ಮುರುಘಾ ಮಠದ ಆಡಳಿತಾಧಿಕಾರಿ ವಸ್ತ್ರದ್‌ ಅವರು ಮಾಡಿರುವ ಉಸ್ತುವಾರಿ ನೇಮಕಾತಿಗಳನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಪೀಠಾಧಿಪತಿ ಶಿವಮೂರ್ತಿ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿರುವ ಚಿತ್ರದುರ್ಗ ಜಿಲ್ಲಾ & ಸತ್ರ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯಲ್ಲಿ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಶರಣರ ಪರ ತಮ್ಮ ವಾದವನ್ನು ಮುಕ್ತಾಯಗೊಳಿಸಿದರು.
Murugha Mutt and Dr. Shivamurthy Murugha Sharanaru
Murugha Mutt and Dr. Shivamurthy Murugha Sharanaru

ಚಿತ್ರದುರ್ಗ ಮುರುಘಾ ಮಠದ ಆಡಳಿತಾಧಿಕಾರಿ ಪಿ ಎಸ್‌ ವಸ್ತ್ರದ ಅವರು ಮಾಡಿರುವ ನೇಮಕಾತಿಗಳ ಆದೇಶವನ್ನು ಹಿಂಪಡೆಯಲು ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಗುರುವಾರ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ.

ವಸ್ತ್ರದ್ ಅವರು ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ವಿದ್ಯಾಪೀಠಕ್ಕೆ ಕೆ ವಿ ಪ್ರಭಾಕರ್‌ ಅವರನ್ನು ಕಾರ್ಯದರ್ಶಿಯನ್ನಾಗಿ ಹಾಗೂ ವೃತ್ತಿಪರ ಕಾಲೇಜುಗಳ ಆಡಳಿತ ಉಸ್ತುವಾರಿಗಾಗಿ ಮಾಜಿ ಸಚಿವ ಎಚ್‌ ಏಕಾಂತಯ್ಯ ಹಾಗೂ ಬಸವರಾಜ್‌ ಪಾಟೀಲ ಅವರನ್ನು ನೇಮಕ ಮಾಡಿರುವ ಆದೇಶ ಹಿಂಪಡೆಯಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಚಿತ್ರದುರ್ಗದ ಪಿ ಎಸ್‌ ಮುರುಗೇಶ್‌ ಎಂಬುವರು ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠಕ್ಕೆ ಸಲ್ಲಿಸಲಾಯಿತು.

ಅರ್ಜಿದಾರರ ಪರ ಹಾಜರಾಗಿದ್ದ ವಕೀಲ ಬಿ ಎ ಚಂದ್ರಶೇಖರ್‌ ಅವರು, ಪಿ ಎಸ್ ಮುರುಗೇಶ್‌ ಮಠದ ಭಕ್ತರಾಗಿದ್ದು, ಈ ಪ್ರಕರಣದಲ್ಲಿ ಅವರನ್ನೂ ಪ್ರತಿವಾದಿಯನ್ನಾಗಿಸಬೇಕು ಮತ್ತು ಆಡಳಿತಾಧಿಕಾರಿ ಕಾರ್ಯವೈಖರಿ ಪ್ರಶ್ನಿಸಿರುವ ಈ ಮಧ್ಯಂತರ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಬೇಕು ಎಂದು ಮನವಿ ಮಾಡಿದರು.

ಅರ್ಜಿ ಸ್ವೀಕರಿಸಲು ಸೂಚಿಸಿದ ಪೀಠವು ಈ ಅರ್ಜಿಯನ್ನು ನೀವು ಸರ್ಕಾರಕ್ಕೆ ಕೊಡಬೇಕಲ್ಲವೇ ಎಂದು ಪ್ರಶ್ನಿಸಿತು. ಇದಕ್ಕೆ ಚಂದ್ರಶೇಖರ್ ಅವರು ಸ್ವಾಮಿ ಈಗಾಗಲೇ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಕಾರಣ ಇದನ್ನೂ ಇಲ್ಲಿಯೇ ಸಲ್ಲಿಸುತ್ತಿದ್ದೇನೆ ಎಂದರು.

ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಪಿ ಎಸ್ ವಸ್ತ್ರದ ಪರ ಹಾಜರಿದ್ದ ಹಿರಿಯ ವಕೀಲ ಗಂಗಾಧರ ಗುರುಮಠ ಅವರು ಅರ್ಜಿದಾರರು ಪ್ರತಿಯನ್ನು ನೀಡಿದ್ದಾರೆ. ಮುಂದಿನ ವಿಚಾರಣೆ ವೇಳೆಗೆ ಪ್ರತ್ಯುತ್ತರ ನೀಡಲಾಗುವುದು ಎಂದರು. ಇದನ್ನು ಮಾನ್ಯ ಮಾಡಿದ ಪೀಠವು ವಿಚಾರಣೆಯನ್ನು ಏಪ್ರಿಲ್‌ 17ಕ್ಕೆ ಮುಂದೂಡಿದೆ.

ಅರ್ಜಿಯಲ್ಲಿ ಏನಿದೆ?: ಮಠದ ಆಡಳಿತಾಧಿಕಾರಿ ಪಿ ಎಸ್‌ ವಸ್ತ್ರದ ಅವರು ತಮ್ಮ ಕರ್ತವ್ಯಗಳನ್ನು ಮತ್ತೊಬ್ಬರಿಗೆ ವರ್ಗಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಸ್‌ಜೆಎಂ ವಿದ್ಯಾಪೀಠಕ್ಕೆ ಕೆ ವಿ ಪ್ರಭಾಕರ್‌ ಅವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ. ಈ ಕಾರ್ಯದರ್ಶಿಯು ಸಮಿತಿಯೊಂದನ್ನು ರಚಿಸಿದ್ದಾರೆ. ಅಂತೆಯೇ ವೃತ್ತಿಪರ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಆಡಳಿತ ಉಸ್ತುವಾರಿಗಾಗಿ ಮಾಜಿ ಸಚಿವ ಎಚ್‌ ಏಕಾಂತಯ್ಯ ಹಾಗೂ ಬಸವರಾಜ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ. ಇವರೆಲ್ಲಾ ಸೇರಿ ವಿದ್ಯಾಸಂಸ್ಥೆಯಲ್ಲಿ ಖಾಲಿ ಇರುವ ಕೆಲವು ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಹೀಗಾಗಿ, ಈ ನೇಮಕಾತಿಯು ಸಾರ್ವಜನಿಕರು ಮತ್ತು ಮಠದ ಭಕ್ತರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಏಕಾಂತಯ್ಯ ಅವರು ಸರ್ಕಾರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲು ಕಾರಣಕರ್ತರು. ಹೀಗಾಗಿ, ಆಡಳಿತಾಧಿಕಾರಿ ಮಾಡಿರುವ ನೇಮಕಾತಿ ಪಾರದರ್ಶಕವಾಗಿಲ್ಲ ಹಾಗೂ ಯಾವುದೇ ಬಾಧ್ಯತೆಯನ್ನು ಹೊಂದಿಲ್ಲ. ಹೀಗಾಗಿ, ಆಡಳಿತಾಧಿಕಾರಿ ವಸ್ತ್ರದ ಅವರು ಮಾಡಿರುವ ಈ ನೇಮಕಾತಿಗಳನ್ನು ವಾಪಸು ಪಡೆಯಲು ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

ವಾದ ಮುಕ್ತಾಯ: ಪೀಠಾಧಿಪತಿ ಶಿವಮೂರ್ತಿ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿರುವ ಚಿತ್ರದುರ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯಲ್ಲಿ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಶರಣರ ಪರ ತಮ್ಮ ವಾದವನ್ನು ಮುಕ್ತಾಯಗೊಳಿಸಿದರು. ಅಂತೆಯೇ, ಆಡಳಿತಾಧಿಕಾರಿ ವಸ್ತ್ರದ ನೇಮಕ ಪ್ರಶ್ನಿಸಿದ ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ್‌ ಅವರೂ ತಮ್ಮ ಮುಂದುವರಿದ ವಾದ ಮಂಡಿಸಿದರು.

Related Stories

No stories found.
Kannada Bar & Bench
kannada.barandbench.com