ಅಂಬೇಡ್ಕರ್‌ ಅವರನ್ನು ಪ್ರಾಧ್ಯಾಪಕ ಹುದ್ದೆಗೆ ನೇಮಿಸಿದ್ದ ಕೌಟುಂಬಿಕ ಹಿನ್ನೆಲೆ ನನ್ನದು: ಹೈಕೋರ್ಟ್‌ನಲ್ಲಿ ವಿನಯ್‌ ವಾದ

“ಪ್ರಾಸಿಕ್ಯೂಷನ್‌ ಸಾಕ್ಷಿಗಳು ಏನು ನುಡಿದಿದ್ದಾರೆ ಎಂಬುದನ್ನು ಪರಿಶೀಲಿಸದೇ, ಪರಿಸ್ಥಿತಿ ಬದಲಾಗಿದೆ ಎಂಬ ಕಾರಣಕ್ಕೆ ವಿನಯ್‌ಗೆ ಜಾಮೀನು ನೀಡಲಾಗದು” ಎಂದು ಆಕ್ಷೇಪಿಸಿದ ಪ್ರಸನ್ನಕುಮಾರ್.‌
Vinay Kulkarni and Karnataka HC
Vinay Kulkarni and Karnataka HC
Published on

“ಅಜ್ಜ, ತಂದೆ ಶಾಸಕರಾಗಿದ್ದು, ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರನ್ನು ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕ ಹುದ್ದೆಗೆ ನೇಮಿಸಿದ್ದ ತಾತ ಲಂಡನ್‌ ನ್ಯಾಯಾಲಯದಲ್ಲಿ ವಾದಿಸಿದ್ದ ಬ್ಯಾರಿಸ್ಟರ್‌ ಆಗಿದ್ದವರು. ಇಂಥ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದೇನೆ” ಎಂದು ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣದ ಆರೋಪಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಅವರು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ವಿವರಿಸಿದರು.

ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ವಿನಯ್‌ ಕುಲಕರ್ಣಿ ಅವರು ಜಾಮೀನು ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ನಡೆಸಿತು.

ವಿನಯ್‌ ಕುಲಕರ್ಣಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಪ್ರಾಸಿಕ್ಯೂಷನ್‌ ಸಾಕ್ಷಿಯಾದ ಜಾಫರ್‌ ಎಂಬವರು ನನ್ನ ಬಳಿ ಬಂದು ನಮಸ್ಕರಿಸಿದರು, ಅವರಿಗೆ ನಾನು ಆಶೀರ್ವದಿಸಿದೆ ಎಂಬ ಏಕೈಕ ಆಧಾರದ ಮೇಲೆ ಜಾಮೀನು ರದ್ದುಪಡಿಸಲಾಗಿದೆ. ಇದೇ ಜಾಫರ್‌ ಇತರೆ ಆರೋಪಿಗಳನ್ನು ಭೇಟಿ ಮಾಡಿ, ಎಲ್ಲರಿಗೂ ಹಸ್ತಲಾಘವ ನೀಡಿದ್ದಾರೆ. ಅವರೆಲ್ಲರಿಗೂ ಜಾಮೀನು ಮಂಜೂರು ಮಾಡಲಾಗಿದೆ. ಆದರೆ, ನನಗೆ ಮಾತ್ರ ಜಾಮೀನು ನಿರಾಕರಿಸಲಾಗಿದೆ. ಕೊಲೆಯಾಗಿರುವ ಯೋಗೀಶ್‌ ಗೌಡ ಅವರು ನಾಲ್ಕು ಠಾಣೆಗಳಲ್ಲಿ ರೌಡಿ ಶೀಟರ್‌ ಆಗಿದ್ದರು. ಏಳು ಕೊಲೆ ಪ್ರಕರಣ ಸೇರಿ 32 ಪ್ರಕರಣಗಳು ಯೋಗೀಶ್‌ ಗೌಡ ವಿರುದ್ಧ ದಾಖಲಾಗಿದ್ದವು” ಎಂದರು.

“ನನ್ನ ತಂದೆ ಬೆಳಗಾವಿ ಜಿಲ್ಲೆಯ ಸವದತ್ತಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು. ನನ್ನ ತಾತ ಶಾಸಕ ಮತ್ತು ಬ್ಯಾರಿಸ್ಟರ್‌ ಆಗಿದ್ದು, ಲಂಡನ್‌ ನ್ಯಾಯಾಲಯದಲ್ಲಿ ವಾದಿಸಿದ್ದರು. ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಕಾನೂನು ಕಾಲೇಜಿಗೆ ಪ್ರಾಧ್ಯಾಪಕರನ್ನಾಗಿ (ಲೆಕ್ಚರರ್) ನೇಮಿಸಿದ್ದವರು ನನ್ನ ತಾತ. ಇದಕ್ಕೆ ಸಾಕ್ಷಿ ಇದೆ. ನನ್ನ ತಾತ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿರುವುದಕ್ಕೆ ದಾಖಲೆ ಇದೆ. ಇದು ನನ್ನ ಕುಟುಂಬ, ನಾನು ಮೂರು ಬಾರಿ ಶಾಸಕ, ಕೃಷಿಕನಾಗಿದ್ದು, ಕೃಷಿ ಪದವಿ ಪಡೆದಿದ್ದೇನೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದವನು. 2023ರ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಕಾಲಿಡದಿದ್ದರೂ ಅಲ್ಲಿನ ಜನರು ನನಗೆ ಒಂದು ಲಕ್ಷಕ್ಕೂ ಅಧಿಕ ಮತ ನೀಡಿ ಜಯಶೀಲನನ್ನಾಗಿಸಿದ್ದಾರೆ. ಇದನ್ನು ನಾನು ಜನಪ್ರಿಯತೆ ಎನ್ನುವುದಿಲ್ಲ. ಜನರು ನನ್ನನ್ನು ಪ್ರೀತಿಸುವ ಮತ್ತು ಗೌರವಿಸುವ ಬಗೆ ಇದು. ನನಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾನೆ. ಈ ಪೈಕಿ ಒಬ್ಬ ಪುತ್ರಿ ಮತ್ತು ಪುತ್ರ ವಕೀಲರು” ಎಂದರು.

“ಯಾವ ಪಾಪದ ತಪ್ಪಿಗಾಗಿ ನಾನು ಜೈಲಿನಲ್ಲಿದ್ದೇನೆ? ಇದೊಂದು ರಾಜಕೀಯ ಪ್ರೇರಿತ ಪ್ರಕರಣ. ಈ ಕೊಲೆ ನಡೆದಾಗಿನಿಂದಲೂ ಬಿಜೆಪಿಯ ನಾಯಕರು ಸುದ್ದಿಗೋಷ್ಠಿ ನಡೆಸುತ್ತಾ, ಬಿಜೆಪಿ ಅಧಿಕಾರಕ್ಕೆ ಬಂದರೆ ನನ್ನನ್ನು ಬಂಧಿಸುವುದಾಗಿ ಹೇಳುತ್ತಾ ಬಂದಿದ್ದರು. ಇದಕ್ಕೆ ಸಾಕ್ಷಿ ಇದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತದಾರರಿಗೆ ಹೇಳಿದ್ದರು. ಇದಕ್ಕೂ ಮುನ್ನ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬ ಅರ್ಜಿಗಳನ್ನು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ವಜಾಗೊಳಿಸಿದ್ದರೂ ಬಿಜೆಪಿ ನಾಯಕರು ಈ ಹೇಳಿಕೆ ನೀಡಿದ್ದರು. ಪ್ರಕರಣ ನಡೆದು ನಾಲ್ಕು ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು” ಎಂದರು.

“ಧಾರವಾಡ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಬಾಕಿ ಇದ್ದಾಗಲೇ ಯೋಗೀಶ್‌ ಗೌಡ ಪತ್ನಿ ಪ್ರತಿಕೂಲ ಸಾಕ್ಷಿಯಾಗಿದ್ದರು. ಪ್ರಕರಣದಲ್ಲಿ ಮೊದಲ ಮಾಹಿತಿದಾರೆಯಾಗಿದ್ದವರು ಯೋಗೀಶ್‌ ಗೌಡ ಪತ್ನಿ. ಆಕೆಯ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು. ಪಾಟೀ ಸವಾಲಿನ ವೇಳೆ ಯೋಗೀಶ್‌ ಗೌಡ ಪತ್ನಿಯು 15ನೇ ಆರೋಪಿ ವಿನಯ್‌ ಕುಲಕರ್ಣಿ ಅವರ ವಿರುದ್ಧ ನಮಗೆ ಯಾವುದೇ ದ್ವೇಷ ಇರಲಿಲ್ಲ ಎಂದು ಹೇಳಿದ್ದರು. ನಾವು ಪರಸ್ಪರ ಸ್ನೇಹದಿಂದ ಇದ್ದೆವು. ಅವರು ನಮ್ಮ ಮನೆಗೆ, ನಾವು ಅವರ ಮನೆಗೆ ತೆರಳಿ ಆತಿಥ್ಯ ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ” ಎಂದು ವಿವರಿಸಿದರು.

“ಯೋಗೀಶ್‌ ಗೌಡನ ಪತ್ನಿಯೇ ಪ್ರಾಸಿಕ್ಯೂಷನ್‌ಗೆ ವಿರುದ್ಧವಾದರೂ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದೇಕೆ? ಇದೆಲ್ಲವನ್ನೂ ಬದಿಗಿಟ್ಟು ನೋಡಿದರೂ ಪ್ರಕರಣದ ಎಲ್ಲಾ ಸಾಕ್ಷಿಗಳ ವಿಚಾರಣೆ ಮುಗಿದ್ದು, ಇನ್ನಿಬ್ಬರ ವಿಚಾರಣೆ ಬಾಕಿ ಇದೆ. 21 ಆರೋಪಿಗಳ ಪೈಕಿ 20 ಮಂದಿಗೆ ಜಾಮೀನು ದೊರೆತಿರುವಾಗ ನನಗೆ ಮಾತ್ರ ಸ್ವಾತಂತ್ರ್ಯ ಏಕೆ ಇಲ್ಲ. ಹೀಗಾಗಿ, ಜಾಮೀನು ನೀಡಬೇಕು” ಎಂದು ಮನವಿ ಮಾಡಿದರು.

ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಅವರು “ವಿನಯ್‌ ಕುಲಕರ್ಣಿ ಅವರು ನೇರ ಅಥವಾ ಪರೋಕ್ಷವಾಗಿ ಸಾಕ್ಷಿಗಳನ್ನು ಪ್ರಭಾವಿಸಬಾರದು ಎಂಬ ಷರತ್ತು ವಿಧಿಸಿತ್ತು. ಇದನ್ನು ವಿನಯ್‌ ಕುಲಕರ್ಣಿ ಉಲ್ಲಂಘಿಸಿದ್ದಾರೆ. ಇಬ್ಬರು ಸಾಕ್ಷಿಗಳನ್ನು ಪ್ರಾಸಿಕ್ಯೂಷನ್‌ಗೆ ವಿರುದ್ಧವಾಗಿ ಸಾಕ್ಷಿ ನುಡಿಯಲು ವಿನಯ್‌ ಕುಲಕರ್ಣಿ ಮತ್ತು ಇನ್ನೊಬ್ಬ ಆರೋಪಿ 2024ರ ನವೆಂಬರ್‌ನಲ್ಲಿ ಪ್ರಯತ್ನಿಸಿರುವುದರಿಂದ ಅವರ ಜಾಮೀನು ರದ್ದುಪಡಿಸಬೇಕು ಎಂದು 2024 ಡಿಸೆಂಬರ್‌ನಲ್ಲಿ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿತ್ತು” ಎಂದರು.

“ಕೆಲವು ಸಾಕ್ಷಿಗಳನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ ಎಂಬ ಕಾರಣಕ್ಕೆ ಜಾಮೀನು ನೀಡಬೇಕು ಎಂದು ವಿನಯ್‌ ಕುಲಕರ್ಣಿ ಕೇಳಿದ್ದಾರೆ. ಸಾಕ್ಷಿಗಳ ವಿಚಾರಣೆ ಮುಗಿದಿರುವುದು ಪರಿಸ್ಥಿತಿಯ ಬದಲಾವಣೆಯಾಗಿದೆ ಎಂದಿದ್ದಾರೆ. ಜಾಮೀನು ನೀಡಿದರೆ, ಸಾಕ್ಷಿ ನುಡಿದಿರುವವರು ಸುರಕ್ಷಿತವಾಗಿರಲಿದ್ದಾರೆಯೇ ಎಂಬುದನ್ನೂ ನೋಡಬೇಕಿದೆ. ಒಮ್ಮೆ ಷರತ್ತು ಉಲ್ಲಂಘಿಸಿದರೆ ಮತ್ತೊಮ್ಮೆ ಜಾಮೀನು ಕೋರುವ ಹಕ್ಕನ್ನು ಆರೋಪಿ ಕಳೆದುಕೊಳ್ಳುತ್ತಾರೆ” ಎಂದರು.

“ಪ್ರಕರಣದಲ್ಲಿ 2, 4,5,10, 11 & 40 ನೇ ಸಾಕ್ಷಿಗಳು ಪ್ರಾಸಿಕ್ಯೂಷನ್‌ ಪರವಾಗಿ ಸಾಕ್ಷಿ ನುಡಿದಿದ್ದಾರೆ. ಆ ಸಾಕ್ಷಿಗಳು ಏನು ನುಡಿದಿದ್ದಾರೆ ಎಂಬುದನ್ನು ಪರಿಶೀಲಿಸದೇ, ಪರಿಸ್ಥಿತಿ ಬದಲಾಗಿದೆ ಎಂಬ ಕಾರಣಕ್ಕೆ ವಿನಯ್‌ಗೆ ಜಾಮೀನು ನೀಡಲಾಗದು” ಎಂದು ಆಕ್ಷೇಪಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಬಾಕಿ ಇರುವ ಸಾಕ್ಷಿಗಳನ್ನು ಒಳಗೊಂಡ ಮೆಮೊ ಸಲ್ಲಿಸುವಂತೆ ಸಿಬಿಐ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು ನಾಳೆಗೆ ಮುಂದೂಡಿತು.

Kannada Bar & Bench
kannada.barandbench.com