ವಕೀಲ ಗುಮಾಸ್ತ ಹುದ್ದೆಗೆ ಪರೀಕ್ಷೆ: ಸಿಜೆಐ ಚಂದ್ರಚೂಡ್ ಮಾಹಿತಿ

ವಕೀಲ ಗುಮಾಸ್ತರ ಪರೀಕ್ಷೆಯು ಬರುವ ಮೇ ತಿಂಗಳ ಆರಂಭದಲ್ಲಿ ನಡೆಯುವ ಸಾಧ್ಯತೆ ಇದೆ.
Supreme Court, Justice DY Chandrachud
Supreme Court, Justice DY Chandrachud

ಮುಕ್ತ ಮತ್ತು ಪಾರದರ್ಶಕ ಪ್ರಕ್ರಿಯೆ ಮೂಲಕ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲ ಗುಮಾಸ್ತರನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹೇಳಿದ್ದಾರೆ. ಇದೇ ವೇಳೆ ಅವರು ವಕೀಲ ಗುಮಾಸ್ತ ಹುದ್ದೆಗೆ ಹಮ್ಮಿಕೊಳ್ಳಲಾಗುತ್ತಿರುವ ಪರೀಕ್ಷೆಯ ಕುರಿತು ಮಾಹಿತಿ ನೀಡಿದರು.

ಸುಪ್ರೀಂ ಕೋರ್ಟ್‌ಗೆ ಹೊಸದಾಗಿ ನೇಮಕಗೊಂಡ ಎಂಟು ನ್ಯಾಯಮೂರ್ತಿಗಳಿಗೆ ಸರ್ವೋಚ್ಚ ನ್ಯಾಯಾಲಯದ ವಕೀಲರ ಸಂಘದ (ಎಸ್‌ಸಿಬಿಎ) ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

“ನನ್ನ ವಕೀಲ ಗುಮಾಸ್ತರು ಸಂಪೂರ್ಣ ಪ್ರತ್ಯೇಕ ಹಿನ್ನೆಲೆಯಿಂದ ಬಂದವರಾಗಿದ್ದು ಇವರಲ್ಲಿ ಯಾರೂ ನ್ಯಾಯಿಕ ವರ್ಗದ ಕುಟುಂಬಗಳಿಂದ ಬಂದವರಲ್ಲ. ಅದ್ಭುತ ಕೆಲಸಗಳನ್ನು ಮಾಡಿದ್ದಾರೆ. ಹಾಗಾಗಿ ಜನರಿಗೆ ಸುಪ್ರೀಂ ಕೋರ್ಟನ್ನು ಇನ್ನಷ್ಟು ಹತ್ತಿರಗೊಳಿಸುವ ಮತ್ತು ದೇಶದೆಲ್ಲೆಡೆಯ ಯುವ ವಕೀಲರಿಗೆ ವಿಶ್ವಾಸದ ಸಂದೇಶ ಕಳಿಸುವ ನಮ್ಮ ಕಾರ್ಯದ ಭಾಗವಾಗಿದೆ ಇದು” ಎಂದರು.

“ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಗೆ ಸಹಾಯ ಮಾಡಲು ವಕೀಲ ಗುಮಾಸ್ತರನ್ನು ನೇಮಕ ಮಾಡಿ ಭವಿಷ್ಯದ ವಕೀಲರಿಗೆ ತರಬೇತಿ ನೀಡುತ್ತೇವೆ. ವಕೀಲ ವರ್ಗಕ್ಕೆ ನೀಡುವ ನಮ್ಮ ಹೊಣೆಗಾರಿಕೆಯ ಭಾಗವಾಗಿದೆ ಇದು” ಎಂದರು.

ಸಿಜೆಐ ವಕೀಲ ಗುಮಾಸ್ತ ಹುದ್ದೆಗೆ ಸಂಬಂಧಿಸಿದ ಪರೀಕ್ಷೆಯ ಸ್ವರೂಪವನ್ನು ಕೂಡ ತಿಳಿಸಿದರು. ಪರೀಕ್ಷೆ ಬರುವ ಮೇ ತಿಂಗಳ ಆರಂಭದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವಿವರಿಸಿದರು.

ನ್ಯಾ. ಸಂಜಯ್‌ ಕಿಶನ್‌ ಕೌಲ್‌ ಮತ್ತು ತಮ್ಮ ಅಧ್ಯಕ್ಷತೆಯ ಸಮಿತಿ ಶ್ವೇತಪತ್ರ ಹೊರಡಿಸಿದ್ದು ವಕೀಲ ಗುಮಾಸ್ತರ ಪರೀಕ್ಷೆಗೆ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದ್ದು ಪರೀಕ್ಷೆ ಮೇ ತಿಂಗಳ ಆರಂಭದಲ್ಲಿ ನಡೆಯುವ ಸಾಧ್ಯತೆ ಇದೆ. ವಕೀಲ ಗುಮಾಸ್ತರ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ವಿಶ್ಲೇಷಣಾತ್ಮಕ ಕೌಶಲ್ಯ ಪರೀಕ್ಷಿಸುವ ದೃಷ್ಟಿಯಿಂದ ಎರಡು ಹಂತಗಳ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದರು.

ಒಟ್ಟು 300 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳಿದ್ದು ಬಳಿಕ ಮೂರೂವರೆ ಗಂಟೆಗಳ ಕಾಲ ಎರಡು ಪ್ರಶ್ನೆಗಳನ್ನು ನೀಡಲಾಗುತ್ತದೆ. ಒಂದು ಪ್ರಶ್ನೆ ಅಣಕು ತೀರ್ಪಿನ ಸಾರಾಂಶ ಬರೆಯುವುದಕ್ಕೆ ಸಂಬಂಧಿಸಿದ್ದಾಗಿದ್ದು ನಂತರ ಸಂಶೋಧನಾ ಪ್ರಬಂಧ ಸಿದ್ಧಪಡಿಸುವ ಕುರಿತಾದ ಇನ್ನೊಂದು ಪರೀಕ್ಷೆ ಇರಲಿದೆ. ಇದರಲ್ಲಿ ಅರ್ಧ ಗಂಟೆಯನ್ನು ಪತ್ರಿಕೆ ಓದಲು ನೀಡಲಾಗುವುದು ನಂತರ ಎರಡು ಪ್ರಶ್ನೆಗಳಿರಲಿವೆ. ಈ ಎರಡು ಪ್ರಶ್ನೆಗಳಿಗೆ ಉತ್ತರ ತಲಾ 750 ಪದಗಳನ್ನು ಮೀರಬಾರದು.

ವಕೀಲ ಗುಮಾಸ್ತರನ್ನು ಅಲ್ಪಾವಧಿಯ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ನ್ಯಾಯಾಲಯದ ಬೇಸಿಗೆ ರಜೆ ಬಳಿಕ ಕಾರ್ಯಾರಂಭ ಮಾಡುವ ಅವಧಿಯಿಂದ ಹಿಡಿದು ಮುಂದಿನ ವರ್ಷ ಬೇಸಿಗೆ ರಜೆಯವರೆಗೆ ಅವರ ಕಾರ್ಯಾವಧಿ ಇರಲಿದೆ.

Also Read
ವಕೀಲರ ಗುಮಾಸ್ತರ ಕಲ್ಯಾಣಕ್ಕೆ ಯೋಜನೆ: ರಾಜ್ಯ ಸರ್ಕಾರ, ಕೆಎಸ್‌ಬಿಸಿಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಸಂಬಂಧಿಸಿದ ನ್ಯಾಯಮೂರ್ತಿಗಳು ವಕೀಲ ಗುಮಾಸ್ತರ ಸೇವೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ಅನುಮೋದಿಸಿದರೆ ಅವರು ಸೇವಾವಧಿಯನ್ನು ಮುಂದಿನ ವರ್ಷಕ್ಕೂ ವಿಸ್ತರಿಸಬಹುದಾಗಿದೆ. ನಿಯೋಜಿತ ಅವಧಿಗೆ ಪ್ರತಿ ತಿಂಗಳು ವಕೀಲರು ₹ 80,000 ಸಂಭಾವನೆ ಪಡೆಯಲಿದ್ದಾರೆ. ಸೇವೆ ಹನ್ನೆರಡು ತಿಂಗಳ ಬಳಿಕವೂ ವಿಸ್ತರಣೆಯಾದರೆ ಅವರ ಮಾಸಿಕ ಸಂಭಾವನೆ ₹ 90,000 ಆಗಲಿದೆ.

ನ್ಯಾಯಮೂರ್ತಿಗಳು ನಾಲ್ವರು ವಕೀಲ ಗುಮಾಸ್ತರನ್ನು ನೇಮಕ ಮಾಡಿಕೊಳ್ಳಬಹುದಾಗಿದ್ದು ಅದರಲ್ಲಿ ಇಬ್ಬರು ಕಡ್ಡಾಯವಾಗಿ ರಿಜಿಸ್ಟ್ರಿಯ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆಯಾದವರಾಗಿರುತ್ತಾರೆ. ಕಾರ್ಯವಿಧಾನದ ಮೂಲಕ ಎಲ್ಲಾ ನಾಲ್ವರನ್ನು ತೊಡಗಿಸಿಕೊಳ್ಳಲು ಅವರು ಮುಕ್ತರಾಗಿರುತ್ತಾರೆ. ಇದಲ್ಲದೆ ಕಾರ್ಯಭಾರಕ್ಕೆ ತಕ್ಕಂತೆ ನ್ಯಾಯಮೂರ್ತಿಗಳು ಐದು ಮಂದಿಯವರೆಗೆ ವಕೀಲ ಗುಮಾಸ್ತರನ್ನು ನಿಯೋಜಿಸಿಕೊಳ್ಳಬಹುದಾಗಿದೆ.

ಯೋಜನೆ ಪ್ರಕಾರ ನಿಯೋಜಿತ ಅವಧಿಯಲ್ಲಿ ವಕೀಲ ಗುಮಾಸ್ತರು ಬೇರೆ ಕೆಲಸಗಳನ್ನು ಒಪ್ಪಿಕೊಳ್ಳುವಂತಿಲ್ಲ. ನಿಯೋಜನೆ ವೇಳೆ ಅವರು ಯಾವುದೇ ನ್ಯಾಯಾಲಯದಲ್ಲಿ ವಕೀಲರಾಗಿ ಪ್ರಾಕ್ಟೀಸ್‌ ಮಾಡುವಂತಿಲ್ಲ.

ಯಾವುದೇ ವಿಷಯದಲ್ಲಿ ಪದವಿ, ಬಳಿಕ ಐದು ವರ್ಷಗಳ ಸಂಯೋಜಿತ ಕಾನೂನು ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಅಥವಾ ಮೂರು ವರ್ಷಗಳ ಕಾನೂನು ಕೋರ್ಸ್‌ನ ಅಂತಿಮ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿ ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಕೀಲ ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಯ ವಯೋಮಾನವು ಏಪ್ರಿಲ್ 30, 2023ಕ್ಕೆ 20 ವರ್ಷಕ್ಕಿಂತ ಕಡಿಮೆ ಇರಬಾರದು ಮತ್ತು 30 ವರ್ಷ ಮೀರಿರಬಾರದು.

Related Stories

No stories found.
Kannada Bar & Bench
kannada.barandbench.com