ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಐವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ

ಬಂಧಿತರ ವಿಚಾರಣೆಯ ಸಂದರ್ಭದಲ್ಲಿ ಮಾಹಿತಿ ಪಡೆದು ತಮಿಳುನಾಡಿನಲ್ಲೇ ಬೀಡುಬಿಟ್ಟಿದ್ದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಏಳನೇ ಆರೋಪಿಯನ್ನೂ ವಶಕ್ಕೆ ಪಡೆದಿದ್ದಾರೆ. ಇಂದು ಸಂಜೆಯ ಒಳಗೆ ಆತನನ್ನು ಮೈಸೂರಿಗೆ ಕರೆತರುವ ಸಾಧ್ಯತೆ ಇದೆ.
Gang rape
Gang rape

ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಗುಡ್ಡದಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಐವರು ಆರೋಪಿಗಳನ್ನು ಮೈಸೂರಿನ ಮೂರನೇ ಜೆಎಂಎಫ್‌ಸಿ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಂಗಳವಾರಕ್ಕೆ ಆರೋಪಿಗಳ ಹತ್ತು ದಿನಗಳ ಪೊಲೀಸ್‌ ಕಸ್ಟಡಿ ಮುಗಿದಿತ್ತು.

ಬಾಲಾಪರಾಧಿ ಸೇರಿದಂತೆ ಆರು ಮಂದಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಾಲಾಪರಾಧಿಯನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ.

ಈ ನಡುವೆ, ಬಂಧಿತರ ವಿಚಾರಣೆಯ ಸಂದರ್ಭದಲ್ಲಿ ಮಾಹಿತಿ ಪಡೆದು ತಮಿಳುನಾಡಿನಲ್ಲೇ ಬೀಡುಬಿಟ್ಟಿದ್ದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಏಳನೇ ಆರೋಪಿಯನ್ನೂ ವಶಕ್ಕೆ ಪಡೆದಿದ್ದಾರೆ. ಇಂದು ಸಂಜೆಯ ಒಳಗೆ ಆತನನ್ನು ಮೈಸೂರಿಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.

Also Read
ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ವಿಚಾರಣೆ ತೀವ್ರ, ಇಂದೇ ಆರೋಪಿಗಳ ವೈದ್ಯಕೀಯ ಪರೀಕ್ಷೆ ಸಾಧ್ಯತೆ

ಆಗಸ್ಟ್‌ 29ರಂದು ನಗರದ 3ನೇ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗಳನ್ನು ಹತ್ತು ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿತ್ತು. ನಗರದ ಅಜ್ಞಾತ ಸ್ಥಳದಲ್ಲಿ ಆರೋಪಿಗಳ ವಿಚಾರಣೆ ನಡೆಸಿದ್ದು, ಒಟ್ಟು ಎಷ್ಟು ಮಂದಿ ಕೃತ್ಯ ಎಸಗಿದ್ದರು ಎಂಬ ಬಗ್ಗೆ ಕೊಂಚಮಟ್ಟಿನ ಗೊಂದಲ ಇದೆ. ಆರೋಪಿಯೊಬ್ಬ ಏಳು ಮಂದಿ ಕೃತ್ಯ ಎಸಗಿರುವುದಾಗಿ ಹೇಳಿದ್ದರೆ ವಿದ್ಯಾರ್ಥಿನಿಯ ಸ್ನೇಹಿತ ಕೃತ್ಯ ನಡೆದಾಗ ಆರು ಮಂದಿ ಇದ್ದುದಾಗಿ ಹೇಳಿದ್ದ. ಮತ್ತೊಬ್ಬ ಆರೋಪಿಗಾಗಿ ತಮಿಳುನಾಡಿನಲ್ಲಿ ಶೋಧ ಮುಂದುವರೆದಿದೆ ಎಂದು ತಿಳಿದು ಬಂದಿತ್ತು.

“ಬಂಧಿತರ ಪೈಕಿ ಕೆಲವರು ಏಳು, ಎಂಟನೇ ತರಗತಿ ಓದಿದ್ದು, ಒಬ್ಬರು ಅನಕ್ಷರಸ್ಥರಾಗಿದ್ದಾರೆ. ವೈರಿಂಗ್‌, ಕಾರು ಚಾಲನೆ, ಮರಗೆಲಸ ಮಾಡುವವರಾಗಿದ್ದಾರೆ” ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ತಿಳಿಸಿದ್ದರು.

Related Stories

No stories found.
Kannada Bar & Bench
kannada.barandbench.com