[ಮುಂದ್ರಾ ಬಂದರು ಮಾದಕ ದ್ರವ್ಯ ಪ್ರಕರಣ] ಆರೋಪಿಗೂ ಭಯೋತ್ಪಾದನೆಗೂ ಸಂಬಂಧವಿಲ್ಲ: ಸುಪ್ರೀಂ ಕೋರ್ಟ್

ಪಹಲ್ಗಾಮ್ ಭಯೋತ್ಪಾದಕ ದಾಳಿಯೊಂದಿಗೆ ಆರೋಪಿಗೆ ನಂಟು ಇದೆ ಎಂದು ತಪ್ಪಾಗಿ ಆರೋಪಿಸಿದ ಬಳಿಕ ಆತನ ಮಕ್ಕಳನ್ನು ಅವಹೇಳನ ಮಾಡಲಾಗುತ್ತಿದೆ ಎಂದು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
Supreme Court of India
Supreme Court of India
Published on

ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಸೆಪ್ಟೆಂಬರ್ 2021ರಲ್ಲಿ ಗುಜರಾತ್‌ನ ಅದಾನಿ ಪೋರ್ಟ್ಸ್‌ ನಿರ್ವಹಿಸುವ  ಮುಂದ್ರಾ ಬಂದರಿನಲ್ಲಿ ವಶಪಡಿಸಿಕೊಂಡ 2,988 ಕೆಜಿ ಹೆರಾಯಿನ್ ಸಾಗಣೆ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ [ಹರ್‌ಪ್ರೀತ್ ಸಿಂಗ್ ತಲ್ವಾರ್ ಅಲಿಯಾಸ್‌ ಕಬೀರ್ ತಲ್ವಾರ್ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ].

ಆದರೆ ಆರೋಪಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಇರುವಂತೆ ತೋರುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಮತ್ತು ಎನ್‌ ಕೋಟೀಶ್ವರ್‌ ಸಿಂಗ್‌ ಅವರಿದ್ದ ಪೀಠ ತಿಳಿಸಿತು.

Also Read
ಅದಾನಿ ಪೋರ್ಟ್ಸ್‌ಗೆ ಮಂಜೂರಾದ 108 ಹೆಕ್ಟೇರ್ ಭೂಮಿ ಗ್ರಾಮಸ್ಥರಿಗೆ ವಾಪಸ್‌: ಗುಜರಾತ್ ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಪಹಲ್ಗಾಮ್ ಭಯೋತ್ಪಾದಕ ದಾಳಿಯೊಂದಿಗೆ ಆರೋಪಿಗೆ ನಂಟು ಇದೆ ಎಂದು ತಪ್ಪಾಗಿ ಆರೋಪಿಸಿದ ಬಳಿಕ ಆತನ ಮಕ್ಕಳನ್ನು ಅವಹೇಳನ ಮಾಡಲಾಗುತ್ತಿದೆ ಎಂದು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.

ಇಂದಿನ ವಿಚಾರಣೆಯ ಅಂತ್ಯದಲ್ಲಿ ನ್ಯಾಯಾಲವು, ಈ ಹಂತದಲ್ಲಿ ಆರೋಪವನ್ನು ಭಯೋತ್ಪಾದನೆಗೆ ಹಣಕಾಸು ಒದಗಿಸುವ ವಲಯಕ್ಕೆ ವಿಸ್ತರಿಸುವುದು ಅಕಾಲಿಕವೂ ಮತ್ತು ಊಹಾಪೋಹದ್ದು ಆಗುತ್ತದೆ ಎಂದು ಸ್ಪಷ್ಟಪಡಿಸುವುದು ಅಗತ್ಯ. ಪ್ರಾಸಿಕ್ಯೂಷನ್‌ ಯುಎಪಿಎ ಕಾಯಿದೆಯಡಿ ಆರೋಪ ಮಾಡಿದ್ದು ಮಾದಕ ವಸ್ತು ಕಳ್ಳಸಾಗಣೆ ಉದ್ಯಮಕ್ಕೆ ಅಂತರರಾಷ್ಟ್ರೀಯ ಮಾಫಿಯಾದೊಂದಿಗೆ ವಿಶಾಲವಾದ ಅರ್ಥದಲ್ಲಿ ನಂಟಿರುವುದಾಗಿ ಹೇಳಿತ್ತು. ದೇಶದ ಒಳಗೆ ಇಲ್ಲವೇ ಹೊರಗೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ  ಮೇಲ್ಮನವಿದಾರನಿಗೆ ನಂಟಿತ್ತು ಎಂದು ಹೇಳಲು ನಿರ್ದಿಷ್ಟವಾಗಿ ಯಾವುದೇ ಬಲವಾದ ಕಾರಣ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಆರೋಪಿ ಹರ್‌ಪ್ರೀತ್ ಸಿಂಗ್ ತಲ್ವಾರ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸದ್ಯಕ್ಕೆ ತಿರಸ್ಕರಿಸಿದ್ದು, ಆರು ತಿಂಗಳ ನಂತರ ಆತ ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಮುಕ್ತ ಎಂದು ಹೇಳಿತು. ಪ್ರಕರಣದ ತ್ವರಿತ ವಿಚಾರಣೆಗೆ ನ್ಯಾಯಾಲಯ ಈ ವೇಳೆ ಸೂಚಿಸಿತು.

Also Read
ಎನ್‌ಡಿಪಿಎಸ್‌ ಕಾಯಿದೆ ಅಡಿ ಮ್ಯಾಜಿಕ್‌ ಮಶ್ರೂಮ್‌ ಮಾದಕ ಪದಾರ್ಥವಲ್ಲ: ಕೇರಳ ಹೈಕೋರ್ಟ್‌

ಆರೋಪಿಯ ಮಕ್ಕಳನ್ನು ಭಯೋತ್ಪಾದಕನ ಮಕ್ಕಳು ಎಂದು ಅವರ ಶಾಲೆಯಲ್ಲಿ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದು ಆರೋಪಿ ಪರ ಹಾಜರಾದ ಹಿರಿಯ ವಕೀಲ ಆರ್ಯಮಾ ಸುಂದರಂ ವಾದ ಮಂಡನೆ ವೇಳೆ ತಿಳಿಸಿದರು.  

ಮಾದಕ ವಸ್ತು ಕಳ್ಳಸಾಗಣಿಕೆ ಅಪರಾಧದ ಗಳಿಕೆಯನ್ನು ಲಷ್ಕರ್‌-ಎ-ತಯ್ಯಬಾ ಸಂಘಟನೆಯ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಒದಗಿಸಲು ಬಳಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಾದಿಸಿತು. ಆದರೆ ಹೀಗೆ ಭಾವನಾತ್ಮಕ ವಾದ ಮಂಡಿಸದಂತೆ ನ್ಯಾ. ಕಾಂತ್‌ ಎಚ್ಚರಿಕೆ ನೀಡಿದರು. 

Kannada Bar & Bench
kannada.barandbench.com