ವಿದ್ಯಾಪೀಠದ ದೈನಂದಿನ ವ್ಯವಹಾರದ ಹೊರತಾದ ನಿರ್ಧಾರ ಕೈಗೊಳ್ಳುವಂತಿಲ್ಲ: ಮುರುಘಾ ಶ್ರೀಗೆ ಹೈಕೋರ್ಟ್‌ ಸೂಚನೆ

ವಿದ್ಯಾಪೀಠದ ನೀತಿ ನಿರ್ಧಾರ ವಿಷಯದಲ್ಲಿ ಶರಣರು ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಪೀಠಕ್ಕೆ ಭರವಸೆ ನೀಡಿದ ಸ್ವಾಮೀಜಿ ಪರ ವಕೀಲರು.
Shivamurthy Murugha Sharanaru and Karnataka HC
Shivamurthy Murugha Sharanaru and Karnataka HC

ಚಿತ್ರದುರ್ಗದ ಎಸ್‌ಜೆಎಂ ವಿದ್ಯಾಪೀಠದ ದೈನಂದಿನ ವ್ಯವಹಾರಗಳನ್ನು ಹೊರತುಪಡಿಸಿ ಯಾವುದೇ ನೀತಿ-ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ವಿದ್ಯಾಪೀಠದ ಅಧ್ಯಕ್ಷರಾಗಿರುವ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮೌಖಿಕವಾಗಿ ಸೂಚಿಸಿದೆ.

ಪೋಕ್ಸೊ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ ಮಠದ ಎಸ್‌ಜೆ‌ಎಂ ವಿದ್ಯಾಪೀಠದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವುದು ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದು ಆಕ್ಷೇಪಿಸಿ ವಿದ್ಯಾಪೀಠದ ಆಡಳಿತ ಮಂಡಳಿ ನಿರ್ದೇಶಕ ಆರ್‌ ನಾಗರಾಜ್ ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಹಾಜರಿದ್ದ ಮುರುಘಾ ಶರಣರ ಪರ ವಕೀಲರು, ವಿದ್ಯಾಪೀಠದ ನೀತಿ ನಿರ್ಧಾರದ ವಿಷಯದಲ್ಲಿ ಶರಣರು ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಪೀಠಕ್ಕೆ ಭರವಸೆ ನೀಡಿದರು.

ಈ ಹೇಳಿಕೆ ದಾಖಲಿಸಿಕೊಂಡ ಪೀಠವು ಶರಣರು ವಿದ್ಯಾಪೀಠದ ನೀತಿ ನಿರ್ಧಾರ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಬಾರದು. ಕೇವಲ ವಿದ್ಯಾಪೀಠದ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಬಹುದು ಎಂದು ಸೂಚಿಸಿ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಶಿವಮೂರ್ತಿ ಮುರುಘಾ ಶರಣರು ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡಿದ್ದಾರೆ. ಆ ಮೂಲಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಮಾಡಿರುವ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂಬುದಾಗಿ ಪೀಠಕ್ಕೆ ತಿಳಿಸಿದರು.

ಆ ಬಗ್ಗೆ ಪ್ರತಿಕ್ರಿಯಿಸಿದ ಪೀಠವು, "ಷರತ್ತುಬದ್ಧ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವಾಗ ಅಧಿಕಾರ ನಡೆಸಲು ಅಷ್ಟೊಂದು ಆತುರವೇಕೆ? ದೋಷರೋಪಗಳಿಂದ ಮುಕ್ತರಾಗುವ ತನಕ ದೂರ ಇರುವುದು ಒಳಿತಲ್ಲವೇ? ಜಿಲ್ಲಾ ಪ್ರಧಾನ ನ್ಯಾಯಾಧೀಶರು ಉಸ್ತುವಾರಿ ವಹಿಸುವಂತೆ ಇದೇ ಕೋರ್ಟ್‌ ಹೇಳಿತ್ತಲ್ಲವೇ? ಹಾಗೊಂದು ವೇಳೆ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಸಮರ್ಪಕವಾಗಿ ಕಾರ್ಯಭಾರ ಮಾಡುತ್ತಿಲ್ಲ ಎಂದಾದರೆ ಅದನ್ನು ನೋಡಿಕೊಳ್ಳಲು ಹೈಕೋರ್ಟ್‌ ಇಲ್ಲವೇ?" ಎಂದು ಪ್ರಶ್ನಿಸಿತು.

ಈ ವೇಳೆ ಶರಣ ಪರ ಹಾಜರಿದ್ದ ವಕೀಲರು, ಶರಣರು ವಿದ್ಯಾಪೀಠ ನೀತಿ ನಿರೂಪಣೆಯ ವಿಷಯದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳವುದಿಲ್ಲ. ಈ ಕುರಿತು ಪೀಠಕ್ಕೆ ಭರವಸೆ ನೀಡಿರುವುದಾಗಿ ತಿಳಿಸಿದರು. ಅದನ್ನು ದಾಖಲಿಸಿಕೊಂಡ ಪೀಠವು ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿತು.

Kannada Bar & Bench
kannada.barandbench.com