

ʼನ್ಯಾ. ಚಂದ್ರಚೂಡ್ʼ ಹೆಸರಿನಲ್ಲಿ ನಕಲಿ ವರ್ಚುವಲ್ ವಿಚಾರಣೆ ನಡೆಸಿ ತಮಗೆ ₹3.71 ಕೋಟಿ ಡಿಜಿಟಲ್ ಅರೆಸ್ಟ್ ವಂಚನೆ ಎಸಗಲಾಗಿದೆ ಎಂದು ಮುಂಬೈನ ಅಂಧೇರಿ ವೆಸ್ಟ್‌ನ 68 ವರ್ಷದ ಮಹಿಳೆಯೊಬ್ಬರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ತನಿಖೆಯ ಸೋಗಿನಲ್ಲಿ ಮೊಂಬೈ ಪೊಲೀಸ್, ಸಿಬಿಐ ಹಾಗೂ ನ್ಯಾಯಾಧೀಶರು ಎಂದು ಹೇಳಿಕೊಂಡು ತಮ್ಮ ಜೀವಿತಾವಧಿಯ ಉಳಿತಾಯದ ಮೊತ್ತವನ್ನು ಕಬಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಶ್ಚಿಮ ಪ್ರದೇಶ ಸೈಬರ್ ಪೊಲೀಸ್ ಠಾಣೆ ವಿವಿಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ತನಿಖೆ ನಡೆಸುತ್ತಿದೆ.
ಎಫ್‌ಐಆರ್ ಪ್ರಕಾರ, ದೂರುದಾರರಾದ ಧನಲಕ್ಷ್ಮಿ ಸತ್ಯನಾರಾಯಣ ರಾವ್ ನಾಯ್ಡು ಅವರಿಗೆ ಆಗಸ್ಟ್ 18, 2025 ರಂದು ʼವಿಜಯ್ ಪಾಲ್ʼ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಕೊಲಾಬಾ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.
ನಂತರ ಎರಡು ಸಂಖ್ಯೆಯಿಂದ ವಾಟ್ಸಾಪ್ ವಿಡಿಯೋ ಕರೆಗಳು ಬಂದಿದ್ದು, ಅಲ್ಲಿ ಒಬ್ಬ ವ್ಯಕ್ತಿ ತನ್ನನ್ನು ಕೊಲಾಬಾ ಪೊಲೀಸ್ ಠಾಣೆಯ “ಎಸ್‌ಕೆ” ಎಂದು ಪರಿಚಯಿಸಿಕೊಂಡು, ಆಕೆಯ ಆಧಾರ್ ಬಳಸಿ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗಿದ್ದು, ಅದರ ಮೂಲಕ ₹6 ಕೋಟಿ ಅಕ್ರಮ ವಹಿವಾಟು ನಡೆದಿರುವುದರಿಂದ ಆಕೆಯ ವಿರುದ್ಧ ಹಣಕಾಸು ಅಕ್ರಮ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದ.
ಆ ಕರೆ ಮಾಡಿದವನು “ನರೇಶ್ ಗೋಯಲ್” ಎಂಬ ವ್ಯಕ್ತಿಯನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂಬುದಾಗಿ ಹೇಳುವ ದಾಖಲೆಯೊಂದನ್ನು ಕಳುಹಿಸಿ, ಸಹಕರಿಸದಿದ್ದರೆ ಆಕೆಯನ್ನೂ ಆಕೆಯ ಕುಟುಂಬವನ್ನೂ ಯಾವುದೇ ಸಮಯದಲ್ಲಿ ಬಂಧಿಸಬಹುದು ಎಂದು ಆತ ಎಚ್ಚರಿಸಿದ್ದ.
ಈ ವಿಷಯವನ್ನು ಯಾರಿಗೂ ತಿಳಿಸಬಾರದು. 24 ಗಂಟೆಗಳ ಕಾಲ ತಮ್ಮನ್ನು ನಿಗಾದಲ್ಲಿ ಇರಿಸಲಾಗಿದೆ. ಸಿಬಿಐ ತನಿಖೆ ನಡೆಸಿದೆ. ಶೀಘ್ರದಲ್ಲಿಯೇ ವಿಚಾರಣೆ ನಡೆಯಲಿದೆ ಎಂದು ಬೆದರಿಸಲಾಯಿತು,.
ನ್ಯಾಯಾಧೀಶರ ಸೋಗಿನಲ್ಲಿದ್ದ ವ್ಯಕ್ತಿ ವಿಡಿಯೋ ಕರೆ ಮಾಡಿದ್ದ. ತನ್ನನ್ನು ನ್ಯಾಯಾಧೀಶ ಚಂದ್ರಚೂಡ್ ಎಂದು ಪರಿಚಯಿಸಿಕೊಂಡು ಆಕೆಯ ಜಾಮೀನು ಕುರಿತು ತೀರ್ಮಾನಿಸುವುದಾಗಿ ಹೇಳಿದ್ದ.
ಇದಕ್ಕೂ ಮೊದಲು, ʼಎಸ್‌ಕೆ ಜೈಸ್ವಾಲ್ʼ ಎಂದು ತನ್ನನ್ನು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, ಆಕೆಯ ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡಲು ತನ್ನ ಜೀವನದ ಕುರಿತು ಎರಡು–ಮೂರು ಪುಟಗಳ ವಿವರ ಬರೆಯುವಂತೆ ಸೂಚಿಸಿದ್ದ. ನಿರಪರಾಧಿಯಾಗಿದ್ದರೆ ಶೀಘ್ರವೇ ಜಾಮೀನು ದೊರೆಯುತ್ತದೆ ಎಂದು ಆತ ಭರವಸೆ ನೀಡಿದ್ದ.
ನಕಲಿ ವರ್ಚುವಲ್ ವಿಚಾರಣೆಯ ವೇಳೆ, ʼನ್ಯಾಯಮೂರ್ತಿ ಚಂದ್ರಚೂಡ್ʼ ಸೋಗಿನ ವ್ಯಕ್ತಿ ಆಕೆಯನ್ನೇ ಆರೋಪಿತ ಹಣಕಾಸು ಅಕ್ರಮ ಪ್ರಕರಣದ ಕುರಿತು ಪ್ರಶ್ನಿಸಿದ್ದ. ಆಕೆ ತಪ್ಪು ಮಾಡಿಲ್ಲ ಎಂದು ಹೇಳಿದಾಗ, ಜಾಮೀನು ತಿರಸ್ಕರಿಸಲಾಗಿದೆ ಎಂದು ಹೇಳಿ ವಿಡಿಯೋ ಕರೆ ಸ್ಥಗಿತಗೊಳಿಸಿದ್ದ. ಹೀಗಾಗಿ ಆಕೆಗೆ ಕೂಡಲೇ ಬಂಧನಕ್ಕೀಡಾಗುವ ಭಯ ಹೆಚ್ಚಿತ್ತು.
ತನ್ನ ನಿರಪರಾಧಿತ್ವ ಸಾಬೀತಾಗಬೇಕಾದರೆ ತನ್ನ ಎಲ್ಲಾ ಆಸ್ತಿಯನ್ನು ಪರಿಶೀಲನೆಗಾಗಿ ಸಲ್ಲಿಸಬೇಕು ಹಾಗೂ ಮ್ಯೂಚುವಲ್ ಫಂಡ್ ಹೂಡಿಕೆಗಳು ಮತ್ತು ಬ್ಯಾಂಕ್ ಶಿಲ್ಕಿನ ಶೇ 90–95ರವರೆಗೆ “ಸುರಕ್ಷಿತ” ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ವರ್ಗಾಯಿಸಬೇಕು ಎಂದು ಹೇಳಿದ್ದರು.
ಪೊಲೀಸರ ಮತ್ತು ನ್ಯಾಯಾಲಯದ ಆದೇಶವೆಂದು ನಂಬಿದ ಮಹಿಳೆ ಆಗಸ್ಟ್‌ನಿಂದ ಅಕ್ಟೋಬರ್ ಮೊದಲ ವಾರದವರೆಗೆ ವಿವಿಧ ಖಾತೆಗಳಿಗೆ ಒಟ್ಟು ₹3.71 ಕೋಟಿ ವರ್ಗಾಯಿಸಿದ್ದರು. ನಂತರ ಮತ್ತಷ್ಟು ಹಣ ಕೇಳಿ ಬಂಧನದ ಬೆದರಿಕೆ ಮುಂದುವರಿದಾಗ ಮೋಸವಾಗಿರುವುದು ತಿಳಿದು, ಆಕೆ ಸೈಬರ್ ಪೊಲೀಸರನ್ನು ಸಂಪರ್ಕಿಸಿದ್ದರು. ಸೈಬರ್ ಪೊಲೀಸರು ಮೋಸ, ಸೋಗು ಮತ್ತು ನಕಲಿ ದಾಖಲೆ ಬಳಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.