ರಾಜಕೀಯ ಉದ್ದೇಶಕ್ಕೆ ಮುಸ್ಲಿಮರ ಬಳಕೆ; ಚುನಾವಣಾ ಲಾಭಕ್ಕಾಗಿ ಒಬಿಸಿಗೆ ಸೇರ್ಪಡೆ: ಕಲ್ಕತ್ತಾ ಹೈಕೋರ್ಟ್

ಮುಸ್ಲಿಂ ಸಮುದಾಯ ಹಿಂದುಳಿದಿದೆ ಎಂಬ ತನ್ನ ವಾದವನ್ನು ಸಮರ್ಥಿಸಲು ಸಾಚಾರ್ ಸಮಿತಿಯ ವರದಿಯ ಮೇಲೆ ರಾಜ್ಯ ಸರ್ಕಾರ ಅವಲಂಬಿತವಾಗಿರುವುದನ್ನು ನ್ಯಾಯಾಲಯ ತಿರಸ್ಕರಿಸಿತು.
Muslim Women
Muslim Women

ಪಶ್ಚಿಮ ಬಂಗಾಳ ಸರ್ಕಾರ 2010 ಮತ್ತು 2012ರ ನಡುವೆ 77 ಮುಸ್ಲಿಂ ವರ್ಗಗಳನ್ನು ಹಿಂದುಳಿದವರು ಎಂದು ವರ್ಗೀಕಸುವ ಮೂಲಕ ಮುಸ್ಲಿಂ ಸಮುದಾಯವನ್ನು ರಾಜಕೀಯ ಉದ್ದೇಶದ ಸರಕಾಗಿ ಮಾಡಿಕೊಳ್ಳಲಾಗಿದೆ ಎಂದು ಕಲ್ಕತ್ತಾ ಹೈಕೋರ್ಟ್ ಬುಧವಾರ ಹೇಳಿದೆ [ಅಮಲ್‌ ಚಂದ್ರ ದಾಸ್‌ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣ].

ರಾಜ್ಯ ಸರ್ಕಾರದ ನಿರ್ಧಾರ ಒಟ್ಟಾರೆಯಾಗಿ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅಪಮಾನವಾಗಿದ್ದು ಅವರನ್ನು ಕೇವಲ ವೋಟ್‌ ಬ್ಯಾಂಕ್‌‌ ಎಂದು ಪರಿಗಣಿಸಲಾಗಿದೆ ಎಂಬುದಾಗಿ ನ್ಯಾಯಮೂರ್ತಿಗಳಾದ ತಪಬ್ರತ ಚಕ್ರವರ್ತಿ ಮತ್ತು ರಾಜಶೇಖರ್ ಮಂಥ ಅವರಿದ್ದ ಪೀಠ ತಿಳಿಸಿದೆ.

ಈ ನಿರ್ಧಾರವನ್ನು ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ನ್ಯಾಯಾಲಯ ಬಣ್ಣಿಸಿದೆ.

"ಈ ಸಮುದಾಯವನ್ನು ರಾಜಕೀಯ ಆಕಾಂಕ್ಷೆಯ ಸರಕಾಗಿ ಪರಿಗಣಿಸಲಾಗಿದೆ ಎಂಬ ಸಂದೇಹದಿಂದ ನ್ಯಾಯಾಲಯದ ಮನಸ್ಸು ಮುಕ್ತವಾಗಿಲ್ಲ. 77 ವರ್ಗಗಳನ್ನು ಒಬಿಸಿ ಎಂದು ವರ್ಗೀಕರಿಸಲು ಕಾರಣವಾದ ಘಟನೆಗಳ ಸರಪಳಿಯಿಂದ ಇದು ಸ್ಪಷ್ಟವಾಗಿದೆ ಮತ್ತು ಅವರನ್ನು ವೋಟ್ ಬ್ಯಾಂಕ್ ಎಂದು ಪರಿಗಣಿಸಲಾಗಿದೆ. ಚುನಾವಣಾ ಲಾಭಕ್ಕಾಗಿ ಸಮುದಾಯದಲ್ಲಿನ ವರ್ಗಗಳನ್ನು ಒಬಿಸಿ ಎಂದು ಗುರುತಿಸುವುದು ಸಂಬಂಧಪಟ್ಟ ರಾಜಕೀಯ ಸಂಸ್ಥೆಗೆ ಬಿಟ್ಟದ್ದಾಗಿದ್ದು ಇದು ಉಳಿದವರ ಹಕ್ಕುಗಳನ್ನು ಸೋಲಿಸಬಹುದು ಮತ್ತು ನಿರಾಕರಿಸಬಹುದು” ಎಂದು ನ್ಯಾಯಾಲಯ ಹೇಳಿದೆ.

ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹೊರತಾದ) (ಸೇವಾ ಮತ್ತು ಹುದ್ದೆ ಭರ್ತಿ ಮೀಸಲಾತಿ) ಕಾಯಿದೆ - 2012ರ ಅಡಿ 37 ಸಮುದಾಯಗಳಿಗೆ ನೀಡಲಾಗಿದ್ದ ಇತರೆ ಹಿಂದುಳಿದ ವರ್ಗಗಳ ಸ್ಥಾನಮಾನವನ್ನು ರದ್ದುಗೊಳಿಸಿ ನೀಡಲಾಗಿದ್ದ ತೀರ್ಪಿನಲ್ಲಿ ಈ ವಿಚಾರಗಳನ್ನು ನ್ಯಾಯಾಲಯ ಹೇಳಿದೆ.

ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ರಾಜ್ಯ ಹಿಂದುಳಿದ ವರ್ಗ ಆಯೋಗ ಮಾಡಿರುವ ಶಿಫಾರಸ್ಸು ನಿಷ್ಪಕ್ಷಪಾತ ಮತ್ತು ಜಾತ್ಯತೀತ ಮೀಸಲಾತಿಯ ಸಾಂವಿಧಾನಿಕ ಮೌಲ್ಯಕ್ಕೆ ಅನುಗುಣವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. 

ಮುಸ್ಲಿಮರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡುವುದಾಗಿ ಅಂದಿನ ಮುಖ್ಯಮಂತ್ರಿಯವರು ಸಾರ್ವಜನಿಕವಾಗಿ ಘೋಷಿಸಿದ ಬಗ್ಗೆ ಆಯೋಗಕ್ಕೆ ಸಂಪೂರ್ಣವಾಗಿ ತಿಳಿದಿರಲಿಲ್ಲ ಎಂದು ನಿರೀಕ್ಷಿಸಲಾಗದು ಎಂಬುದಾಗಿ ನ್ಯಾಯಾಲಯ ವಿವರಿಸಿದೆ.

ಈ ಸಮುದಾಯಗಳನ್ನು ಒಬಿಸಿ ಎಂದು ಘೋಷಿಸಲು ಧರ್ಮವೊಂದೇ ಮಾನದಂಡವಾಗಿದೆ ಎಂದು ಪೀಠ ಹೇಳಿದ್ದು ಮುಸ್ಲಿಂ ಸಮುದಾಯ ಹಿಂದುಳಿದಿದೆ ಎಂಬ ತನ್ನ ವಾದವನ್ನು ಸಮರ್ಥಿಸಲು ಸಾಚಾರ್ ಸಮಿತಿ ವರದಿಯ ಮೇಲೆ ರಾಜ್ಯ ಸರ್ಕಾರ ಅವಲಂಬಿತವಾಗಿರುವುದನ್ನು ತಿರಸ್ಕರಿಸಿತು.

ಈ ರೀತಿ ಒಬಿಸಿ ಸ್ಥಾನಮಾನ ಕಲ್ಪಿಸಿರುವುದು ಸಂವಿಧಾನಕ್ಕೆ ಮಾಡಿದ ವಂಚನೆ ಎಂದಿರುವ ನ್ಯಾಯಾಲಯ ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಉಲ್ಲಂಘಿಸಲಾಗಿದೆ ಎಂದು ನುಡಿಯಿತು.

Kannada Bar & Bench
kannada.barandbench.com