

ಸೈಬರ್ ಅಪರಾಧ ತಡೆಯಲಾಗದಂತಹ ತೀವ್ರವಾಗಿ ಏರಿಕೆಯಾಗುತ್ತಿರುವ ಸಮಸ್ಯೆ ಎಂದು ಆತಂಕ ವ್ಯಕ್ತಪಡಿಸಿರುವ ರಾಜಸ್ಥಾನ ಹೈಕೋರ್ಟ್ ಈಚೆಗೆ ಡಿಜಿಟಲ್ ಅಪರಾಧ ನಿಗ್ರಹಕ್ಕಾಗಿ ಹಲವು ನಿರ್ದೇಶನಗಳನ್ನು ನೀಡಿದೆ [ಅದ್ನಾನ್ ಹೈದರ್ ಭಾಯ್ ಮತ್ತು ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ].
ಪ್ರಾದೇಶಿಕ ಸೈಬರ್ ಕಮಾಂಡ್ ಸೆಂಟರ್ ಸ್ಥಾಪನೆ ಸೇರಿದಂತೆ ರಾಜ್ಯದ ಡಿಜಿಟಲ್ ಅಪರಾಧ ಪೊಲೀಸ್ ವ್ಯವಸ್ಥೆಯನ್ನು ಗಣನೀಯವಾಗಿ ಪುನರ್ ರಚಿಸಲು ನ್ಯಾಯಾಲಯ ಆದೇಶಿಸಿದೆ.
ಅಪರಾಧ ತನಿಖೆ ಮತ್ತು ನ್ಯಾಯ ವಿತರಣಾ ವ್ಯವಸ್ಥೆಗಳು ಡಿಜಿಟಲ್ ಜಗತ್ತು ಚಲಿಸುತ್ತಿರುವ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕಲು ಹೆಣಗುತ್ತಿವೆ ಎಂದ ನ್ಯಾಯಮೂರ್ತಿ ರವಿ ಚಿರಾನಿಯಾ ಈ ನಿರ್ದೇಶನಗಳನ್ನು ನೀಡಿದ್ದಾರೆ.
ಅಂತೆಯೇ ನ್ಯಾಯಾಲಯ ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗಳಿಂದ ₹2 ಕೋಟಿಗೂ ಹೆಚ್ಚು ಹಣ ಸುಲಿಗೆ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿಗಳು ಸಲ್ಲಿಸಿದ್ದ ಎರಡು ಜಾಮೀನು ಅರ್ಜಿಗಳನ್ನು ವಜಾಗೊಳಿಸಿತು.
ಹೈಕೋರ್ಟ್ ನಿರ್ದೇಶನದ ಪ್ರಮುಖಾಂಶಗಳು
ಓಲಾ, ಉಬರ್, ಸ್ವಿಗ್ಗಿ, ಜೆಪ್ಟೋ ರೀತಿಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲಾ ಅರೆಕಾಲಿಕ ಉದ್ಯೋಗಿಗಳು ರಾಜ್ಯದ ಸೈಬರ್ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು.
ಅವರು ಕ್ಯೂಆರ್ ಕೋಡ್ ಇರುವ ಐಡಿ ಕಾರ್ಡ್ ಮತ್ತು ಸಮವಸ್ತ್ರ ಧರಿಸುವುದು ಕಡ್ಡಾಯ.
ಅರೆಕಾಲಿಕ ಉದ್ಯೋಗಿಗಳ ಬಗ್ಗೆ ಪೊಲೀಸ್ ಪರಿಶೀಲನೆ, ಅವರ ಹಿನ್ನೆಲೆ ಪರಿಶೀಲಸದೆ ನೇಮಕ ಮಾಡಿಕೊಳ್ಳುವಂತಿಲ್ಲ.
ಒಬ್ಬ ವ್ಯಕ್ತಿಗೆ ಮೂರಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವದು ನಿಷಿದ್ಧ. ನಾಲ್ಕನೇ ಸಿಮ್ ಬೇಕಾದರೆ ವಿಶೇಷ ಪ್ರಮಾಣೀಕರಣ ಅಗತ್ಯ.
ಸಾಮಾಜಿಕ ಮಾಧ್ಯಮ ಖಾತೆಗಳ ಹಿಂದಿರುವವರ ಗುರುತು ನಿಶ್ಚಯಿಸಲು ಆಧಾರ್ ಅಥವಾ ಮಾನ್ಯತೆ ಇರುವ ಗುರುತಿನ ಚೀಟಿ ಪರಿಶೀಲನೆ ಕಡ್ಡಾಯ.
ನೋಂದಣಿ ಮತ್ತು ಪರಿಶೀಲನಾ ವ್ಯವಸ್ಥೆಯ ಮೂಲಕ ಡಿಜಿಟಲ್ ಪ್ರಭಾವಿಗಳು, ಯೂಟ್ಯೂಬರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳನ್ನು (ಮಾಹಿತಿ ಸೃಜನಕಾರರು) ನಿಯಂತ್ರಿಸಬೇಕು.
ಮಹಿಳಾ ಪ್ರಯಾಣಿಕರ ಸುರಕ್ಷತಾ ಮಾನದಂಡಗಳನ್ನು ಸುಧಾರಿಸಲು ಓಲಾ ಮತ್ತು ಉಬರ್‌ನಂತಹ ಟ್ಯಾಕ್ಸಿ ಸೇವಾ ಕಂಪನಿಗಳು ಕನಿಷ್ಠ ಶೇ 15 ರಷ್ಟು ಮಹಿಳಾ ಚಾಲಕರನ್ನು ಹೊಂದಿರಬೇಕು.
ಹೊಸ ಸೈಬರ್ ಕಮಾಂಡ್ ಕೇಂದ್ರ ಸ್ಥಾಪನೆ, ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಸ್ವಯಂಚಾಲಿತ ಎಫ್‌ಐಆರ್ ದಾಖಲು ವ್ಯವಸ್ಥೆ, ಪೊಲೀಸ್ ಇಲಾಖೆಗೆ ಮಾಹಿತಿ ತಂತ್ರಜ್ಞಾನದಲ್ಲಿ ಪರಿಣತರಾದವರ ನೇಮಕ, ಡಿಜಿಟಲ್ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಮಾಡಬೇಕು.
ಸೈಬರ್ ಅಪರಾಧ ನಿಯಂತ್ರಣಕ್ಕಾಗಿ ಬ್ಯಾಂಕುಗಳು, ಟೆಲಿಕಾಂ ಆಪರೇಟರ್‌ಗಳು, ಅಂತರ್ಜಾಲ ಸೇವಾ ಪೂರೈಕೆದಾರರು ಹಾಗೂ ತನಿಖಾ ಸಂಸ್ಥೆಗಳು ತ್ರೈಮಾಸಿಕ ಸಮನ್ವಯ ಸಭೆ ನಡೆಸಬೇಕು.
ಎಟಿಎಂ ಕಾರ್ಡ್ ದುರುಪಯೋಗ ತಡೆಯಲು ಎಐ ಆಧಾರಿತ ಸಾಧನಗಳನ್ನು ಬಳಸಬೇಕು.
ಬ್ಯಾಂಕ್ ಇಲ್ಲವೇ ಹಣಕಾಸು ಸಂಸ್ಥೆಗಳು ನಕಲಿ ಖಾತೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು.
ಕಡಿಮೆ ಡಿಜಿಟಲ್ ಸಾಕ್ಷರತೆ ಅಥವಾ ಸೀಮಿತ ಖಾತೆ ಚಟುವಟಿಕೆ ಹೊಂದಿರುವ ಬಳಕೆದಾರರ ಖಾತೆಗಳಿಗೆ ಸಂಬಂಧಿಸಿದಂತೆ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು.
ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಾಲ್ ಸೆಂಟರ್‌ಗಳು ಮತ್ತು ಬಿಪಿಒಗಳು ಡಿಜಿ ಸೈಬರ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
ಇ-ಕಾಮರ್ಸ್, ಲಾಜಿಸ್ಟಿಕ್ಸ್ ಮತ್ತು ಕೊರಿಯರ್ ಕಂಪನಿಗಳು ಬಳಸುವ ವಿತರಣಾ ವಾಹನಗಳನ್ನು ಸೂಕ್ತ ರೀತಿಯಲ್ಲಿ ನೋಂದಾಯಿಸಿರಬೇಕು.