದು, ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸುವುದರ ಜೊತೆಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದನ್ನು ಒಪ್ಪಲಾಗದು” ಎಂದು ದೂರಿದ್ದಾರೆ.

Also Read
[ಟಿಆರ್‌ಪಿ ಹಗರಣ] ಡಿ.15 ರವರೆಗೆ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಾನ್‌ಚಂದಾನಿ ಮುಂಬೈ ಪೊಲೀಸ್ ವಶಕ್ಕೆ

ಮಹಾರಾಷ್ಟ್ರದ ಬಂಧಿಖಾನೆಯ ಪೊಲೀಸ್‌ ಮಹಾನಿರ್ದೇಶಕರಿಗೂ ಎನ್‌ಎಚ್‌ಆರ್‌ಸಿ ನೋಟಿಸ್‌ ಜಾರಿ ಮಾಡಿದ್ದು, ಜೈಲಿಗೆ ಹಾಕುವುದಕ್ಕೂ ಮುನ್ನ ಸಿಂಗ್‌ ಅವರಿಗೆ ನಡೆಸಲಾಗಿದ್ದ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಚಿಕಿತ್ಸೆಯ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಎನ್‌ಎಚ್‌ಆರ್‌ಸಿ ಸೂಚಿಸಿದೆ.

ಜೈಲಿನಲ್ಲಿ ಸಿಂಗ್‌ ಅವರ ಹಕ್ಕುಗಳ ಉಲ್ಲಂಘನೆಯಾಗಿರುವುದರಿಂದ ತಕ್ಷಣ ಅವರ ನೆರವಿಗೆ ಧಾವಿಸುವಂತೆ ಅರ್ನಾಬ್‌ ಎನ್‌ಎಚ್‌ಆರ್‌ಸಿಯನ್ನು ಕೋರಿದ್ದಾರೆ. ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಸಿಂಗ್‌ ಅಥವಾ ರಿಪಬ್ಲಿಕ್‌ ಟಿವಿಯ ಬಗ್ಗೆ ಉಲ್ಲೇಖಿಸದೇ ಇದ್ದರೂ ನವೆಂಬರ್‌ 10ರಂದು ಅವರನ್ನು ಬಂಧಿಸಲಾಗಿತ್ತು. ಡಿಸೆಂಬರ್‌ 5ರಂದು ಸಿಂಗ್‌ಗೆ ಮುಂಬೈನ ಸೆಷನ್ಸ್‌ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

Related Stories

No stories found.
Kannada Bar & Bench
kannada.barandbench.com