ನಾಡೋಜ ನ್ಯಾಯಮೂರ್ತಿ ಎಸ್ ಆರ್ ನಾಯಕ್ ಇನ್ನಿಲ್ಲ

ಮೃತರ ಅಂತ್ಯಕ್ರಿಯೆ ಸೋಮವಾರ (ಮೇ 19) ಸಂಜೆ 4 ಗಂಟೆಗೆ ಹೆಬ್ಬಾಳ ಚಿತಾಗಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಾಡೋಜ ನ್ಯಾಯಮೂರ್ತಿ ಎಸ್ ಆರ್ ನಾಯಕ್ ಇನ್ನಿಲ್ಲ
Published on

ನಾಡೋಜ ಗೌರವಕ್ಕೆ ಪಾತ್ರರಾಗಿದ್ದ ಕರ್ನಾಟಕ ಹೈಕೋರ್ಟ್ ನಿವೃತ್ತ ಹಂಗಾಮಿ ಮುಖ್ಯ ನ್ಯಾಯಮೂರ್ತಿ, ಛತ್ತೀಸ್ ಗಢ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಕಾನೂನು ಆಯೋಗದ ಮಾಜಿ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಎಸ್.ಆರ್.ನಾಯಕ್ (80) ಭಾನುವಾರ ಮಧ್ಯಾಹ್ನ‌ 2.18ಕ್ಕೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಶಾಲಿನಿ ಎಸ್.ನಾಯಕ್, ಪುತ್ರ ಡಾ.ಎನ್.ಎಸ್.ನಾಯಕ್, ಪುತ್ರಿ ನಿಶಾ ಗಾಂವ್ಕರ್ ಹಾಗೂ ಬಂಧು ವರ್ಗವನ್ನು ಅಗಲಿದ್ದಾರೆ.

"ಅಂತ್ಯಕ್ರಿಯೆ ಸೋಮವಾರ (ಮೇ 19) ಸಂಜೆ 4 ಗಂಟೆಗೆ ಹೆಬ್ಬಾಳ ಚಿತಾಗಾರದಲ್ಲಿ ನೆರವೇರಲಿದೆ. ಆರ್.ಎಂ.ವಿ ಎರಡನೇ ಹಂತದ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಮಧ್ಯಾಹ್ನ 1 ಗಂಟೆಯವರೆಗೂ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕುಮಟಾ ತಾಲ್ಲೂಕಿನ ನಾಡಮ್ಯಾಸಕೇರಿ ಗ್ರಾಮದಲ್ಲಿ ಕೃಷಿಕ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ 1945ರ ಜನವರಿ 1ರಂದು ಎಸ್.ಆರ್.ನಾಯಕ್ ಜನಿಸಿದ್ದರು.

Also Read
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನ್ಯಾ. ಎಲ್ ನಾರಾಯಣಸ್ವಾಮಿ ನೇಮಕ

ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಮತ್ತು ಕಾನೂನು ವಿಭಾಗದಲ್ಲಿಯೇ ಸ್ನಾತಕೋತ್ತರ ಪದವಿ ಪಡೆದಿದ್ದ ನಾಯಕ್ ಅವರು ಕಾನೂನು ಲೋಕದ ಮಹತ್ವದ ವಕೀಲರಾದ ಎಂ.ಗೋಪಾಲಕೃಷ್ಣ ಶೆಟ್ಟಿ ನಂತರ ಎಲ್ ಜಿ ಹಾವನೂರು ಅವರ ಬಳಿ ಕಿರಿಯ ವಕೀಲರಾಗಿ ವೃತ್ತಿ ಪ್ರಾವೀಣ್ಯ ಸಾಧಿಸಿದರು.

ಕೆಲ ಕಾಲ ಬೆಂಗಳೂರಿನ ಬಿಎಂಎಸ್ ಮತ್ತು ಎಸ್ ಎಲ್ ಎಸ್ ಆರ್ ಸಿ ಹಾವನೂರು ಕಾನೂನು ಕಾಲೇಜುಗಳಲ್ಲಿ ಅರೆಕಾಲಿಕ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು‌.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ 1994ರ ಫೆಬ್ರುವರಿ 25ರಂದು ನೇಮಕಗೊಂಡ ಅವರು ನಂತರ ಆಂಧ್ರಪ್ರದೇಶ ಹೈಕೋರ್ಟ್ ಗೆ ವರ್ಗಾವಣೆಗೊಂಡಿದ್ದರು. ಆಂಧ್ರಪ್ರದೇಶ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ನಂತರ ಛತ್ತೀಸ್ ಗಢ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದರು‌.

Kannada Bar & Bench
kannada.barandbench.com