ಮೈಸೂರು ಅನಂತಸ್ವಾಮಿ ಸಂಯೋಜನಾ ಧಾಟಿಯಲ್ಲಿನ ನಾಡಗೀತೆ ಖಾಸಗಿ ಶಾಲೆಗಳಿಗೂ ಅನ್ವಯ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

"ನಾಡಗೀತೆ ವಿಚಾರದಲ್ಲಿ ರಾಜ್ಯ ಸರ್ಕಾರವು ಏಕೆ ಹೀಗೆ ಗೊಂದಲದ ಆದೇಶಗಳನ್ನು ಹೊರಡಿಸುತ್ತಿದೆ? ಒಂದು ಆದೇಶ ಹೊರಡಿಸಿ ನಂತರ ಅದನ್ನು ಹಿಂಪಡೆದು ತಿದ್ದುಪಡಿ ಆದೇಶ ಹೊರಡಿಸುತ್ತಿದೆ" ಎಂದು ಕಿಡಿಕಾರಿದ ಪೀಠ.
Karnataka High Court
Karnataka High Court

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶ ರಾಜ್ಯದ ಖಾಸಗಿ ಶಾಲೆಗಳಿಗೂ ಅನ್ವಯಿಸಲಿದೆ ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಸ್ಪಷ್ಟೀಕರಣ ನೀಡಿದೆ.

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ಎರಡೂವರೆ ನಿಮಿಷ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2023ರ ಸೆಪ್ಟೆಂಬರ್‌ 25ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಸರ್ಕಾರದ ಸ್ಪಷ್ಟಿಕರಣ ಆಲಿಸಿದ ಪೀಠವು, "ನಾಡಗೀತೆಯು ನಿರ್ದಿಷ್ಟ ರಾಗದಲ್ಲಿ ಹಾಡುವುದನ್ನು ಕಡ್ಡಾಯ ಮಾಡಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಯಾವುದೇ ಶಾಸನವಿಲ್ಲ ಎಂಬುದಾಗಿ ಅರ್ಜಿದಾರರು ಆಕ್ಷೇಪಿಸಿದ್ದಾರೆ. ಹಾಗಾದರೆ, ಇಂತಹ ಆದೇಶ ಹೊರಡಿಸಲು ಸರ್ಕಾರ ಯಾವ ಶಾಸನಾತ್ಮಕ ಅಧಿಕಾರ ಹೊಂದಿದೆ?" ಎಂದು ಪ್ರಶ್ನಿಸಿತು.

ಸರ್ಕಾರದ ವಕೀಲರು, ಈ ಕುರಿತು ರಾಜ್ಯ ಸರ್ಕಾರದಿಂದ ಅಗತ್ಯ ಮಾಹಿತಿ ಪಡೆದು ವಿವರಣೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಅದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಹೈಕೋರ್ಟ್‌, "ನಾಡಗೀತೆ ಸಾಂವಿಧಾನಿಕವಾಗಿ ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ನಾಡಗೀತೆ ವಿಚಾರದಲ್ಲಿ ರಾಜ್ಯ ಸರ್ಕಾರವು ಏಕೆ ಹೀಗೆ ಗೊಂದಲ ಆದೇಶಗಳನ್ನು ಹೊರಡಿಸುತ್ತಿದೆ? ಒಂದು ಆದೇಶ ಹೊರಡಿಸಿ ನಂತರ ಅದನ್ನು ಹಿಂಪಡೆದು ತಿದ್ದುಪಡಿ ಆದೇಶ ಹೊರಡಿಸುತ್ತಿದೆ. ಇನ್ನೂ ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಸಂವಿಧಾನದ ಅಥವಾ ಇತರೆ ಶಾಸನದ ಬೆಂಬಲವಿರಬೇಕು. ಸರ್ಕಾರ ವಿವೇಚನಾಧಿಕಾರ ಬಳಸಿ ಕಾರ್ಯಕಾರಿ ಆದೇಶ ಹೊರಡಿಸಲಾಗದು. ಈ ಬಗ್ಗೆ ಸಮಗ್ರವಾದ ವಿವರಣೆ ನೀಡಿ" ಎಂದು ಸೂಚಿಸಿ ವಿಚಾರಣೆಯನ್ನು ಏಪ್ರಿಲ್‌ 10ಕ್ಕೆ ವಿಚಾರಣೆ ಮುಂದೂಡಿತು.

ಅಲ್ಲದೆ, ಮುಂದಿನ ವಿಚಾರಣೆ ವೇಳೆ ನ್ಯಾಯಾಲಯ ಕೇಳಿರುವ ಪ್ರಶ್ನೆಗಳಿಗೆ ಹಾಗೂ ಅರ್ಜಿದಾರರು ಎತ್ತಿರುವ ಆಕ್ಷೇಪಣೆಗಳಿಗೆ ಸರ್ಕಾರ ಕಾನೂನಿನ ನೆಲಗಟ್ಟಿನಲ್ಲಿ ಸಮರ್ಪಕ ಉತ್ತರ ನೀಡಬೇಕು. ಹೆಚ್ಚುಕಾಲ ಈ ಅರ್ಜಿ ವಿಚಾರಣೆ ಮುಂದೂಡುತ್ತಾ ಹೋಗಲು ಸಾಧ್ಯವಿಲ್ಲ. ನ್ಯಾಯಾಲಯ ತ್ವರಿತವಾಗಿ ತನ್ನ ನಿರ್ಧಾರ ಪ್ರಕಟಿಸುವ ಮೂಲಕ ಅರ್ಜಿ ವಿಲೇವಾರಿ ಮಾಡಬೇಕಿದೆ. ಸರ್ಕಾರವು ವಿವರಣೆ ನೀಡಿದರೆ ಬಳಿಕ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ನ್ಯಾಯಾಲಯದಲ್ಲಿ ವಾದ ಮಂಡಿಸುವ ಮುನ್ನ ಸರ್ಕಾರಿ ವಕೀಲರು ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳು, ಕಾನೂನುಗಳನ್ನು ಪರಿಶೋಧಿಸಿ, ಮಾಹಿತಿ ನೀಡಬೇಕು ಎಂದು ಮೌಖಿಕವಾಗಿ ಸೂಚಿಸಿತು.

ಖಾಸಗಿ ಶಾಲೆಗಳಿಗೂ ಅನ್ವಯ: ಫೆಬ್ರವರಿ 2ರಂದು ವಿಚಾರಣೆಗೆ ನಡೆದಾಗ ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಎಲ್ಲಾ ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಇತರೆ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡಬೇಕು ಎಂದು ಹಿಂದಿನ ಆದೇಶದಲ್ಲಿ ಹೇಳಲಾಗಿತ್ತು. ಸದ್ಯ ಆ ಆದೇಶಕ್ಕೆ ಫೆಬ್ರವರಿ 7ರಂದು ತಿದ್ದುಪಡಿ ತರಲಾಗಿದೆ. ಅದರ ಪ್ರಕಾರ ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು, ನಿಗಮ, ಮಂಡಳಿ, ಪ್ರಾಧಿಕಾರ ಮುಂದಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು ಎಂಬುದಾಗಿ ಸೂಚಿಸಲಾಗಿದೆ ಎಂದು ತಿಳಿಸಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ಹೈಕೋರ್ಟ್‌, ನಿರ್ದಿಷ್ಟ ಧಾಟಿಯಲ್ಲಿ ನಾಡಗೀತೆ ಹಾಡುವುದಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಆದೇಶವು ಖಾಸಗಿ ಶಾಲೆಗಳಿಗೂ ಅನ್ವಯವಾಗಲಿದೆಯೇ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ನಿರ್ದೇಶಿಸಿತ್ತು.

ಅದರಂತೆ ಬುಧವಾರ ಅರ್ಜಿ ವಿಚಾರಣೆಗೆ ಬಂದಾಗ ಸರ್ಕಾರಿ ವಕೀಲರು ಹಾಜರಾಗಿ, ಜನವರಿ 7ರ ಆದೇಶದಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಡಬೇಕು ಎಂದು ತಿಳಿಸಿತ್ತು. ಆ ಆದೇಶವನ್ನು ಫೆಬ್ರವರಿ 16ರಂದು ಹಿಂಪಡೆಯಲಾಗಿದೆ. ಫೆಬ್ರವರಿ 21ರಂದು ಮತ್ತೊಂದು ತಿದ್ದುಪಡಿ ಆದೇಶ ಹೊರಡಿಸಿದ್ದು, ಅದರಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ ಶಾಲೆಗಳಲ್ಲಿ ದೈನದಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ನಾಡಗೀತೆಯನ್ನು ಹಾಡಬೇಕು ಎಂದು ಹೇಳಲಾಗಿದೆ ಎಂದು ತಿಳಿಸಿ ಆ ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

Related Stories

No stories found.
Kannada Bar & Bench
kannada.barandbench.com