[ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ] ಬಸವರಾಜನ್‌ ದಂಪತಿಯಿಂದ ಕ್ರಿಮಿನಲ್‌ ಪಿತೂರಿ: ಹಿರಿಯ ವಕೀಲ ನಾಗೇಶ್‌ ವಾದ

ಶಿವಮೂರ್ತಿ ಶರಣರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.
Karnataka HC and Shivamurthy Muruga Sharanaru
Karnataka HC and Shivamurthy Muruga Sharanaru

ಮಾಜಿ ಶಾಸಕ ಮತ್ತು ಚಿತ್ರದುರ್ಗದ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿಯೂ ಆದ ಎಸ್‌ ಕೆ ಬಸವರಾಜನ್‌ ದಂಪತಿಯ ಕ್ರಿಮಿನಲ್‌ ಪಿತೂರಿಯ ಭಾಗವಾಗಿ ಶಿವಮೂರ್ತಿ ಶರಣರು ಪೋಕ್ಸೊ ಸೇರಿದಂತೆ ವಿವಿಧ ಕಾಯಿದೆಗಳ ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುವಂತಾಗಿದೆ ಎಂದು ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಆಪಾದಿಸಿದರು.

ಶಿವಮೂರ್ತಿ ಶರಣರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಸ್ವಾಮೀಜಿ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಇಬ್ಬರು ಸಂತ್ರಸ್ತ ಬಾಲಕಿಯರು ಶರಣರ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ ಅಡಿ ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವ ಮುನ್ನ ಸರಿಸುಮಾರು ಒಂದು ತಿಂಗಳ ಕಾಲ ಬಸವರಾಜನ್‌ ಮತ್ತು ಸೌಭಾಗ್ಯ ಬಸವರಾಜನ್‌ ವಶದಲ್ಲಿ ಅವರ ಮನೆಯಲ್ಲೇ ತಂಗಿದ್ದರು. ತದನಂತರ ಚಿತ್ರದುರ್ಗದಿಂದ ದೂರದ ಮೈಸೂರಿಗೆ ತೆರಳಿ ಒಡನಾಡಿ ಎಂಬ ಸಂಸ್ಥೆಯ ಆಶ್ರಯ ಪಡೆದು ದೂರು ದಾಖಲಿಸಿದರು. ಇದರ ಹಿಂದೆ ಸಾಕಷ್ಟು ಪೂರ್ವನಿಯೋಜಿತ ಪಿತೂರಿ ಅಡಗಿದೆ ಎಂದರು.

ಸಂತ್ರಸ್ತ ಬಾಲಕಿಯರು ಮಠದ ಆವರಣದಲ್ಲಿನ ಹಾಸ್ಟೆಲ್‌ನಲ್ಲೇ ಇದ್ದರಾದರೂ ಅದಕ್ಕೆ ಮಹಿಳಾ ವಾರ್ಡನ್‌ ಇದ್ದರು. ಸ್ವಾಮೀಜಿ ಹದಿನೈದು ದಿನಕ್ಕೋ ಅಥವಾ ತಿಂಗಳಿಗೆ ಒಮ್ಮೆಯೋ ಬಾಲಕಿಯರಿಗೆ ಇಂಗ್ಲಿಷ್‌ ಮತ್ತು ಸಂಸ್ಕೃತದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಆಗಾಗ್ಗೆ ಮಕ್ಕಳಿಗೆ ಚಾಕೊಲೆಟ್‌, ಹಣ್ಣುಗಳನ್ನು ಕೊಟ್ಟು ತಮ್ಮ ಪ್ರೇಮ ಮೆರೆಯುತ್ತಿದ್ದರು. ಎಲ್ಲ ಮಕ್ಕಳೂ ಅವರನ್ನು ಅಪ್ಪಾಜಿ ಎಂದೇ ಸಂಬೋಧಿಸುತ್ತಿದ್ದವು. ಅವರೊಬ್ಬ ಬುದ್ಧಿವಂತ, ಯೋಗ್ಯ ಸ್ವಾಮೀಜಿಯಾಗಿ ನಡೆದುಕೊಳ್ಳುತ್ತಿದ್ದರು ಎಂದು ಸಮರ್ಥಿಸಿದರು.

ಮುರುಘಾಮಠದ ಬೃಹತ್‌ ವಿದ್ಯಾಸಂಸ್ಥೆಗೆ ಮಸಿ ಬಳಿಯಲೆಂದೇ ಇಂತಹ ಸುಳ್ಳು ಪ್ರಕರಣವನ್ನು ಸ್ವಾಮೀಜಿ ವಿರುದ್ಧ ಹೆಣೆಯಲಾಗಿದೆ. ಪೋಕ್ಸೊ, ಎಸ್ಸಿ–ಎಸ್ಟಿ ದೌ‌ರ್ಜನ್ಯ ತಡೆ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ, ಬಾಲನ್ಯಾಯ ಅಪರಾಧಗಳಡಿ ಗುರುತರ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆರೋಪಿಸಿದರು.

Also Read
ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ: ಅರ್ಜಿದಾರರ ಪರ ವಕೀಲರ ನಡೆಗೆ ಹೈಕೋರ್ಟ್‌ ಅಸಮಾಧಾನ

ಬಸವರಾಜನ್‌ ದಂಪತಿ ವಿರುದ್ಧ ಪಿತೂರಿಯ ಭಾಗವಾಗಿ ಪ್ರತಿದೂರು ದಾಖಲಾಗಿರುವುದನ್ನು ಪೀಠ ಗಮನಿಸಬೇಕು ಎಂದೂ ಕೋರಿದರು. ಕಲಾಪದ ಅವಧಿ ಮುಕ್ತಾಯಗೊಂಡ ಕಾರಣ ವಿಚಾರಣೆಯನ್ನು ಅಕ್ಟೋಬರ್‌ 30ಕ್ಕೆ ಮುಂದೂಡಲಾಗಿದೆ.

ಸ್ವಾಮೀಜಿ ಪರವಾಗಿ ವಕೀಲ ಸಂದೀಪ್‌ ಪಾಟೀಲ್‌ ಅವರು ವಕಾಲತ್ತು ಹಾಕಿದ್ದರು. ಸಂತ್ರಸ್ತ ಬಾಲಕಿಯರ ಪರವಾಗಿ ವಕೀಲ ಶ್ರೀನಿವಾಸ್‌ ಹಾಜರಿದ್ದರು.

Related Stories

No stories found.
Kannada Bar & Bench
kannada.barandbench.com