ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ: ಅರ್ಜಿದಾರರ ಪರ ವಕೀಲರ ನಡೆಗೆ ಹೈಕೋರ್ಟ್‌ ಅಸಮಾಧಾನ

ಸ್ವಾಮೀಜಿ ಅವರ ವಿರುದ್ಧ ಎರಡು ಪೋಕ್ಸೊ ಪ್ರಕರಣ, ಎಸ್‌ಸಿ, ಎಸ್‌ಟಿ ಕಾನೂನಿನ ಅಡಿ ಪ್ರಕರಣ ದಾಖಲಾಗಿವೆ. 2022ರ ಸೆಪ್ಟೆಂಬರ್‌ 1ರಂದು ಮುರುಘಾ ಶರಣರು ಪೊಲೀಸರಿಗೆ ಶರಣಾಗಿದ್ದರು. ಅಂದಿನಿಂದ ಜೈಲಿನಲ್ಲಿದ್ದಾರೆ.  
Karnataka HC and Shivamurthy Muruga Sharanaru
Karnataka HC and Shivamurthy Muruga Sharanaru

ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಬೆಳವಣಿಗೆಯಾಗಿಲ್ಲ. ಅರ್ಜಿದಾರರಿಗೆ ಆಸಕ್ತಿ ಇಲ್ಲದಿರುವುದನ್ನು ಇದು ತೋರಿಸುತ್ತದೆ ಎಂದು ಪೀಠವು ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿತು.

ಶಿವಮೂರ್ತಿ ಮುರುಘಾ ಶರಣರ ಜಾಮೀನು ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಸ್ವಾಮೀಜಿ ಪರ ವಕೀಲರು “ಸಂಬಂಧಿತ ತನಿಖಾಧಿಕಾರಿ, ಸಂತ್ರಸ್ತರು, ದೂರುದಾರರಿಗೆ ಮಾಹಿತಿ ನೀಡುವಂತೆ ವಿಶೇಷ ಸರ್ಕಾರಿ ಅಭಿಯೋಜಕರಿಗೆ ನ್ಯಾಯಾಲಯ ಈ ಹಿಂದೆ ಆದೇಶಿಸಿದೆ. ಹೀಗಾಗಿ, ಅರ್ಜಿಯನ್ನು ಅಕ್ಟೋಬರ್‌ 6ಕ್ಕೆ ವಿಚಾರಣೆಗೆ ನಿಗದಿಪಡಿಸಬೇಕು. ಅಂದು ಹಿರಿಯ ವಕೀಲರು ಭೌತಿಕವಾಗಿ ಹಾಜರಾಗಿ ವಾದ ಮಂಡಿಸಲಿದ್ದಾರೆ” ಎಂದರು.

ಇದಕ್ಕೆ ಪೀಠವು “ಈ ಪ್ರಕರಣವನ್ನು ದಸರಾ ರಜೆಯ ಬಳಿಕ ವಿಚಾರಣೆಗೆ ಪರಿಗಣಿಸಲಾಗುವುದು. ಯಾವುದೇ ಬೆಳವಣಿಗೆ ಇಲ್ಲದೇ ಪ್ರಕರಣವನ್ನು ಪಟ್ಟಿ ಮಾಡಲಾಗುತ್ತಿದೆ. ಇದು ನಿಮಗೆ ಆಸಕ್ತಿ ಇಲ್ಲ ಎಂಬುದನ್ನು ತೋರಿಸುತ್ತದೆ. ಯಾರೇ ಬಂದು ವಾದಿಸಿದರೂ ಅದು ನಮಗೆ ವಿಷಯವಲ್ಲ. ಇದೊಂದೇ ಪ್ರಕರಣಕ್ಕಾಗಿ ನಾವು ವಿಶೇಷ ಪೀಠದಲ್ಲಿ ಕೂರಲಾಗದು. ನಮಗೆ ವಿಭಾಗೀಯ ಪೀಠದ ಪ್ರಕರಣಗಳು ಇವೆ” ಎಂದು ಕಟುವಾಗಿ ನುಡಿಯಿತು.

ಸಂತ್ರಸ್ತ ವಿದ್ಯಾರ್ಥಿನಿಯರ ಪರವಾಗಿ ವಕಾಲತ್ತು ಹಾಕುವುದಾಗಿ ವಕೀಲ ಬಿ ಸಿ ಶ್ರೀನಿವಾಸ್‌ ಹೇಳಿದರು. ಇದನ್ನು ಆಲಿಸಿದ ಪೀಠವು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್‌ 26ಕ್ಕೆ ನಿಗದಿಪಡಿಸಿ, ವಿಚಾರಣೆ ಮುಂದೂಡಿತು.

Also Read
ಮುರುಘಾ ಶರಣರ ಜಾಮೀನು ಪ್ರಕರಣ: ಹಿಂದೆ ವಿಚಾರಣೆ ನಡೆಸಿದ್ದ‌ ಪೀಠದ ಮುಂದೆ ಅರ್ಜಿ ಪಟ್ಟಿ ಮಾಡಲು ಹೈಕೋರ್ಟ್‌ ಸೂಚನೆ

2022ರಲ್ಲಿ ಮುರುಘಾ ಶರಣರ ಜಾಮೀನು ಅರ್ಜಿಯನ್ನು ಚಿತ್ರದುರ್ಗದ ವಿಶೇಷ ನ್ಯಾಯಾಲಯವು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯನ್ನು ನ್ಯಾ. ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರ ನೇತೃತ್ವದ ಪೀಠವು ವಿಚಾರಣೆ ನಡೆಸಿತ್ತು. ಸರ್ಕಾರಕ್ಕೆ ನೋಟಿಸ್‌ ಸಹ ಆಗಿತ್ತು. ಈ ಮಧ್ಯೆ, ಸ್ವಾಮೀಜಿ ಪರ ವಕೀಲರು ಅರ್ಜಿ ಹಿಂಪಡೆದಿದ್ದನ್ನು ಇಲ್ಲಿ ನೆನೆಯಬಹುದು.

ಸ್ವಾಮೀಜಿ ಅವರ ವಿರುದ್ಧ ಎರಡು ಪೋಕ್ಸೊ ಪ್ರಕರಣ, ಎಸ್‌ಸಿ, ಎಸ್‌ಟಿ ಕಾನೂನಿನ ಅಡಿ ಪ್ರಕರಣ ದಾಖಲಾಗಿವೆ. 2022ರ ಸೆಪ್ಟೆಂಬರ್‌ 1ರಂದು ಮುರುಘಾ ಶರಣರು ಪೊಲೀಸರಿಗೆ ಶರಣಾಗಿದ್ದರು. ಅಂದಿನಿಂದ ಜೈಲಿನಲ್ಲಿದ್ದಾರೆ.  

Kannada Bar & Bench
kannada.barandbench.com